ವಿದೇಶಿ ಕೋಚ್ ನೇಮಕಕ್ಕೆ ಸರಕಾರ ನೆರವು: ಗೋಯೆಲ್

Update: 2016-11-10 17:28 GMT

ಹೊಸದಿಲ್ಲಿ, ನ.10: ‘‘2022ರ ಒಲಿಂಪಿಕ್ಸ್ ಕೂಟವನ್ನು ದೃಷ್ಟಿಯಲ್ಲಿಟ್ಟುಕೊಂಡು ಕ್ರೀಡಾಪಟುಗಳೊಂದಿಗೆ ಚಿಂತನ್ ಬೈಠಕ್‌ನ್ನು ಏರ್ಪಡಿಸಲಾಗಿದೆ. ಒಲಿಂಪಿಕ್ಸ್‌ಗೆ ಈಗಲೇ ತಯಾರಿ ನಡೆಸಬೇಕೆನ್ನುವ ಉದ್ದೇಶದಿಂದ ಸಭೆ ಕರೆಯಲಾಗಿದೆ. ನಮಗೆ ಹಲವು ಸಲಹೆಗಳು ಬಂದಿವೆ. ದೇಶದಲ್ಲಿ ಲಭ್ಯವಿರುವ ಮೂಲಭೂತ ಸೌಕರ್ಯಗಳ ಬಗ್ಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಸರಕಾರದಿಂದ ಅಗತ್ಯವಿರುವ ನೆರವು ನೀಡಲಾಗುವುದು. ವಿದೇಶೀ ಕೋಚ್‌ಗಳ ನೇಮಕಕ್ಕೂ ಸರಕಾರ ಸ್ಪಂದಿಸಲಿದೆ’’ ಎಂದು ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯೆಲ್ ಹೇಳಿದ್ದಾರೆ.

 ಕ್ರೀಡಾಪಟುಗಳಾದ ಶೂಟರ್ ಗಗನ್ ನಾರಂಗ್, ಮಾಜಿ ಹಾಕಿ ಆಟಗಾರರಾದ ವಿರೆನ್ ರಸ್ಕಿನ್ಹಾ ಹಾಗೂ ಜಾಗ್ಬಿರ್ ಸಿಂಗ್ ಹಾಗೂ ಸಾಯ್‌ನ ಮಾಜಿ ಪ್ರಧಾನ ನಿರ್ದೇಶಕರುಗಳೊಂದಿಗೆ ನಾಲ್ಕು ಗಂಟೆಗಳ ಕಾಲ ಕೇಂದ್ರ ಸಚಿವರು ಚಿಂತನ್ ಬೈಠಕ್ ನಡೆಸಿದರು.

 ‘‘ಇದೀಗ ಭಾರತದ ಕೋಚ್‌ಗಳಿಗೆ 50,000 ದಿಂದ 2 ಲಕ್ಷ ರೂ. ವೇತನ ನೀಡಲಾಗುತ್ತಿದೆ. ಫೆಡರೇಶನ್‌ಗಳು ವಿದೇಶಿ ಕೋಚ್‌ಗಳನ್ನು ಆಯ್ಕೆ ಮಾಡಬೇಕು. ಸೂಕ್ತ ಅಭ್ಯರ್ಥಿಯ ಆಯ್ಕೆಗೆ ಜಾಹೀರಾತು ನೀಡಲು ಕ್ರೀಡಾ ಸಚಿವಾಲಯ ಸದಾ ಸಿದ್ಧವಾಗಿದೆ. ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳು ಹೆಚ್ಚು ಜವಾಬ್ದಾರಿವಹಿಸಿಕೊಳ್ಳಬೇಕು. ಫೆಡರೇಶನ್‌ಗಳು ನಡೆಸುವ ಟೂರ್ನಿಗೆ ಸರಕಾರ ನೆರವು ನೀಡಲಿದೆ. ಆಯ್ಕೆ ಪ್ರಕ್ರಿಯೆ ಹಾಗೂ ಟೂರ್ನಿಯ ಆಯೋಜನೆಯ ಬಗ್ಗೆ ಫೆಡರೇಶನ್‌ಗಳು ಸರಕಾರಕ್ಕೆ ಮಾಹಿತಿ ನೀಡಬೇಕು. ಕ್ರೀಡಾ ಬಜೆಟ್‌ನ್ನು ದ್ವಿಗುಣಗೊಳಿಸಲು ವಿತ್ತ ಸಚಿವ ಅರುಣ್ ಜೇಟ್ಲಿಗೆ ಮನವಿ ಮಾಡುವೆ’’ ಎಂದು ಗೊಯೆಲ್ ತಿಳಿಸಿದರು.

ಇತ್ತೀಚೆಗೆ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಚೀನಾ ವಿರುದ್ಧ ಫೈನಲ್ ಪಂದ್ಯದಲ್ಲಿ 2-1 ಅಂತರದಿಂದ ರೋಚಕ ಜಯ ಸಾಧಿಸಿ ಪ್ರಶಸ್ತಿ ಜಯಿಸಿದ ದೀಪಿಕಾ ನಾಯಕತ್ವದ ಭಾರತೀಯ ಮಹಿಳಾ ತಂಡಕ್ಕೆ ಕ್ರೀಡಾ ಸಚಿವಾಲಯ ಗುರುವಾರ ಇಲ್ಲಿ ಸನ್ಮಾನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News