×
Ad

ನನ್ನ ಭಾರತ ಭೇಟಿ ಉದ್ವಿಗ್ನತೆ ಶಮನ ಮಾಡಬಹುದು : ಸರ್ತಾಝ್ ಅಝೀಝ್

Update: 2016-11-16 19:36 IST

ಇಸ್ಲಾಮಾಬಾದ್, ನ. 16: ಭಾರತದಲ್ಲಿ ನಡೆಯಲಿರುವ ‘ಹಾರ್ಟ್ ಆಫ್ ಏಶ್ಯ’ ಸಮ್ಮೇಳನದಲ್ಲಿ ಭಾಗವಹಿಸುವುದಾಗಿ ಪಾಕಿಸ್ತಾನದ ಉನ್ನತ ವಿದೇಶ ನೀತಿ ಅಧಿಕಾರಿ ಸರ್ತಾಝ್ ಅಝೀಝ್ ಹೇಳಿದ್ದಾರೆ. ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಶಮನ ಮಾಡಲು ತನ್ನ ಈ ಭೇಟಿಯನ್ನು ಬಳಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
 ಸೆಪ್ಟಂಬರ್‌ನಲ್ಲಿ ಕಾಶ್ಮೀರದ ಉರಿಯಲ್ಲಿರುವ ಸೇನಾ ನೆಲೆಯ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 19 ಸೈನಿಕರು ಮೃತಪಟ್ಟ ಬಳಿಕ, ಪಾಕಿಸ್ತಾನದ ಉನ್ನತ ಸ್ತರದ ನಾಯಕರೊಬ್ಬರು ಭಾರತಕ್ಕೆ ನೀಡುವ ಪ್ರಥಮ ಭೇಟಿ ಇದಾಗಲಿದೆ.

ಸೈನಿಕರ ಹತ್ಯೆಯ ಬಳಿಕ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಉದ್ವಿಗ್ನತೆ ತಲೆದೋರಿದೆ.
‘‘ಉದ್ವಿಗ್ನತೆಯನ್ನು ಬಗೆಹರಿಸಲು ಇದೊಂದು ಉತ್ತಮ ಅವಕಾಶ’’ ಎಂದು ಪಾಕಿಸ್ತಾನ ಪ್ರಧಾನಿಯ ವಿದೇಶ ವ್ಯವಹಾರಗಳ ಸಲಹಾಕಾರರಾಗಿರುವ ಅಝೀಝ್ ಸರಕಾರಿ ಒಡೆತನದ ‘ಪಿಟಿವಿ’ಗೆ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನಗಳ ಗಡಿಯಲ್ಲಿ ಉಭಯ ಸೇನೆಗಳ ನಡುವೆ ಈಗ ಭಾರೀ ಪ್ರಮಾಣದಲ್ಲಿ ದಾಳಿ ಮತ್ತು ಪ್ರತಿದಾಳಿಗಳು ನಡೆಯುತ್ತಿವೆ.
ಭಾರತ ನಡೆಸಿರುವ ಶೆಲ್ ದಾಳಿಯಲ್ಲಿ ತನ್ನ ಏಳು ಸೈನಿಕರು ಮೃತಪಟ್ಟಿದ್ದಾರೆ ಎಂಬುದಾಗಿ ಪಾಕಿಸ್ತಾನ ಸೋಮವಾರ ಹೇಳಿರುವುದನ್ನು ಸ್ಮರಿಸಬಹುದಾಗಿದೆ.
ಅಫ್ಘಾನಿಸ್ತಾನದ ಬಗ್ಗೆ ವಿಶೇಷವಾಗಿ ಗಮನಹರಿಸುವ ಹಾರ್ಟ್ ಆಫ್ ಕಾನ್ಫರೆನ್ಸ್ ಸಮ್ಮೇಳನ ಅಮೃತಸರದಲ್ಲಿ ಡಿಸೆಂಬರ್ 3 ಮತ್ತು 4ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News