×
Ad

ಸೌದಿಯಲ್ಲಿ ಮನೆ-ಮನೆಗೆ ಹೋಗಿ ಪುಸ್ತಕ ಮಾರುವ ಭಾರತೀಯ!

Update: 2016-11-16 21:02 IST

ರಿಯಾದ್, ನ. 16: ಇಡೀ ಜಗತ್ತು ಆನ್‌ಲೈನ್ ಗುಂಗಿನಲ್ಲಿ ಮುಳುಗಿದಂತೆ ಭಾಸವಾಗುತ್ತಿರುವಾಗ, ಸೌದಿ ಅರೇಬಿಯದಲ್ಲಿರುವ ಈ ಭಾರತೀಯ ವ್ಯಕ್ತಿ ಕಳೆದು ಹೋದ ಯುಗದ ಪಳೆಯುಳಿಕೆಯಂತೆ ಕಂಡುಬರುತ್ತಾರೆ! ಅವರು ಮನೆ ಮನೆಗೆ ಹೋಗಿ ಪುಸ್ತಕವನ್ನು ಮಾರಾಟ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ.
ಭಾರತ ರಾಷ್ಟ್ರೀಯ ಜಾನ್ ಗುಂಟಿ ಸೌದಿ ರಾಜಧಾನಿ ರಿಯಾದ್‌ನ ವ್ಯಾಪಾರಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಮಾರು 25 ಕಿಲೋಗ್ರಾಂ ತೂಗುವ 22 ಸಂಪುಟಗಳ ವರ್ಲ್ಡ್ ಬುಕ್ ಎನ್‌ಸೈಕ್ಲೊಪೀಡಿಯವನ್ನು ಅವರು ಮನೆ ಮನೆಗೆ ಹೋಗಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ.

ತೈಲಾಧರಿತ ಅರ್ಥ ವ್ಯವಸ್ಥೆಯಲ್ಲಿ ಜನರು ಪ್ರತಿಯೊಂದು ವಿಷಯದಲ್ಲಿಯೂ ಉಳಿತಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ, ಮಾರುಕಟ್ಟೆ ಪರಿಸ್ಥಿತಿ ಕಠಿಣವಾಗಿದ್ದರೂ, ತನ್ನ ಅದೃಷ್ಟವನ್ನು ಅರಸುತ್ತಾ ಜಾನ್ ಸಾಗುತ್ತಿದ್ದಾರೆ. ‘‘ಮನೆ-ಮನೆಗೆ ಹೋಗಿ ಮಾರಾಟ ಮಾಡುವುದು ನನ್ನ ಪ್ರವೃತ್ತಿಯಾಗಿದೆ’’ ಎಂದು ಅವರು ಹೇಳುತ್ತಾರೆ.
ಇಂದಿನ ಇಂಟರ್‌ನೆಟ್ ಯುಗದಲ್ಲಿ ಬೇಕಾದ ಮಾಹಿತಿಯೆಲ್ಲವೂ ಬೆರಳ ತುದಿಯಲ್ಲಿ ಸಿಗುವಾಗ ಈ ಬೃಹತ್ ಸಂಪುಟಗಳನ್ನು ಯಾರು ಬಯಸುತ್ತಾರೆ?
ಇದಕ್ಕೆ ಅವರಲ್ಲಿ ಉತ್ತರ ಸಿದ್ಧವಾಗಿದೆ.

‘‘ನೀವು ನನಗೆ 100 ಪ್ರಶ್ನೆಗಳನ್ನು ಕೇಳಿ. ನಾನು ನಿಮ್ಮ 100 ಪ್ರಶ್ನೆಗಳಿಗೆ ಉತ್ತರಿಸುತ್ತೇನೆ’’ ಎಂದು 47 ವರ್ಷದ ಗುಂಟಿ ಹೇಳುತ್ತಾರೆ.
ಹನ್ನೊಂದು ವರ್ಷಗಳಿಂದ ಪುಸ್ತಕ ಮಾರಾಟ ಮಾಡುವ ವೃತ್ತಿಯಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.
‘‘ನೀವು ಒಂದು ಕಲ್ಲು ಮಾರಾಟ ಮಾಡಲು ಬಯಸಿದರೆ ಅದನ್ನು ಮಾರಾಟ ಮಾಡಬಹುದು. ನೀವು ಮರಳು ಮಾರಾಟ ಮಾಡಲು ಬಯಸಿದರೆ ಅದನ್ನೂ ಮಾರಬಹುದು. ನಿಮ್ಮ ಮನೋಭಾವ ಇಲ್ಲಿ ಮುಖ್ಯವಾಗುತ್ತದೆ. ನಾನು ಈ ಉತ್ಪನ್ನವನ್ನು ಮಾರಾಟ ಮಾಡಬೇಕಾಗಿದೆ’’ ಎಂದು ಅವರು ಹೇಳುತ್ತಾರೆ.
ಸೌದಿ ಅರೇಬಿಯದಲ್ಲಿ ತೈಲ ಆರ್ಥಿಕತೆ ಉಛ್ರಾಯ ಸ್ಥಿತಿಯಲ್ಲಿದ್ದ ಅವಧಿಯಲ್ಲಿ ಅವರು ತಿಂಗಳಿಗೆ ಐದು ಅಥವಾ ಆರು ಸೆಟ್ ಪುಸ್ತಕಗಳನ್ನು ಮಾರುತ್ತಿದ್ದರು.
ಈಗ ನೂರು ಮಂದಿಗೆ ವಿವರಣೆ ನೀಡಿದರೆ, ಅವರಲ್ಲಿ ಒಬ್ಬರು ಪುಸ್ತಕ ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News