×
Ad

ಆಸ್ಟ್ರೇಲಿಯ ಪತ್ರಕರ್ತನನ್ನು ತಳ್ಳಿದ ಪ್ಲೆಸಿಸ್

Update: 2016-11-21 23:20 IST

ಅಡಿಲೇಡ್, ನ.21: ನಾಯಕ ಎಫ್‌ಡು ಪ್ಲೆಸಿಸ್‌ರಿಂದ ಸಂದರ್ಶನ ಪಡೆಯಲು ಯತ್ನಿಸಿದ ಆಸ್ಟ್ರೇಲಿಯದ ಟಿವಿ ಪತ್ರಕರ್ತನನ್ನು ದಕ್ಷಿಣ ಆಫ್ರಿಕ ತಂಡದೊಂದಿಗೆ ಪ್ರಯಾಣಿಸುತ್ತಿದ್ದ ಭದ್ರತಾ ಅಧಿಕಾರಿ ಹಾಗೂ ಪ್ಲೆಸಿಸ್‌ ತಳ್ಳಿದ ಘಟನೆ ನಡೆದಿದೆ.

  ಕಳೆದ ವಾರ ಹೊಬರ್ಟ್‌ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಚೆಂಡನ್ನು ವಿರೂಪಗೊಳಿಸಿದ ಆರೋಪದಲ್ಲಿ ಪ್ಲೆಸಿಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ನಿಂದ ಶಿಸ್ತು ವಿಚಾರಣೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೂರನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಭಾಗವಹಿಸಲು ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ ಪ್ಲೆಸಿಸ್‌ರನ್ನು ಮಾತನಾಡಿಸಲು ಮಾಧ್ಯಮಗಳು ಮುಗಿಬಿದ್ದವು.

ಪ್ಲೆಸಿಸ್ ಹಾಗೂ ಅವರೊಂದಿಗಿದ್ದ ಭದ್ರತಾ ಅಧಿಕಾರಿಯು ನೈನ್ ನೆಟ್‌ವರ್ಕ್‌ನ ವರದಿಗಾರ ವಿಲ್ ಕ್ರೌಚ್‌ರನ್ನು ಸಿಟ್ಟಿನಿಂದ ಹಿಂದಕ್ಕೆ ತಳ್ಳಿದ ಘಟನೆ ನಡೆದಿದೆ. ಪತ್ರಕರ್ತರೊಂದಿಗೆ ನಡೆಸಿದ ಘರ್ಷಣೆಯ ವೇಳೆ ಪ್ಲೆಸಿಸ್ ಹೆಡ್‌ಫೋನ್ ಹಾಕಿಕೊಂಡಿದ್ದರು.

ಪತ್ರಕರ್ತರ ವಿರುದ್ಧ ಕಿಡಿಕಾರಿದ ದ.ಆಫ್ರಿಕದ ಹಿರಿಯ ಬ್ಯಾಟ್ಸ್‌ಮನ್ ಹಾಶಿಮ್ ಅಮ್ಲ,‘‘ವರದಿಗಾರರ ಇಂತಹ ಕೆರಳಿಸುವ ವರ್ತನೆಯು ತನಗೆ ತುಂಬಾ ಬೇಸರ ಉಂಟು ಮಾಡಿದೆ. ವ್ಯಕ್ತಿಯೊಬ್ಬ ಶಾಂತಚಿತ್ತದಿಂದ ಹೋಗುತ್ತಿರುವಾಗ ಆತನೊಂದಿಗೆ ಸ್ವಲ್ಪ ಸೌಜನ್ಯದಿಂದ ವರ್ತಿಸಬೇಕು’’ ಎಂದು ಹೇಳಿದರು.

ದಕ್ಷಿಣ ಆಫ್ರಿಕದ ನಾಯಕ ಪ್ಲೆಸಿಸ್ 2ನೆ ಟೆಸ್ಟ್ ಪಂದ್ಯದ ವೇಳೆ ಚೆಂಡಿಗೆ ಸಿಹಿ ಜೊಲ್ಲನ್ನು ಉಜ್ಜಿ ವಿರೂಪಗೊಳಿಸಿದ ಆರೋಪ ಎದುರಿಸುತ್ತಿದ್ದಾರೆ. ಐಸಿಸಿ ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್‌ರಿಂದ ವಿಚಾರಣೆ ಎದುರಿಸುತ್ತಿರುವ ಪ್ಲೆಸಿಸ್ ಒಂದು ಪಂದ್ಯದಿಂದ ನಿಷೇಧ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News