ಟರ್ಕಿ: 73 ಶಿಕ್ಷಕರ ಬಂಧನ
ಇಸ್ತಾಂಬುಲ್, ನ. 18: ಅಮೆರಿಕದಲ್ಲಿ ನೆಲೆಸಿರುವ ಭಿನ್ನಮತೀಯ ಧಾರ್ಮಿಕ ನಾಯಕ ಫೇತುಲ್ಲಾ ಗುಲೇನ್‌ರ ಬೆಂಬಲಿಗರ ವಿರುದ್ಧ ಶುಕ್ರವಾರ ಮುಂಜಾನೆ ಕಾರ್ಯಾಚರಣೆ ಕೈಗೊಂಡಿರುವ ಟರ್ಕಿ ಪೊಲೀಸರು, 73 ಶಿಕ್ಷಕರನ್ನು ಬಂಧಿಸಿದ್ದಾರೆ ಎಂದು ಸರಕಾರಿ ಒಡೆತನದ ‘ಅನಡೊಲು’ ವಾರ್ತಾಸಂಸ್ಥೆ ವರದಿ ಮಾಡಿದೆ.
ಗುಲೇನ್ ಜುಲೈಯಲ್ಲಿ ನಡೆದ ವಿಫಲ ಕ್ಷಿಪ್ರಕ್ರಾಂತಿಯ ರೂವಾರಿ ಎಂಬುದಾಗಿ ಟರ್ಕಿ ಭಾವಿಸಿದೆ.
ವಿಫಲ ಕ್ಷಿಪ್ರಕ್ರಾಂತಿಯ ಬಗ್ಗೆ ತನಿಖೆ ನಡೆಸುತ್ತಿರುವ ಸರಕಾರ, ನಾಗರಿಕ ಸೇವೆ, ಸೇನೆ ಮತ್ತು ನ್ಯಾಯಾಂಗಗಳ ಸುಮಾರು 1,10,000 ಉದ್ಯೋಗಿಗಳನ್ನು ಅಮಾನತುಗೊಳಿಸಿದೆ ಹಾಗು 36,000 ಮಂದಿಯನ್ನು ವಿಚಾರಣೆ ಕಾದಿರಿಸಿ ಜೈಲಿನಲ್ಲಿಟ್ಟಿದೆ.
ಕ್ಷಿಪ್ರ ಕ್ರಾಂತಿಯಲ್ಲಿ 240ಕ್ಕೂ ಅಧಿಕ ಮಂದಿ ಹತರಾಗಿದ್ದಾರೆ.
‘ಶಸ್ತ್ರಸಜ್ಜಿತ ಭಯೋತ್ಪಾದಕ ಗುಂಪೊಂದರ’ ಸದಸ್ಯರೆಂದು ಆರೋಪಿಸಿ, ಇಸ್ತಾಂಬುಲ್ ಪ್ರಾಸಿಕ್ಯೂಟರ್‌ಗಳು 103 ಶಿಕ್ಷಕರ ವಿರುದ್ಧ ಬಂಧನಾದೇಶಗಳನ್ನು ಹೊರಡಿಸಿದ್ದಾರೆ.
ಶುಕ್ರವಾರ ಮುಂಜಾನೆ ಈ ಶಿಕ್ಷಕರ ಮನೆಗಳು ಮತ್ತು ಕಚೇರಿಗಳಲ್ಲಿ ಶೋಧ ನಡೆಸಿದರು ಹಾಗೂ ಶಂಕಿತರನ್ನು ಇಸ್ತಾಂಬುಲ ಪೊಲೀಸ್ ಪ್ರಧಾನಕಚೇರಿಗೆ ಕರೆದೊಯ್ಯಲಾಯಿತು ಎಂದು ವಾರ್ತಾಸಂಸ್ಥೆ ತಿಳಿಸಿದೆ.