ಸ್ವದೇಶದಲ್ಲಿ ಅಜೇಯ ದಾಖಲೆ ಕಾಯ್ದುಕೊಂಡ ಭಾರತ
ಹೊಸದಿಲ್ಲಿ, ನ.21: ವಿಶಾಖಪಟ್ಟಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೆ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿರುವ ವಿರಾಟ್ ಕೊಹ್ಲಿ ಪಡೆ ಸ್ವದೇಶದಲ್ಲಿ ಸತತ 16ನೆ ಗೆಲುವು ದಾಖಲಿಸಿದೆ.
ಭಾರತ 1977-80ರಲ್ಲಿ ಸ್ವದೇಶದಲ್ಲಿ ಸತತ 20 ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿತ್ತು. ಕೊಹ್ಲಿ ಪಡೆ ಸ್ವದೇಶದಲ್ಲಿ ಇನ್ನೂ 8 ಟೆಸ್ಟ್ ಪಂದ್ಯಗಳನ್ನು ಆಡುತ್ತಿರುವ ಹಿನ್ನೆಲೆಯಲ್ಲಿ ಸ್ವದೇಶದಲ್ಲಿ ಭಾರತೀಯರು ದಾಖಲಿಸಿರುವ ಗರಿಷ್ಠ ಗೆಲುವಿನ ದಾಖಲೆ ಸರಿಗಟ್ಟುವ ಉತ್ತಮ ಅವಕಾಶವಿದೆ.
2012ರ ಡಿಸೆಂಬರ್‌ನಲ್ಲಿ ಕೋಲ್ಕತಾದ ಈಡನ್‌ಗಾರ್ಡನ್ಸ್‌ನಲ್ಲಿ ಅಲಿಸ್ಟರ್ ಕುಕ್ ನೇತೃತ್ವದ ಇಂಗ್ಲೆಂಡ್‌ನ ವಿರುದ್ಧ ಎಂಎಸ್ ಧೋನಿ ನೇತೃತ್ವದ ಭಾರತ ಸೋಲುಂಡಿತ್ತು. ಆ ಬಳಿಕ ಸ್ವದೇಶದಲ್ಲಿ ಆಡಿರುವ 16 ಪಂದ್ಯಗಳ ಪೈಕಿ 13ರಲ್ಲಿ ಜಯ, 3ರಲ್ಲಿ ಡ್ರಾ ಸಾಧಿಸಿ ಅಜೇಯ ದಾಖಲೆ ಕಾಯ್ದುಕೊಂಡಿದೆ.
ಆಸ್ಟ್ರೇಲಿಯ(4-0,2013ರಲ್ಲಿ), ವೆಸ್ಟ್‌ಇಂಡೀಸ್(2-0,2013ರಲ್ಲಿ), ದಕ್ಷಿಣ ಆಫ್ರಿಕ(3-0,2015ರಲ್ಲಿ )ಹಾಗೂ ನ್ಯೂಝಿಲೆಂಡ್(3-0, 2016) ಹಾಗೂ ಇದೀಗ ಇಂಗ್ಲೆಂಡ್(ವಿಶಾಖಪಟ್ಟಣ, 246 ರನ್) ವಿರುದ್ಧ ಜಯ ಸಾಧಿಸಿದೆ.
ಭಾರತ ಕ್ರಿಕೆಟ್ ತಂಡ 1977-80ರಲ್ಲಿ ಸತತ 20 ಪಂದ್ಯಗಳನ್ನು ಜಯಿಸಿತ್ತು. 1977, ಜನವರಿ 28 ರಿಂದ 1980 ಫೆ.3ರ ವರೆಗೆ ಬಿಶನ್ ಸಿಂಗ್ ಬೇಡಿ, ಸುನೀಲ್ ಗವಾಸ್ಕರ್ ಹಾಗೂ ಜಿ. ವಿಶ್ವನಾಥ್ ನಾಯಕತ್ವದಲ್ಲಿ ಭಾರತ ಸತತ 20ಪಂದ್ಯಗಳನ್ನು ಜಯಿಸಿತ್ತು. ಇಂಗ್ಲೆಂಡ್(2), ವೆಸ್ಟ್‌ಇಂಡೀಸ್(6), ಆಸ್ಟ್ರೇಲಿಯ(6) ಹಾಗೂ ಪಾಕಿಸ್ತಾನ(6) ವಿರುದ್ಧ ಈ ಸಾಧನೆ ಮಾಡಿತ್ತು.
ಇದೀಗ ಭಾರತ ಸತತ 16 ಟೆಸ್ಟ್ ಪಂದ್ಯಗಳನ್ನು ಜಯಿಸಲು ಪ್ರಮುಖ ಪಾತ್ರವಹಿಸಿದ್ದು ಸ್ಪಿನ್ನರ್ ಆರ್.ಅಶ್ವಿನ್. ಅಶ್ವಿನ್ 113 ವಿಕೆಟ್‌ಗಳನ್ನು ಕಬಳಿಸಿದ್ದು, ಇದರಲ್ಲಿ 12 ಐದು ವಿಕೆಟ್ ಗೊಂಚಲುಗಳಿವೆ. ನಾಲ್ಕು ಬಾರಿ 10 ವಿಕೆಟ್ ಗೊಂಚಲು ಪಡೆದಿದ್ದಾರೆ. ಅಶ್ವಿನ್‌ಗೆ ರವೀಂದ್ರ ಜಡೇಜ(70 ವಿಕೆಟ್) ಹಾಗೂ ವೇಗದ ಬೌಲರ್ ಮುಹಮ್ಮದ್ ಶಮಿ(24) ಉತ್ತಮ ಸಹಕಾರ ನೀಡಿದ್ದಾರೆ.
ಬ್ಯಾಟ್ಸ್‌ಮನ್‌ಗಳ ಪೈಕಿ ಚೇತೇಶ್ವರ ಪೂಜಾರ ಗರಿಷ್ಠ ರನ್(1412, 5 ಶತಕ) ಗಳಿಸಿದ್ದಾರೆ. ಆ ಬಳಿಕ ಕೊಹ್ಲಿ(1,293), ಮುರಳಿ ವಿಜಯ್(1,075) ಹಾಗೂ ಅಜಿಂಕ ರಹಾನೆ(684) ಭಾರತಕ್ಕೆ ಕಾಣಿಕೆ ನೀಡಿದ್ದಾರೆ.