ಎರಡನೆ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 246 ರನ್‌ಗಳ ಜಯ
ವಿಶಾಖಪಟ್ಟಣ, ನ.21 ಇಲ್ಲಿ ನಡೆದ ಎರಡನೆ ಕ್ರಿಕೆಟ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 246ರನ್‌ಗಳ ಭರ್ಜರಿ ಜಯ ಗಳಿಸಿದ್ದು, ಹದಿನಾರು ಟೆಸ್ಟ್‌ಗಳಲ್ಲಿ ಸೋಲರಿಯದ ದಾಖಲೆಯನ್ನು ಮುಂದುವರಿಸಿದೆ.
ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಐದನೆ ಹಾಗೂ ಅಂತಿಮ ದಿನವಾಗಿರುವ ಇಂದು ಗೆಲುವಿಗೆ ಎರಡನೆ ಇನಿಂಗ್ಸ್‌ನಲ್ಲಿ 405 ರನ್‌ಗಳ ಗೆಲುವಿನ ಸವಾಲು ಪಡೆದ ಇಂಗ್ಲೆಂಡ್ 97.3 ಓವರ್‌ಗಳಲ್ಲಿ 158 ರನ್‌ಗಳಿಗೆ ಆಲೌಟಾಗಿದೆ.
ಭಾರತದ ಜಯಂತ್ ಯಾದವ್(30ಕ್ಕೆ 3), ಆರ್.ಅಶ್ವಿನ್(52ಕ್ಕೆ 3), ಮುಹಮ್ಮದ್ ಶಮಿ(30ಕ್ಕೆ 2) ಮತ್ತು ರವೀಂದ್ರ ಜಡೇಜ(35ಕ್ಕೆ 2) ದಾಳಿಗೆ ಸಿಲುಕಿದ ಇಂಗ್ಲೆಂಡ್ ಬೇಗನೆ ಎರಡನೆ ಇನಿಂಗ್ಸ್ ಮುಗಿಸಿದೆ.
ಮೊದಲ ಇನಿಂಗ್ಸ್‌ನಲ್ಲಿ 167 ರನ್ ಮತ್ತು ಎರಡನೆ ಇನಿಂಗ್ಸ್‌ನಲ್ಲಿ 81 ರನ್ ಸೇರಿದಂತೆ 248 ರನ್ ಗಳಿಸಿದ್ದ ನಾಯಕ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಶ್ವಿನ್ ಅವರು ಔಟಾಗದೆ 58 ರನ್, 7 ರನ್ ಮತ್ತು 119ಕ್ಕೆ 8 ವಿಕೆಟ್ ಪಡೆದು ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.
ಇದರೊಂದಿಗೆ ಭಾರತ ಐದು ಟೆಸ್ಟ್‌ಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ರಾಜ್‌ಕೋಟ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು. 2012ರಲ್ಲಿ ಅಲೆಸ್ಟರ್ ಕುಕ್ ನೇತೃತ್ವದಲ್ಲಿ ಭಾರತ ಪ್ರವಾಸ ಕೈಗೊಂಡಿದ ಇಂಗ್ಲೆಂಡ್ ತಂಡ 2-1ಅಂತರದಲ್ಲಿ ಸರಣಿ ಗೆಲುವು ದಾಖಲಿಸಿತ್ತು. ಬಳಿಕ ಗೆಲುವಿನ ಅಭಿಯಾನ ಆರಂಭಿಸಿದ ಭಾರತ ಹಿಂತಿರುಗಿ ನೋಡಿಲ್ಲ. 16 ಪಂದ್ಯಗಳಲ್ಲಿ 13ರಲ್ಲಿ ಜಯ ಗಳಿಸಿದೆ. 2ರಲ್ಲಿ ಡ್ರಾ ಸಾಧಿಸಿದೆ.
ನಾಲ್ಕನೆ ದಿನದಾಟಂತ್ಯಕ್ಕೆ ಇಂಗ್ಲೆಂಡ್ ಎರಡನೆ ಇನಿಂಗ್ಸ್‌ನಲ್ಲಿ 59.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 87 ರನ್ ಗಳಿಸಿತ್ತು. ನಾಯಕ ಅಲಿಸ್ಟರ್ ಕುಕ್ 54 ರನ್ ಮತ್ತು ಹಸೀಬ್ ಹಮೀದ್ 25 ರನ್ ಗಳಿಸಿದ್ದರು.
ಇಂದು ಆಟ ಮುಂದುವರಿಸಿ ಈ ಮೊತ್ತಕ್ಕೆ 71 ರನ್ ಸೇರಿಸಲಷ್ಟೇ ಶಕ್ತವಾಗಿತ್ತು. ನಿನ್ನೆ ಔಟಾಗದೆ 5 ರನ್ ಗಳಿಸಿದ್ದ ಜೋ ರೂಟ್ ಆಟ ಮುಂದುವರಿಸಿ ಈ ಮೊತ್ತಕ್ಕೆ 20 ರನ್ ಸೇರಿಸಿ ಔಟಾದರು. ಇವರನ್ನು ಹೊರತುಪಡಿಸಿದರೆ ವಿಕೆಟ್ ಕೀಪರ್ ಬೈರ್‌ಸ್ಟೋವ್ ಔಟಾಗದೆ 34 ರನ್ ಗಳಿಸಿದರು.
ಡಕ್‌ಟ್, ಅನ್ಸಾರಿ ಮತ್ತು ಆ್ಯಂಡರ್ಸನ್ ಖಾತೆ ತೆರೆಯದೆ ನಿರ್ಗಮಿಸಿದರು. ಮೊಯಿನ್ ಅಲಿ (2), ,ಸ್ಟೋಕ್ಸ್(6),ಬ್ರಾಡ್(5) ಒಂದಂಕೆಯ ಸ್ಕೋರ್ ದಾಖಲಿಸಿದರು.
ದಿನದ ಮೊದಲ ಅವಧಿಯಲ್ಲಿ 33.4 ಓವರ್‌ಗಳಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡ ಇಂಗ್ಲೆಂಡ್ ಎರಡನೆ ಅವಧಿಯಲ್ಲಿ ಉಳಿದ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಆರ್.ಅಶ್ವಿನ್ ಮತ್ತು ಜಯಂತ್ ಯಾದವ್ ಉಳಿದ ವಿಕೆಟ್‌ಗಳನ್ನು ಹಂಚಿಕೊಂಂಡರು.
ಅಶ್ವಿನ್ ಟೆಸ್ಟ್‌ನಲ್ಲಿ ಪಡೆದಿರುವ ವಿಕೆಟ್‌ಗಳ ಸಂಖ್ಯೆಯನ್ನು 231ಕ್ಕೆ ಏರಿಸಿದ್ದಾರೆ. ಈ ವರ್ಷ 8 ಟೆಸ್ಟ್‌ಗಳಲ್ಲಿ 54 ವಿಕೆಟ್ ಗಳಿಸಿದ್ದಾರೆ. ರಂಗನ್ ಹೆರಾತ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ಜಯಂತ್ ಯಾದವ್ ಚೊಚ್ಚಲ ಟೆಸ್ಟ್‌ನಲ್ಲಿ ಒಟ್ಟು 62 ರನ್ ಮತ್ತು 4 ವಿಕೆಟ್ ಪಡೆದು ಮೊದಲ ಟೆಸ್ಟ್‌ನ್ನು ಸ್ಮರಣೀಯವನ್ನಾಗಿಸಿದ್ದಾರೆ. ಬೆನ್ ಸ್ಟೋಕ್ಸ್‌ರನ್ನು ಅದ್ಭುತವಾಗಿ ಬೌಲ್ಡ್ ಮಾಡಿದರು. ಸ್ಟುವರ್ಟ್ ಬ್ರಾಡ್‌ನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದ್ದರು. ಇದೇ ವೇಳೆ ಆ್ಯಂಡರ್ಸನ್‌ರನ್ನು ಔಟು ಮಾಡಿದರು. ಅನಪೇಕ್ಷಿತ ದಾಖಲೆಗೆ ಆ್ಯಂಡರ್ಸನ್ ಕಾರಣರಾದರು. ಆ್ಯಂಡರ್ಸನ್ ಅವರನ್ನು ಮೊದಲ ಇನಿಂಗ್ಸ್‌ನಲ್ಲಿ ಅಶ್ವಿನ್ ಮತ್ತು ಎರಡನೆ ಇನಿಂಗ್ಸ್‌ನಲ್ಲಿ ಜಯಂತ್ ಯಾದವ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.
ಮೊದಲ ಅವಧಿಯಲ್ಲಿ ಮುಹಮ್ಮದ್ ಶಮಿ ಹೊಸ ಚೆಂಡಿನಲ್ಲಿ ಅಪಾಯಕಾರಿ ಜೋ ರೂಟ್ ಮತ್ತು ಆದಿಲ್ ರಶೀದ್‌ರನ್ನು ಪೆವಿಲಿಯನ್‌ಗೆ ಅಟ್ಟಿದರು.
ಸ್ಕೋರ್ ವಿವರ
ಭಾರತ ಪ್ರಥಮ ಇನಿಂಗ್ಸ್:
129.4 ಓವರ್‌ಗಳಲ್ಲಿ 455
ಇಂಗ್ಲೆಂಡ್ ಪ್ರಥಮ ಇನಿಂಗ್ಸ್: 102.5 ಓವರ್‌ಗಳಲ್ಲಿ 255
ಭಾರತ ದ್ವಿತೀಯ ಇನಿಂಗ್ಸ್: 63.1 ಓವರ್‌ಗಳಲ್ಲಿ 204 ರನ್
ಇಂಗ್ಲೆಂಡ್ ಎರಡನೆ ಇನಿಂಗ್ಸ್: 97.3 ಓವರ್‌ಗಳಲ್ಲಿ 158
ಅಲಿಸ್ಟರ್ ಕುಕ್ ಎಲ್‌ಬಿಡಬ್ಲು ಬಿ ಜಡೇಜ 54
ಹಮೀದ್ ಎಲ್‌ಬಿಡಬ್ಲು ಅಶ್ವಿನ್ 25
ರೂಟ್ ಎಲ್‌ಬಿಡಬ್ಲು ಮುಹಮ್ಮದ್ ಶಮಿ 25
ಡಕೆಟ್ ಸಿ ಸಹಾ ಬಿ ಅಶ್ವಿನ್ 00
ಮೊಯಿನ್ ಅಲಿ ಸಿ ಕೊಹ್ಲಿ ಬಿ ಜಡೇಜ 02
ಸ್ಟೋಕ್ಸ್ ಬಿ ಜಯಂತ್ ಯಾದವ್ 06
ಬೈರ್‌ಸ್ಟೋವ್ ಅಜೇಯ 34
ರಶೀದ್ ಸಿ ಸಹಾ ಬಿ ಶಮಿ 04
ಅನ್ಸಾರಿ ಬಿ ಅಶ್ವಿನ್ 00
ಸ್ಟುವರ್ಟ್ ಬ್ರಾಡ್ ಎಲ್‌ಬಿಡಬ್ಲು ಜೆ.ಯಾದವ್ 05
ಆ್ಯಂಡರ್ಸನ್ ಎಲ್‌ಬಿಡಬ್ಲು ಜೆ.ಯಾದವ್ 00
ಇತರ 03
ವಿಕೆಟ್‌ಪತನ: 1-75, 2-87, 3-92, 4-101, 5-115, 6-115, 7-129, 8-143, 9-158, 10-158.
ಬೌಲಿಂಗ್ ವಿವರ:
ಮುಹಮ್ಮದ್ ಶಮಿ 14-3-30-2
ಉಮೇಶ್ ಯಾದವ್ 8-3-8-0
ಆರ್.ಅಶ್ವಿನ್ 30-11-52-3
ಜಡೇಜ 34-14-35-2
ಜಯಂತ್ ಯಾದವ್ 11.3-4-30-3.
ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ.
ಅಂಕಿ-ಅಂಶ
246: ಭಾರತ ತಂಡ ಇಂಗ್ಲೆಂಡ್ ವಿರುದ್ಧ ಎರಡನೆ ಶ್ರೇಷ್ಠ ರನ್‌ಗಳ ಅಂತರದಿಂದ ಜಯ ಸಾಧಿಸಿದೆ. 1986ರಲ್ಲಿ ಹೆಡ್ಡಿಂಗ್ಲೆಯಲ್ಲಿ ಕೊನೆಯ ಬಾರಿ ಇಂಗ್ಲೆಂಡ್‌ನ ವಿರುದ್ಧ 279 ರನ್‌ಗಳ ಅಂತರದಿಂದ ಜಯ ಸಾಧಿಸಿತ್ತು.
97.3: ಇಂಗ್ಲೆಂಡ್ ತಂಡ ತನ್ನ ಎರಡನೆ ಇನಿಂಗ್ಸ್‌ನಲ್ಲ್ಲಿ 97.3 ಓವರ್‌ಗಳ ಕಾಲ ಬ್ಯಾಟಿಂಗ್ ಮಾಡಿದೆ. 1990ರ ಬಳಿಕ ಭಾರತದಲ್ಲಿ ವಿದೇಶಿ ತಂಡವೊಂದು ಟೆಸ್ಟ್‌ನ ನಾಲ್ಕನೆ ಇನಿಂಗ್ಸ್‌ನಲ್ಲಿ ಆಡಿದ ಗರಿಷ್ಠ ಓವರ್‌ಗಳ ಪಂದ್ಯ ಇದಾಗಿದೆ. ಕಳೆದ ವರ್ಷ ದಿಲ್ಲಿಯಲ್ಲಿ ದಕ್ಷಿಣ ಆಫ್ರಿಕ 143.1 ಓವರ್ ಬ್ಯಾಟಿಂಗ್ ಮಾಡಿರುವುದು ಶ್ರೇಷ್ಠ ಪ್ರದರ್ಶನವಾಗಿದೆ.
55: ಆರ್.ಅಶ್ವಿನ್ 2016ರಲ್ಲಿ 9 ಟೆಸ್ಟ್‌ಗಳಲ್ಲಿ ಒಟ್ಟು 55 ವಿಕೆಟ್‌ಗಳನ್ನು ಉರುಳಿಸಿದರು. ಈ ಮೂಲಕ ಶೀಲಂಕಾದ ಸ್ಪಿನ್ನರ್ ರಂಗನ ಹೆರಾತ್ ದಾಖಲೆ(8 ಟೆಸ್ಟ್, 54 ವಿಕೆಟ್)ಯನ್ನು ಮುರಿದರು.
10: ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ 10 ಬ್ಯಾಟ್ಸ್‌ಮನ್‌ಗಳು ಎಲ್ಬಿಡಬ್ಲು ಬಲೆಗೆ ಬಿದ್ದಿದ್ದಾರೆ. ಟೆಸ್ಟ್‌ನಲ್ಲಿ ಇದೇ ಮೊದಲ ಬಾರಿ ಇಂಗ್ಲೆಂಡ್‌ನ 10 ಆಟಗಾರರು ಎಲ್ಬಿಡಬ್ಲು ತೀರ್ಪಿಗೆ ಬಲಿಯಾಗಿದ್ದಾರೆ. 1984ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಹಾಗೂ 2012ರಲ್ಲಿ ಅಬುಧಾಬಿಯಲ್ಲಿ ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್‌ನ 9 ಬ್ಯಾಟ್ಸ್‌ಮನ್‌ಗಳು ಔಟಾಗಿದ್ದಾರೆ.
21: ದ್ವಿತೀಯ ಟೆಸ್ಟ್‌ನಲ್ಲಿ ಉಭಯ ತಂಡಗಳು 21 ಬಾರಿ ಡಿಆರ್‌ಎಸ್‌ನ ಮೊರೆ ಹೋಗಿವೆ. ಇಂಗ್ಲೆಂಡ್ 12 ಬಾರಿ ಹಾಗೂ ಭಾರತ 9 ಬಾರಿ ಡಿಆರ್‌ಎಸ್‌ಗೆ ಮೊರೆ ಹೋಗಿದೆ.
1906: ದ್ವಿತೀಯ ಟೆಸ್ಟ್‌ನ 2ನೆ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ವೇಗಿ ಆ್ಯಂಡರ್ಸನ್ ತಾನೆದುರಿಸಿದ್ದ ಮೊದಲ ಎಸೆತದಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. 1906ರಲ್ಲಿ ಕೊನೆಯ ಬಾರಿ ಇಂಗ್ಲೆಂಡ್‌ನ ಎರ್ನಿ ಹೇಯ್ಸೆ ದಕ್ಷಿಣ ಆಫ್ರಿಕದ ವಿರುದ್ಧ ಕೇಪ್‌ಟೌನ್‌ನಲ್ಲಿ ತಾನೆದುರಿಸಿದ್ದ ಮೊದಲ ಎಸೆತದಲ್ಲೇ ಶೂನ್ಯ ಸುತ್ತಿದ್ದರು.
2016ರಲ್ಲಿ ಗರಿಷ್ಠ ಟೆಸ್ಟ್ ವಿಕೆಟ್ ಪಡೆದವರು
ಆಟಗಾರ ಟೆಸ್ಟ್ ವಿಕೆಟ್ ಸರಾಸರಿ 5 ವಿಕೆಟ್
ಆರ್.ಅಶ್ವಿನ್ 09 55 22.23 06
ಆರ್. ಹೆರಾತ್ 08 54 17.53 05
ಎಸ್.ಬ್ರಾಡ್ 13 46 25.97 01
ಜೆ.ಆ್ಯಂಡರ್ಸನ್ 10 41 20.82 03