ಎರಡನೆ ಟೆಸ್ಟ್: ಆಂಗ್ಲರ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ವಿಶಾಖಪಟ್ಟಣ, ನ.21: ವಿರಾಟ್ ಕೊಹ್ಲಿ ನೇತೃತ್ವದ ಭಾರತದ ಟೆಸ್ಟ್ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ಎರಡನೆ ಟೆಸ್ಟ್‌ನಲ್ಲಿ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಗೆಲ್ಲಲು 405 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ಐದನೆ ಹಾಗೂ ಅಂತಿಮ ದಿನದಾಟವಾದ ಸೋಮವಾರ 97.3 ಓವರ್‌ಗಳಲ್ಲಿ ಕೇವಲ 158 ರನ್‌ಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. 246 ರನ್‌ಗಳ ಅಂತರದಿಂದ ಹೀನಾಯ ಸೋಲುಂಡಿತು.
ಹಿರಿಯ ಸ್ಪಿನ್ನರ್ ಆರ್.ಅಶ್ವಿನ್(3-52), ಚೊಚ್ಚಲ ಪಂದ್ಯ ಆಡಿದ ಜಯಂತ್ ಯಾದವ್(3-30) ತಲಾ ಮೂರು ವಿಕೆಟ್ ಉರುಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ತಲಾ ಎರಡು ವಿಕೆಟ್‌ಗಳನ್ನು ಉರುಳಿಸಿರುವ ವೇಗಿ ಮುಹಮ್ಮದ್ ಶಮಿ(2-30) ಹಾಗೂ ಸ್ಪಿನ್ನರ್ ರವೀಂದ್ರ ಜಡೇಜ(2-35) ಆಂಗ್ಲರಿಗೆ ಸವಾಲಾಗಿ ಪರಿಣಮಿಸಿದರು.
2 ವಿಕೆಟ್ ನಷ್ಟಕ್ಕೆ 87 ರನ್‌ನಿಂದ ಎರಡನೆ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ನಿನ್ನೆಯ ಸ್ಕೋರ್‌ಗೆ ಕೇವಲ 5 ರನ್ ಸೇರಿಸುವಷ್ಟರಲ್ಲಿ ಡಕೆಟ್(0) ವಿಕೆಟ್‌ನ್ನು ಕಳೆದುಕೊಂಡಿತು. ಅಶ್ವಿನ್ ಅವರು ಡೆಕೆಟ್‌ಗೆ ಖಾತೆ ತೆರೆಯಲು ಅವಕಾಶ ನೀಡಲಿಲ್ಲ.
ಮೊಯಿನ್ ಅಲಿ(2) ಹಾಗೂ ಬೆನ್ ಸ್ಟೋಕ್ಸ್ (6) ಬೇಗನೆ ಔಟಾದಾಗ ಇಂಗ್ಲೆಂಡ್ ಸ್ಕೋರ್ 5 ವಿಕೆಟ್ ನಷ್ಟಕ್ಕೆ 115. ಪ್ರತಿಬಾರಿಯೂ ತಂಡಕ್ಕೆ ಆಸರೆಯಾಗುವ ರೂಟ್ 25 ರನ್ ಗಳಿಸಿದ್ದಾಗ ಮುಹಮ್ಮದ್ ಶಮಿ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದರು.
ಸ್ಪಿನ್ನರ್ ಆದಿಲ್ ರಶೀದ್(4) ಶಮಿಗೆ ಎರಡನೆ ಬಲಿಯಾದರು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬೈರ್‌ಸ್ಟೋವ್ ಅಜೇಯ 34 ರನ್ ಗಳಿಸಿದರು. ಭೋಜನ ವಿರಾಮದ ವೇಳೆ 7 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿದ್ದ ಇಂಗ್ಲೆಂಡ್ 16 ರನ್ ಸೇರಿಸುವಷ್ಟರಲ್ಲಿ ಉಳಿದ 3 ವಿಕೆಟ್‌ಗಳನ್ನು ಕಳೆದುಕೊಂಡಿತು.