ವಿದ್ಯಾರ್ಥಿನಿಯ ಹಿಜಾಬ್ ಹರಿದು ಕೂದಲು ಎಳೆದ ವಿದ್ಯಾರ್ಥಿ
ಶಿಕಾಗೊ, ನ. 16: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಜಯ ಗಳಿಸಿದ ಬಳಿಕ ಆ ದೇಶದಲ್ಲಿ ಹಿಜಾಬ್‌ಧಾರಿ ಮುಸ್ಲಿಮ್ ಮಹಿಳೆಯರ ವಿರುದ್ಧ ದಿನನಿತ್ಯವೆಂಬಂತೆ ಹಲ್ಲೆಗಳು ನಡೆಯುತ್ತಿವೆ.
ಮಿನಸೋಟ ರಾಜ್ಯದ ಶಾಲೆಯೊಂದರಲ್ಲಿ ನಡೆದ ಇತ್ತೀಚಿನ ಘಟನೆಯಲ್ಲಿ, ವಿದ್ಯಾರ್ಥಿಯೊಬ್ಬ ತನ್ನದೇ ತರಗತಿಯ ಮುಸ್ಲಿಮ್ ವಿದ್ಯಾರ್ಥಿನಿಯೊಬ್ಬಳ ಹಿಜಾಬ್ ಹರಿದು ತಲೆಗೂದಲನ್ನು ಎಳೆದಾಡಿದ್ದಾನೆ.
ಮಿನಸೋಟ ರಾಜ್ಯದ ಕೂನ್ ರ್ಯಾಪಿಡ್ಸ್‌ನಲ್ಲಿರುವ ನಾರ್ತ್‌ಡೇಲ್ ಮಿಡಲ್ ಸ್ಕೂಲ್‌ನಲ್ಲಿ ಘಟನೆ ನಡೆದಿದೆ. ಘಟನೆಯ ಬಗ್ಗೆ ಅನೋಕ-ಹೆನಪಿನ್ ಸ್ಕೂಲ್ ಡಿಸ್ಟ್ರಿಕ್ಟ್ ತನಿಖೆ ಆರಂಭಿಸಿದೆ.
ಶುಕ್ರವಾರ ನಡೆದ ಘಟನೆಗೆ ಶಾಲಾ ಆಡಳಿತ ಮಂಡಳಿಯ ಪ್ರತಿಕ್ರಿಯೆ ಬಗ್ಗೆ ಕೌನ್ಸಿಲ್ ಆನ್ ಅಮೆರಿಕನ್-ಇಸ್ಲಾಮಿಕ್ ರಿಲೇಶನ್ಸ್ (ಸಿಎಐಆರ್) ಕಳವಳ ವ್ಯಕ್ತಪಡಿಸಿದೆ.
ಸಹಪಾಠಿಯೊಬ್ಬ ವಿದ್ಯಾರ್ಥಿನಿಯ ಹಿಂದಿನಿಂದ ಬಂದು ಆಕೆಯ ಹಿಜಾಬನ್ನು ಎಳೆದು ನೆಲಕ್ಕೆ ಎಸೆದನು ಹಾಗೂ ಇತರ ವಿದ್ಯಾರ್ಥಿಗಳ ಮುಂದೆ ಆಕೆಯ ತಲೆಗೂದಲನ್ನು ಎಳೆದನು ಎಂದು ವಿದ್ಯಾರ್ಥಿನಿಯ ಸಂಬಂಧಿಕರು ಸಿಎಐಆರ್‌ಗೆ ಮಾಹಿತಿ ನೀಡಿದ್ದಾರೆ.
ಶಾಲಾ ಆಡಳಿತ ಮಂಡಳಿಯು ಮಂಗಳವಾರದವರೆಗೂ ಘಟನೆಯ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ‘ಸ್ಟಾರ್ ಟ್ರಿಬ್ಯೂನ್’ ವರದಿ ಮಾಡಿದೆ.