ಪಾಕ್ ವಿರುದ್ಧ ಪ್ರಥಮ ಟೆಸ್ಟ್: ಕಿವೀಸ್‌ಗೆ ಸುಲಭ ಜಯ
ಕ್ರೈಸ್ಟ್‌ಚರ್ಚ್, ನ.20: ನ್ಯೂಝಿಲೆಂಡ್ ತಂಡ ಪಾಕಿಸ್ತಾನ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯವನ್ನು 8 ವಿಕೆಟ್‌ಗಳ ಅಂತರದಿಂದ ಸುಲಭವಾಗಿ ಗೆದ್ದುಕೊಂಡಿತು.
ನಾಲ್ಕನೆ ದಿನದಾಟವಾದ ರವಿವಾರ ಗೆಲ್ಲಲು 105 ರನ್ ಗುರಿ ಪಡೆದಿದ್ದ ನ್ಯೂಝಿಲೆಂಡ್ ಪರ ಕೇನ್ ವಿಲಿಯಮ್ಸನ್(61) ಹಾಗೂ ಜೀತ್ ರಾವಲ್(ಅಜೇಯ 36) 3ನೆ ವಿಕೆಟ್‌ಗೆ 85 ರನ್ ಜೊತೆಯಾಟ ನಡೆಸಿ ಭರ್ಜರಿ ಗೆಲುವು ತಂದುಕೊಟ್ಟರು. ಈ ಗೆಲುವಿನ ಮೂಲಕ ಕಿವೀಸ್ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಭಾರತ ಮೂಲದ ರಾವಲ್ ಮೊದಲ ಇನಿಂಗ್ಸ್‌ನಲ್ಲಿ ನಿರ್ಣಾಯಕ 55 ರನ್ ಗಳಿಸಿದ್ದರು. ಎರಡನೆ ಇನಿಂಗ್ಸ್‌ನಲ್ಲಿ ಅಜೇಯ 36 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ನಾಯಕ ವಿಲಿಯಮ್ಸನ್ ಕೇವಲ 56 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 77 ಎಸೆತಗಳಲ್ಲಿ 61 ರನ್ ಗಳಿಸಿದ ಬಳಿಕ ಅಝರ್ ಅಲಿಗೆ ವಿಕೆಟ್ ಒಪ್ಪಿಸಿದರು.
ಇದಕ್ಕೆ ಮೊದಲು 7 ವಿಕೆಟ್ ನಷ್ಟಕ್ಕೆ 129 ರನ್‌ನಿಂದ ಎರಡನೆ ಇನಿಂಗ್ಸ್ ಮುಂದುವರಿಸಿದ ಪಾಕಿಸ್ತಾನ ಸೊಹೈಲ್ ಖಾನ್(40) ಸಾಹಸದ ನೆರವಿನಿಂದ 171 ರನ್ ಗಳಿಸಿ ಆಲೌಟಾಯಿತು. ಸೊಹೈಲ್ ಹಾಗೂ ಶಫೀಕ್ 8ನೆ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನಡೆಸಿ ತಂಡದ ಸ್ಕೋರನ್ನು 100ರ ಗಡಿ ದಾಟಿಸಿದರು. ಪಾಕಿಸ್ತಾನ ನಿನ್ನೆಯ ಮೊತ್ತಕ್ಕೆ ಕೇವಲ 42 ರನ್ ಸೇರಿಸಿ ಆಲೌಟಾಯಿತು.
ಕಿವೀಸ್ ಬೌಲಿಂಗ್‌ನಲ್ಲಿ ಟ್ರೆಂಟ್ ಬೌಲ್ಟ್(3-37), ಟಿಮ್ ಸೌಥಿ(3-53) ಹಾಗೂ ವಾಗ್ನರ್(3-34) ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು.
ಉಭಯ ತಂಡಗಳು ನ.25 ರಂದು ಹ್ಯಾಮಿಲ್ಟನ್‌ನಲ್ಲಿ ಎರಡನೆ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಆಡಲಿವೆ.