×
Ad

ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್ ಮೇಲುಗೈ

Update: 2016-11-12 14:35 IST
ಚೊಚ್ಚಲ ಅರ್ಧ  ಶತಕ ದಾಖಲಿಸಿದ  ಇಂಗ್ಲೆಂಡ್ ನ ಯುವ ದಾಂಡಿಗ ಹಸೀಬ್ ಹಮೀದ್

 ರಾಜ್‌ಕೋಟ್, ನ.12: ಇಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತ ವಿರುದ್ಧ ಇಂಗ್ಲೆಂಡ್ ಮೇಲುಗೈ ಸಾಧಿಸಿದೆ.
 ಟೆಸ್ಟ್‌ನ ನಾಲ್ಕನೆ ದಿನವಾಗಿರುವ ಶನಿವಾರ ಆಟ ಕೊನೆಗೊಂಡಾಗ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೆ 37 ಓವರ್‌ಗಳಲ್ಲಿ 114 ರನ್ ಗಳಿಸಿದೆ.
ಆರಂಭಿಕ ದಾಂಡಿಗರಾದ ನಾಯಕ ಅಲೆಸ್ಟೈರ್ ಕುಕ್ 46 ರನ್( 107ಎ, 3ಬೌ) ಮತ್ತು ಯುವ ದಾಂಡಿಗ ಹಸೀಬ್ ಹಮೀದ್ 62 ರನ್(116ಎ, 5ಬೌ,1ಸಿ) ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು.
 ಇಂಗ್ಲೆಂಡ್ 163 ರನ್‌ಗಳ ಮುನ್ನಡೆ ಸಾಧಿಸಿದೆ. ರವಿವಾರ ಟೆಸ್ಟ್‌ನ ಅಂತಿಮ ದಿನವಾಗಿದ್ದು, ಟೆಸ್ಟ್ ಡ್ರಾದತ್ತ ಮುಖ ಮಾಡಿದೆ.
ಚೊಚ್ಚಲ ಟೆಸ್ಟ್ ಆಡುತ್ತಿರುವ ಇಂಗ್ಲೆಂಡ್‌ನ ಯುವ ದಾಂಡಿಗ ಹಸೀಬ್ ಹಮೀದ್ ಮೊದಲ ಅರ್ಧಶತಕ ದಾಖಲಿಸಿ ಬ್ಯಾಟಿಂಗ್‌ನ್ನು ನಾಯಕ ಕುಕ್ ಜೊತೆ ಅಂತಿಮ ದಿನಕ್ಕೆ ಕಾಯ್ದಿರಿಸಿದ್ದಾರೆ. ಭಾರತದ ಬೌಲರ್‌ಗಳು ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಎಡವಿದ್ದಾರೆ. ಇವರು ಭಾರತದ ಬೌಲರ್‌ಗಳನ್ನು ದಂಡಿಸಿ ಶತಕದ ಜೊತೆಯಾಟ ನೀಡಿದ್ದಾರೆ.
ಸುದೀರ್ಘ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡಕ್ಕೆ ತಂಡದ ದಾಂಡಿಗರ ಪ್ರದರ್ಶನವು ನಂ.1 ಟೆಸ್ಟ್ ತಂಡವಾಗಿರುವ ಭಾರತದ ವಿರುದ್ಧ ಉತ್ತಮ ಪ್ರದರ್ಶನ ಮುಂದುವರಿಸಲು ಮೊದಲ ಟೆಸ್ಟ್ ಅವಕಾಶ ಮಾಡಿಕೊಟ್ಟಿದೆ.
ಭಾರತ 488ಕ್ಕೆ ಆಲೌಟ್: ಭಾರತದ ಬ್ಯಾಟಿಂಗ್ ಇಂದು ನಿರೀಕ್ಷೆಯಂತೆ ಕಂಡು ಬರಲಿಲ್ಲ. ರವಿಚಂದ್ರನ್ ಅಶ್ವಿನ್ ಸಿಡಿಸಿದ ಆಕರ್ಷಕ 70ರನ್‌ಗಳ ನೆರವಿನಿಂದ ಭಾರತ ಮೊದಲ ಇನಿಂಗ್ಸ್‌ನಲ್ಲಿ 162 ಓವರ್‌ಗಳಲ್ಲಿ 488 ರನ್‌ಗಳನ್ನು ಗಳಿಸಿದ್ದರೂ, ಇಂಗ್ಲೆಂಡ್‌ನ ಮೊತ್ತವನ್ನು ಸರಿಗಟ್ಟುವಲ್ಲಿ ಎಡವಿತು. ಇಂಗ್ಲೆಂಡ್49 ರನ್‌ಗಳ ಮೇಲುಗೈ ಸಾಧಿಸಿತು.
ಮೂರನೆ ದಿನದಾಟದಂತ್ಯಕ್ಕೆ ಭಾರತ 4 ವಿಕೆಟ್ ನಷ್ಟದಲ್ಲಿ 319 ರನ್ ಗಳಿಸಿತ್ತು. ಈ ಮೊತ್ತಕ್ಕೆ ಇಂದು 169 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ. ಏಳನೆ ವಿಕೆಟ್‌ಗೆ ಅಶ್ವಿನ್ ಮತ್ತು ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ 64 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.
  ಅಶ್ವಿನ್ 199 ನಿಮಿಷಗಳ ಬ್ಯಾಟಿಂಗ್‌ನಲ್ಲಿ 139 ಎಸೆತಗಳನ್ನು ಎದುರಿಸಿದರು. 7 ಬೌಂಡರಿಗಳ ಸಹಾಯದಿಂದ 70 ರನ್ ಗಳಿಸಿ ಔಟಾಗುವುದರೊಂದಿಗೆ ಭಾರತ ಮೊದಲ ಇನಿಂಗ್ಸ್ ಮುಗಿಸಿತ್ತು. ಅಶ್ವಿನ್ ಮತ್ತು ಮುಹಮ್ಮದ್ ಶಮಿ ಅಂತಿಮ ವಿಕೆಟ್‌ಗೆ 49 ರನ್‌ಗಳ ಜೊತೆಯಾಟ ನೀಡಿದ್ದರು. ಅಶ್ವಿನ್ ಶತಕದ ನಿರೀಕ್ಷೆಯಲ್ಲಿದ್ದರು. ಆದರೆ ಅಲಿ ಇದಕ್ಕೆ ಅವಕಾಶ ನೀಡಲಿಲ್ಲ.
 ನಿನ್ನೆ 26 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ತನ್ನ ವೈಯಕ್ತಿಕ ಸ್ಕೋರ್‌ನ್ನು 40ಕ್ಕೆ ಏರಿಸಿದರು. ಬಳಿಕ ಅವರು ಹಿಟ್ ವಿಕೆಟ್ ಆಗಿ ಪೆವಿಲಿಯನ್ ಸೇರಿದರು. ಔಟಾಗುವ ಮೊದಲು ಕೊಹ್ಲಿ ಅವರು 95 ಎಸೆತಗಳನ್ನು ಎದುರಿಸಿದ್ದರು. 5 ಬೌಂಡರಿಗಳನ್ನು ಸಿಡಿಸಿದ್ದರು.
ಇಂಗ್ಲೆಂಡ್‌ನ ತ್ರಿವಳಿ ಸ್ಪಿನ್ನರ್‌ಗಳಾದ ಲೆಗ್ ಸ್ಪಿನ್ನರ್ ಆದಿಲ್ ರಶೀದ್ 114ಕ್ಕೆ 4 ವಿಕೆಟ್, ಆಫ್ ಸ್ಪಿನ್ನರ್ ಮೊಯಿನ್ ಅಲಿ 85ಕ್ಕೆ 2, ಮತ್ತು ಎಡಗೈ ಸ್ಪಿನ್ನರ್ ಜಾಫರ್ ಅನ್ಸಾರಿ 77ಕ್ಕೆ 2 ವಿಕೆಟ್ ಉಡಾಯಿಸಿದರು.
ವೇಗದ ಬೌಲರ್‌ಗಳಾದ ಸ್ಟುವರ್ಟ್ ಬ್ರಾಡ್(78ಕ್ಕೆ 1) ಮತ್ತು ಬೆನ್ ಸ್ಟೋಕ್ಸ್(52ಕ್ಕೆ 1) ತಲಾ ಒಂದು ವಿಕೆಟ್ ಹಂಚಿಕೊಂಡರು.

 ಇಂದು ಆಟ ಮುಂದುವರಿಸಿದ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಐದನೆ ವಿಕೆಟ್‌ಗೆ ಜೊತೆಯಾಟದಲ್ಲಿ 30 ರನ್‌ಗಳ ಕೊಡುಗೆ ನೀಡಿದರು. ಆಟ ಆರಂಭಗೊಂಡು 40 ನಿಮಿಷಗಳಾಗುವಷ್ಟರಲ್ಲಿ ಅನ್ಸಾರಿ ಅವರು ರಹಾನೆಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಇಂಗ್ಲೆಂಡ್‌ಗೆ ಮೊದಲ ಯಶಸ್ಸು ತಂದು ಕೊಟ್ಟರು. ಬಳಿಕ ಕೊಹ್ಲಿ ಹಿಟ್ ವಿಕೆಟ್ ಆಗಿ ಪೆವಿಲಿಯನ್ ಸೇರಿದಾಗ ಇಂಗ್ಲೆಂಡ್ ಪಾಳಯದಲ್ಲಿ ಗೆಲುವಿನ ಸಂಭ್ರಮ ಮೂಡಿತ್ತು.

ಕೊಹ್ಲಿ ಮೊದಲ ನಾಯಕ: 65 ವರ್ಷಗಳ ಭಾರತ ಕ್ರಿಕೆಟ್ ಇತಿಹಾಸದಲ್ಲಿ ಹಿಟ್ ವಿಕೆಟ್ ಆಗಿ ನಿರ್ಗಮಿಸಿದ ಮೊದಲ ನಾಯಕ ಕೊಹ್ಲಿ. ಅವರು ರಶೀದ್ ಎಸೆತವನ್ನು ಎದುರಿಸಲು ಎಡಗಾಲನ್ನು ಹಿಂದಕ್ಕೆ ಇಟ್ಟಾಗ ಅವರ ಕಾಲು ಸ್ಟಂಪ್‌ನ್ನು ಸ್ಪರ್ಶಿಸಿತು. ಇದರೊಂದಿಗೆ ಕೊಹ್ಲಿ ಈ ರೀತಿ ಔಟಾದ ಭಾರತದ ಎರಡನೆ ನಾಯಕ ಎನಿಸಿಕೊಂಡರು. ಚೆನ್ನೈನ ಚಿಪಾಕ್ ಸ್ಟೇಡಿಯಂನಲ್ಲಿ 1948-49ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ ಲಾಲಾ ಅಮರನಾಥ್ ಅವರು ಟ್ರೆವೊರ್ ಗೊಡ್ಡಾರ್ಡ್ ಎಸೆತವನ್ನು ಎದುರಿಸಲು ಹೋಗಿ ಇದೇ ರೀತಿ ಔಟಾಗಿದ್ದರು.
ಕೊಹ್ಲಿ ಮೊದಲ ಬಾರಿ ಈ ರೀತಿ ಔಟಾಗಿದ್ದಾರೆ. ಹಿಟ್ ವಿಕೆಟ್ ಆಗಿ ನಿರ್ಗಮಿಸಿದ ಭಾರತದ ದಾಂಡಿಗರ ಸಂಖ್ಯೆ 22ಕ್ಕೆ ಏರಿದೆ.

ಲಾಲಾ ಅಮರನಾಥ್ ಪುತ್ರ ಮೊಹಿಂದರ್ ಅಮರನಾಥ್ 3 ಬಾರಿ ಮತ್ತು ವಿವಿಎಸ್ ಲಕ್ಷ್ಮಣ್ ಒಂದು ಬಾರಿ ಹಿಟ್ ವಿಕೆಟ್ ಮೂಲಕ ಔಟಾಗಿದ್ದರು. ರಹಾನೆ ಕಡಿಮೆ ಮೊತ್ತಕ್ಕೆ ನಿರ್ಗಮಿಸಿದ್ದರೂ, ಅಶ್ವಿನ್ ಮತ್ತು ಸಹಾ 99 ನಿಮಿಷಗಳ ಜೊತೆಯಾಟ ಅರ್ಧಶತಕದ ಕೊಡುಗೆ ನೀಡಿ ಇಂಗ್ಲೆಂಡ್‌ನ ಬೌಲರ್‌ಗಳ ಬೆವರಳಿಸಿದರು. ಅಶ್ವಿನ್ 40ನೆ ಟೆಸ್ಟ್‌ನಲ್ಲಿ 7ನೆ ಅರ್ಧಶತಕ ದಾಖಲಿಸಿದರು. ರವೀಂದ್ರ ಜಡೇಜ 12 ರನ್, ಉಮೇಶ್ ಯಾದವ್ 5 ರನ್ ಮತ್ತು ಮುಹಮ್ಮದ್ ಶಮಿ ಔಟಾಗದೆ 8 ರನ್ ಗಳಿಸಿದರು.
 
  ಕುಕ್‌ಗೆ ಜೀವದಾನ: ಇಂಗ್ಲೆಂಡ್‌ಗೆ ಎರಡನೆ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಭಾರತದ ಸ್ಪಿನ್ನರ್‌ಗಳು ಮತ್ತು ವೇಗದ ಬೌಲರ್‌ಗಳು ಅಡ್ಡಿಪಡಿಸಲಿಲ್ಲ. ಆದರೆ ಕುಕ್ 7 ರನ್ ಗಳಿಸಿದ್ದಾಗ ಶಮಿ ಎಸೆತದಲ್ಲಿ ಔಟಾಗುವ ಅವಕಾಶ ಇತ್ತು. ಚೇತೇಶ್ವರ ಪೂಜಾರ ಕ್ಯಾಚ್ ಪಡೆಯುವ ಯತ್ನ ನಡೆಸಿದ್ದರು. ಆದರೆ ಅವರಿಗೆ ಸಾಧ್ಯವಾಗಲಿಲ್ಲ. ಚೊಚ್ಚಲ ಟೆಸ್ಟ್ ಆಡುತ್ತಿರುವ 19ರ ಹರೆಯದ ಹಮೀದ್ ಚೊಚ್ಚಲ ಅರ್ಧಶತಕ ದಾಖಲಿಸುವ ಮೊದಲು ಒಂದು ಬಾರಿ ತೊಂದರೆ ಅನುಭವಿಸಿದ್ದರು. ಅಶ್ವಿನ್ ಎಸೆತದಲ್ಲಿ ಚೆಂಡು ಅವರ ಪ್ಯಾಡ್‌ಗೆ ಬಡಿದಿತ್ತು. ಆದರೆ ಡಿಆರ್‌ಎಸ್ ಅವರಿಗೆ ವರದಾನವಾಗಿ ಪರಿಣಮಿಸಿತು. ಮೊದಲ ಇನಿಂಗ್ಸ್‌ನಲ್ಲಿ ಹಮೀದ್ 31 ರನ್ ಗಳಿಸಿದ್ದಾಗ ಅವರನ್ನು ಅಶ್ವಿನ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದ್ದರು. ಇನ್ನೊಂದು ಬಾರಿ ಅದೇ ರೀತಿ ಔಟಾಗುವ ಅವಕಾಶದಿಂದ ಹಮೀದ್ ಪಾರಾದರು.
ಭಾರತದ ಬೌಲರ್‌ಗಳು 37 ಓವರ್‌ಗಳಲ್ಲಿ 114 ರನ್ ನೀಡಿ ಕೈಸುಟ್ಟುಕೊಂಡರು.
,,,,,,,,,,,,
ಅಂಕಿ -ಅಂಶ
*13: ಭಾರತ ತವರಿನಲ್ಲಿ ಸತತ 13 ಟೆಸ್ಟ್‌ಗಳಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿತ್ತು. ಇದೀಗ 14ನೆ ಬಾರಿ ಇನಿಂಗ್ಸ್ ಮುನ್ನಡೆ ಸಾಧಿಸುವಲ್ಲಿ ಎಡವಿದೆ. ಇಂಗ್ಲೆಂಡ್ ವಿರುದ್ಧ 49 ರನ್‌ಗಳ ಹಿನ್ನಡೆ ಅನುಭವಿಸಿದೆ.
  *52.37: ಆರ್. ಅಶ್ವಿನ್ ಇಂಗ್ಲೆಂಡ್ ವಿರುದ್ಧ 52.37 ಸರಾಸರಿ ಹೊಂದಿದ್ದಾರೆ.ಇದರೊಂದಿಗೆ ಪ್ರಸ್ತುತ ಭಾರತ ತಂಡದಲ್ಲಿರುವ ಭಾರತದ ದಾಂಡಿಗರಲ್ಲಿ ಅಶ್ವಿನ್ ಉತ್ತಮ ಸರಾಸರಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
 *3: ಹಮೀದ್ ಚೊಚ್ಚಲ ಟೆಸ್ಟ್‌ನಲ್ಲಿ ಅರ್ಧಶತಕ ದಾಖಲಿಸಿದ ಇಂಗ್ಲೆಂಡ್‌ನ 3ನೆ ಯುವ ದಾಂಡಿಗ.
*4: ಅಲೆಸ್ಟೈರ್ ಕುಕ್ 4ನೆ ಬಾರಿ ಭಾರತದ ವಿರುದ್ಧ ಶತಕದ ಜೊತೆಯಾಟ ನೀಡಿದ್ದಾರೆ.
*26.19: ಭಾರತ ದಾಂಡಿಗರು ಏಳನೆ ವಿಕೆಟ್‌ಗೆ ಕಳೆದ ಒಂದು ವರ್ಷದ ಅವಧಿಯಲ್ಲಿ 26.19 ಸರಾಸರಿ ರನ್ ದಾಖಲಿಸಿದ್ದಾರೆ. ಇದು ಉಳಿದ ತಂಡದ ಆಟಗಾರರಿಗಿಂತ ಉತ್ತಮ ಸಾಧನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News