ದ್ವಿತೀಯ ಟೆಸ್ಟ್: ಇಂಗ್ಲೆಂಡ್‌ಗೆ 405 ರನ್ ಗುರಿ

Update: 2016-12-08 08:33 GMT

 ವಿಶಾಖಪಟ್ಟಣ, ನ.20: ಬಂದರು ನಗರಿಯಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡದ ಗೆಲುವಿಗೆ 405 ರನ್ ಗುರಿ ನೀಡಿದೆ.

ನಾಲ್ಕನೆ ದಿನದಾಟವಾದ ರವಿವಾರ ಅತ್ಯುತ್ತಮ ದಾಳಿ ಸಂಘಟಸಿದ ಇಂಗ್ಲೆಂಡ್‌ನ ವೇಗಿ ಸ್ಟುವರ್ಟ್ ಬ್ರಾಡ್(4-33) ಹಾಗೂ ಸ್ಪಿನ್ನರ್ ಆದಿಲ್ ರಶೀದ್(4-82) ಭಾರತವನ್ನು ಎರಡನೆ ಇನಿಂಗ್ಸ್‌ನಲ್ಲಿ 204 ರನ್‌ಗೆ ಆಲೌಟ್ ಮಾಡಿದರು. ಕೊನೆಯ ವಿಕೆಟ್‌ಗೆ ಉಪಯುಕ್ತ 42 ರನ್ ಜೊತೆಯಾಟ ನಡೆಸಿದ ಜಯಂತ್ ಯಾದವ್(ಅಜೇಯ 27) ಹಾಗೂ ಮುಹಮ್ಮದ್ ಶಮಿ(19) ಭಾರತ ತಂಡ ಇಂಗ್ಲೆಂಡ್‌ಗೆ 405 ರನ್ ಗುರಿ ನಿಗದಿಪಡಿಸಲು ನೆರವಾದರು.

ರವಿವಾರ 2ನೆ ಇನಿಂಗ್ಸ್ ಆರಂಭಿಸಿದ ನಾಯಕ ವಿರಾಟ್ ಕೊಹ್ಲಿ(81) ಹಾಗೂ ಅಜಿಂಕ್ಯ ರಹಾನೆ (26) ಜೋಡಿಯನ್ನು ಬೇಗನೆ ಬೇರ್ಪಡಿಸಲು ಬ್ರಾಡ್ ಯಶಸ್ವಿಯಾದರು. ರಹಾನೆ ನಿನ್ನೆಯ ಸ್ಕೋರ್‌ಗೆ ಕೇವಲ 4 ರನ್ ಸೇರಿಸಿ ವಿಕೆಟ್ ಒಪ್ಪಿಸಿದರು. ಕೊಹ್ಲಿ ಹಾಗೂ ರಹಾನೆ 4ನೆ ವಿಕೆಟ್‌ಗೆ 77 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾಗಿದ್ದರು. ಇದು ಭಾರತ 2ನೆ ಇನಿಂಗ್ಸ್‌ನಲ್ಲಿ ದಾಖಲಿಸಿದ ಗರಿಷ್ಠ ಜೊತೆಯಾಟವಾಗಿದೆ.

 ರಹಾನೆ ಔಟಾದ ಬೆನ್ನಿಗೆ ಆರ್.ಅಶ್ವಿನ್(7) ಬ್ರಾಡ್‌ಗೆ ವಿಕೆಟ್ ಒಪ್ಪಿಸಿದರು. ವೃದ್ದಿಮಾನ್ ಸಹಾ ಹಾಗೂ ರವೀಂದ್ರ ಜಡೇಜರನ್ನು ರಶೀದ್ ಪೆವಿಲಿಯನ್‌ಗೆ ಕಳುಹಿಸಿದರು. 109 ಎಸೆತಗಳಲ್ಲಿ 8 ಬೌಂಡರಿಗಳ ಸಹಿತ 81 ರನ್ ಗಳಿಸಿದ್ದ ಕೊಹ್ಲಿಗೆ ರಶೀದ್ ಶತಕವನ್ನು ನಿರಾಕರಿಸಿದರು.

ಉಮೇಶ್ ಯಾದವ್ ಶೂನ್ಯಕ್ಕೆ ಔಟಾದಾಗ ಭಾರತಕ್ಕೆ 400ಕ್ಕೂ ಅಧಿಕ ಮುನ್ನಡೆ ಸಾಧಿಸಲು 38 ರನ್ ಅಗತ್ಯವಿತ್ತು. ಆಗ 10ನೆ ವಿಕೆಟ್‌ಗೆ 42 ರನ್ ಸೇರಿಸಿದ ಜಯಂತ್ ಯಾದವ್(ಅಜೇಯ 27) ಹಾಗೂ ಮುಹಮ್ಮದ್ ಶಮಿ(19) ಇಂಗ್ಲೆಂಡ್ ಗೆಲುವಿಗೆ 405 ರನ್ ನಿಗದಿಪಡಿಸಲು ಕಾರಣರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News