×
Ad

‘ಅತಿ’ ರಾಷ್ಟ್ರೀಯತೆ ವಿರುದ್ಧ ಒಬಾಮ ಎಚ್ಚರಿಕೆ

Update: 2016-11-16 19:52 IST

ಅಥೆನ್ಸ್, ನ. 16: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಮಂಗಳವಾರ ‘ಅತಿ’ ರಾಷ್ಟ್ರೀಯತೆ ಮನೋಭಾವದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ರ ಅಚ್ಚರಿಯ ವಿಜಯದ ಬಳಿಕ ಗೊಂದಲಕ್ಕೊಳಗಾಗಿರುವ ಮಿತ್ರದೇಶಗಳನ್ನು ಒಲಿಸಿಕೊಳ್ಳುವುದಕ್ಕಾಗಿ ಯುರೋಪ್ ಪ್ರವಾಸ ಕೈಗೊಂಡಿರುವ ವೇಳೆ ಗ್ರೀಸ್‌ನಲ್ಲಿ ಈ ಹೇಳಿಕೆ ನೀಡಿದ್ದಾರೆ.

‘ನ್ಯಾಟೊ’ ಒಕ್ಕೂಟ ಅಮೆರಿಕದ ಹಿತಾಸಕ್ತಿಗಳಿಗೆ ಅಗತ್ಯವಾಗಿದೆ ಎಂದು ಹೇಳಿರುವ ಒಬಾಮ, ಏಕೀಕೃತ ಹಾಗೂ ಬಲಿಷ್ಠ ಯುರೋಪ್ ಅಮೆರಿಕದ ಹಿತಕ್ಕೆ ಪೂರಕವಾಗಿದೆ ಎಂದು ಅಧ್ಯಕ್ಷನಾಗಿ ತನ್ನ ಕೊನೆಯ ವಿದೇಶ ಪ್ರವಾಸದ ವೇಳೆ ಒಬಾಮ ಹೇಳಿದರು.

ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಚುನಾವಣಾ ಪ್ರಚಾರದ ವೇಳೆ, ನ್ಯಾಟೊದ ಮಹತ್ವವನ್ನು ಕಡೆಗಣಿಸಿದ್ದರು.
‘‘ ‘ನಾವು’ ಮತ್ತು ‘ಅವರು’ ಎಂಬ ಕಲ್ಪನೆಗಳ ನಡುವೆ ಹುಟ್ಟಿಕೊಂಡಿರುವ ಅತಿ ರಾಷ್ಟ್ರೀಯತೆ ಅಥವಾ ಜನಾಂಗೀಯ ಅಸ್ಮಿತೆ ಅಥವಾ ಬುಡಕಟ್ಟು ಅಸ್ಮಿತೆಯ ಪ್ರವೃತ್ತಿ ಹೆಚ್ಚುತ್ತಿದೆ. ಇದರ ವಿರುದ್ಧ ನಾವು ಎಚ್ಚರಿಕೆಯಿಂದ ಇರಬೇಕಾಗಿದೆ’’ ಎಂದು ಅಥೆನ್ಸ್‌ನಲ್ಲಿ ಒಬಾಮ ಹೇಳಿದರು.

‘‘ಯರೋಪಿಯನ್ನರು ತಮ್ಮನ್ನು ತಾವು ವಿಭಜಿಸಿಕೊಂಡಾಗ ಏನು ಸಂಭವಿಸುತ್ತದೆ ಎಂಬುದನ್ನು ನಾವು 20ನೆ ಶತಮಾನದಲ್ಲಿ ನೋಡಿದ್ದೇವೆ. ಅದು ರಕ್ತಪಾತವಲ್ಲದೆ ಬೇರೇನೂ ಅಲ್ಲ’’ ಎಂದರು.

‘‘ನಮ್ಮನ್ನು ನಾವು ಜನಾಂಗೀಯ ಅಥವಾ ಧರ್ಮ ಅಥವಾ ವಂಶದ ಆಧಾರದಲ್ಲಿ ವಿಭಜಿಸಿಕೊಳ್ಳುವ’’ ಅಪಾಯಗಳ ಬಗ್ಗೆಯೂ ಅಮೆರಿಕಕ್ಕೆ ಅರಿವಿದೆ ಎಂದು ಅಮೆರಿಕದ ಅಧ್ಯಕ್ಷರು ನುಡಿದರು.
ನ್ಯಾಟೊ ದೇಶಗಳು ಹಣ ಕೊಟ್ಟರೆ ಮಾತ್ರ ತಾವು ಅವರಿಗೆ ರಕ್ಷಣೆ ನೀಡುತ್ತೇವೆ ಎಂಬುದಾಗಿ ಚುನಾವಣಾ ಪ್ರಚಾರದ ವೇಳೆ ಟ್ರಂಪ್ ಹೇಳಿದ್ದರು. ಈ ಹೇಳಿಕೆಯು ರಶ್ಯಕ್ಕೆ ಸಮೀಪದಲ್ಲಿರುವ ದೇಶಗಳಲ್ಲಿ ನಡುಕ ಹುಟ್ಟಿಸಿತ್ತು.

ಅದೇ ವೇಳೆ, ಅಥೆನ್ಸ್‌ನಲ್ಲಿ ಒಬಾಮರನ್ನು ಸ್ವಾಗತಿಸಿದ ನ್ಯಾಟೊ ಮುಖ್ಯಸ್ಥ ಜೆನ್ಸ್ ಸ್ಟಾಲ್ಟನ್‌ಬರ್ಗ್, ನ್ಯಾಟೊ ಮೈತ್ರಿಕೂಟಕ್ಕೆ ಅಮೆರಿಕ ಹೊಂದಿರುವ ಬದ್ಧತೆಯನ್ನು ಟ್ರಂಪ್ ಮಾನ್ಯ ಮಾಡುವರು ಎಂಬ ಭರವಸೆ ತನಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News