×
Ad

ಝಿಂಬಾಬ್ವೆ ವಿರುದ್ಧ ಟೆಸ್ಟ್ ಸರಣಿ ಕ್ಲೀನ್‌ಸ್ವೀಪ್ ಗೈದ ಶ್ರೀಲಂಕಾ

Update: 2016-11-10 23:01 IST

ಹರಾರೆ, ನ.10: ರಂಗನ ಹೆರಾತ್ ಉರುಳಿಸಿದ 13 ವಿಕೆಟ್‌ಗಳ ನೆರವಿನಿಂದ ಶ್ರೀಲಂಕಾ ತಂಡ ಝಿಂಬಾಬ್ವೆ ವಿರುದ್ಧದ ಎರಡನೆ ಟೆಸ್ಟ್ ಪಂದ್ಯವನ್ನು 257 ರನ್‌ಗಳ ಅಂತರದಿಂದ ಗೆದ್ದುಕೊಂಡಿತು. ಈ ಮೂಲಕ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕ್ಲೀನ್‌ಸ್ವೀಪ್ ಮಾಡಿತು.

ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಗುರುವಾರ ನಡೆದ ಅಂತಿಮ ದಿನದಾಟದಲ್ಲಿ ಪ್ರವಾಸಿ ಶ್ರೀಲಂಕಾದ ಗೆಲುವಿಗೆ 3 ವಿಕೆಟ್‌ಗಳ ಅಗತ್ಯವಿತ್ತು. ಒಂದು ಗಂಟೆಯೊಳಗೆ ಝಿಂಬಾಬ್ವೆಯ ಅಂತಿಮ ಮೂರು ವಿಕೆಟ್‌ಗಳನ್ನು ಕಬಳಿಸಿದ ಹೆರಾತ್ ಎರಡನೆ ಇನಿಂಗ್ಸ್‌ನಲ್ಲಿ 63 ರನ್‌ಗೆ 8 ವಿಕೆಟ್‌ಗಳನ್ನು ಉರುಳಿಸಿದರು. ಝಿಂಬಾಬ್ವೆಯನ್ನು 2ನೆ ಇನಿಂಗ್ಸ್‌ನಲ್ಲಿ 233 ರನ್‌ಗೆ ಆಲೌಟ್ ಮಾಡಿದರು.

ಶ್ರೀಲಂಕಾದ ಹಂಗಾಮಿ ಟೆಸ್ಟ್ ನಾಯಕ ಹೆರಾತ್ 2ನೆ ಟೆಸ್ಟ್ ಪಂದ್ಯದಲ್ಲಿ 152 ರನ್‌ಗೆ ಒಟ್ಟು 13 ವಿಕೆಟ್‌ಗಳನ್ನು ಕಬಳಿಸಿದರು. ಶ್ರೀಲಂಕಾ ನ.2 ರಂದು ನಡೆದಿದ್ದ ಮೊದಲ ಟೆಸ್ಟ್ ಪಂದ್ಯವನ್ನು 225 ರನ್‌ಗಳ ಅಂತರದಿಂದ ಗೆದ್ದುಕೊಂಡಿತ್ತು.

491 ರನ್ ಕಠಿಣ ಗುರಿ ಪಡೆದಿದ್ದ ಝಿಂಬಾಬ್ವೆ 7 ವಿಕೆಟ್ ನಷ್ಟಕ್ಕೆ 180 ರನ್‌ನಿಂದ ಕೊನೆಯ ದಿನದಾಟವನ್ನು ಮುಂದುವರಿಸಿತು. ಅಜೇಯ 65 ರನ್ ಗಳಿಸಿದ್ದ ಕ್ರೆಗ್ ಎರ್ವಿನ್ ಝಿಂಬಾಬ್ವೆಯ ಆಶಾಕಿರಣವಾಗಿದ್ದರು. ಆದರೆ, ಎಡಗೈ ಬ್ಯಾಟ್ಸ್‌ಮನ್ ದಿನದ ಆರಂಭದಲ್ಲಿ ಹೆರಾತ್ ಎಸೆತದಲ್ಲಿ 72 ರನ್ ಗಳಿಸಿ ಔಟಾದರು.

ಎಡಗೈ ಸ್ಪಿನ್ನರ್ ಹೆರಾತ್ ಅವರು ಕಾರ್ಲ್ ಮುಂಬಾರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಕ್ರಿಸ್ ಮೊಪೊಫು 2 ಭರ್ಜರಿ ಸಿಕ್ಸರ್ ಸಿಡಿಸಿ ಮನರಂಜನೆ ನೀಡಿದರು.

ಉಭಯ ತಂಡಗಳು ಸೋಮವಾರ ಆರಂಭವಾಗಲಿರುವ ತ್ರಿಕೋನ ಏಕದಿನ ಅಂತಾರಾಷ್ಟ್ರೀಯ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಸರಣಿಯಲ್ಲಿ ವೆಸ್ಟ್‌ಇಂಡೀಸ್ ತಂಡ ಭಾಗವಹಿಸಲಿದೆ.

ಸಂಕ್ಷಿಪ್ತ ಸ್ಕೋರ್

ಶ್ರೀಲಂಕಾ ಪ್ರಥಮ ಇನಿಂಗ್ಸ್: 504

ಶ್ರೀಲಂಕಾ ದ್ವಿತೀಯ ಇನಿಂಗ್ಸ್: 258/9 ಡಿಕ್ಲೇರ್

ಝಿಂಬಾಬ್ವೆ ಪ್ರಥಮ ಇನಿಂಗ್ಸ್: 272

ಝಿಂಬಾಬ್ವೆ ದ್ವಿತೀಯ ಇನಿಂಗ್ಸ್:

58 ಓವರ್‌ಗಳಲ್ಲಿ 233

(ಎರ್ವಿನ್ 72, ವಿಲಿಯಮ್ಸ್ 45, ಹೆರಾತ್ 8/63)

ಪಂದ್ಯಶ್ರೇಷ್ಠ: ರಂಗನ ಹೆರಾತ್

ಸರಣಿಶ್ರೇಷ್ಠ: ಕರುಣರತ್ನೆ

..................

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News