×
Ad

ದಿಲ್ಲಿ ಹಾಫ್ ಮ್ಯಾರಥಾನ್: ಕೀನ್ಯದ ಕಿಪ್‌ಚೋಗ್ ಚಾಂಪಿಯನ್

Update: 2016-11-20 16:31 IST

 ಹೊಸದಿಲ್ಲಿ, ನ.20: ಹಾಲಿ ಒಲಿಂಪಿಕ್ ಮ್ಯಾರಥಾನ್ ಚಾಂಪಿಯನ್ ಕೀನ್ಯದ ಇಲಿಯುಡ್ ಕಿಪ್‌ಚೋಗ್ ನಿರೀಕ್ಷೆಯಂತೆಯೇ ದಿಲ್ಲಿ ಹಾಫ್ ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ಚಾಂಪಿಯನ್ ಆಗಿದ್ದಾರೆ.

ರವಿವಾರ ಬೆಳಗ್ಗೆ ರಾಷ್ಟ್ರರಾಜಧಾನಿಯಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. 21.097 ಕಿ.ಮೀ. ದೂರವನ್ನು 59 ನಿಮಿಷ ಹಾಗೂ 44 ಸೆಕೆಂಡ್‌ನಲ್ಲಿ ಗುರಿ ತಲುಪಿದ ಕಿಪ್‌ಚೋಗ್ ಮೊದಲ ಸ್ಥಾನ ಪಡೆದರು. ಇಥಿಯೋಪಿಯದ ಯಿಗ್ರೆಮ್ ಡೆಮೆಲಾಶ್(59.48 ಸೆ.) ಎರಡನೆ ಹಾಗೂ ಕೀನ್ಯದ ಇನ್ನೋರ್ವ ಓಟಗಾರ ಅಗಸ್ಟಿನ್ ಚೋಗ್(60.01) ಮೂರನೆ ಸ್ಥಾನ ಪಡೆದರು.

ಮಹಿಳೆಯರ ವಿಭಾಗದಲ್ಲಿ ಎಥಿಯೋಪಿಯದ ವರ್ಕ್‌ನೆಶ್ ಡೆಗೆಫಾ ಒಂದು ಗಂಟೆ, 7 ನಿಮಿಷ, 42 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಾಂಪಿಯನ್ ಆದರು. ಇಥಿಯೋಪಿಯದ ಅಬಬೆಲ್ ಯೆಶನೆಹ್(1:07:52) ಹಾಗೂ ಕೀನ್ಯದ ಹೆಲ್ಹಾ ಕಿಪ್ರೊಪ್(1:08:11) ಕ್ರಮವಾಗಿ 2ನೆ ಹಾಗೂ 3ನೆ ಸ್ಥಾನ ಪಡೆದರು.

ಪುರುಷರ ಹಾಗೂ ಮಹಿಳಾ ವಿಭಾಗದ ಮ್ಯಾರಥಾನ್‌ನಲ್ಲಿ ಮೊದಲ ಸ್ಥಾನ ಪಡೆಯುವವರು 27,000 ಡಾಲರ್ ಬಹುಮಾನ ಗೆಲ್ಲಲಿದ್ದಾರೆ.

ಭಾರತದ ಓಟಗಾರರ ಪೈಕಿ ಜಿ.ಲಕ್ಷ್ಮಣನ್ 1 ಗಂಟೆ, 15 ನಿಮಿಷ ಹಾಗೂ 15 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಮುಹಮ್ಮದ್ ಯೂನಿಸ್(1:04:38) ಹಾಗೂ ಮಾನ್ ಸಿಂಗ್(1:04:40) ಕ್ರಮವಾಗಿ ಎರಡನೆ ಹಾಗೂ ಮೂರನೆ ಸ್ಥಾನ ಪಡೆದರು. ಭಾರತೀಯ ಮಹಿಳೆಯರಲ್ಲಿ ಮೋನಿಕಾ ಅತ್ರೆ ವೈಯಕ್ತಿಕ ಶ್ರೇಷ್ಠ ಸಮಯದಲ್ಲಿ(1ಗಂಟೆ, 15 ನಿಮಿಷ, 34 ಸೆಕೆಂಡ್) ಗುರಿ ತಲುಪಿದರು. ಸಂಜೀವನಿ ಜಾಧವ್(1:15:35) ಎರಡನೆ ಹಾಗೂ ಸ್ವಾತಿ ಗಧಾವೆ(1:17:43) ಮೂರನೆ ಸ್ಥಾನ ಪಡೆದಿದ್ದಾರೆ.

  ‘‘ಎರಡನೆ ಬಾರಿ ಭಾರತದಲ್ಲಿ ಮ್ಯಾರಥಾನ್‌ನಲ್ಲಿ ಭಾಗವಹಿಸಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇಲ್ಲಿನ ವಾತಾವರಣ ಉತ್ತಮವಾಗಿದೆ’’ ಎಂದು ಕೀನ್ಯದ ಓಟದ ದಂತಕತೆ, 2010ರ ದಿಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 5000 ಮೀ.ಓಟದಲ್ಲಿ ಬೆಳ್ಳಿ ಜಯಿಸಿದ್ದ ಕಿಪ್‌ಚೋಗ್ ಹೇಳಿದ್ದಾರೆ.

 ಒಟ್ಟು 2,70,000 ಡಾಲರ್ ಬಹುಮಾನ ಮೊತ್ತದ ಮ್ಯಾರಥಾನ್‌ನಲ್ಲಿ ಎಲೈಟ್ ಹಾಫ್ ಮ್ಯಾರಥಾನ್ ವಿಭಾಗದಲ್ಲಿ(21.097 ಕಿ.ಮೀ.) 12,000 ಓಟಗಾರರು, ಗ್ರೇಟ್ ದಿಲ್ಲಿ ರನ್‌ನಲ್ಲಿ(6 ಕಿ.ಮೀ.) 19,000 ಜನರು ಭಾಗವಹಿಸಿದ್ದರು. ಹಿರಿಯ ನಾಗರಿಕರ ಓಟದಲ್ಲಿ(4 ಕಿ.ಮೀ.) ಸುಮಾರು 1000 ಹಾಗೂ ಚಾಂಪಿಯನ್ಸ್‌ರೊಂದಿಗೆ ವಿಕಲಚೇತನರ ವಿಭಾಗದಲ್ಲಿ(4 ಕಿ.ಮೀ.) 500 ಮಂದಿ ಸೇರಿದಂತೆ ಒಟ್ಟು ಸುಮಾರು 34,000 ಮಂದಿ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News