×
Ad

ಉಸ್ಮಾನ್ ಖ್ವಾಜಾ ಅಜೇಯ ಶತಕ: ಆಸ್ಟ್ರೇಲಿಯ ತಿರುಗೇಟು

Update: 2016-11-25 23:21 IST

ಮೆಲ್ಬೋರ್ನ್, ನ.25: ಆರಂಭಿಕ ಬ್ಯಾಟ್ಸ್‌ಮನ್ ಉಸ್ಮಾನ್ ಖ್ವಾಜಾ ಅವರ ಅಜೇಯ ಶತಕದ ಸಹಾಯದಿಂದ ಆಸ್ಟ್ರೇಲಿಯ ತಂಡ ಇಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕ ವಿರುದ್ಧದ ಮೂರನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ತಿರುಗೇಟು ನೀಡಿದೆ.

ದಕ್ಷ್ಷಿಣ ಆಫ್ರಿಕದ 259 ರನ್‌ಗೆ ಉತ್ತರವಾಗಿ ವಿಕೆಟ್ ನಷ್ಟವಿಲ್ಲದೆ 14 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯ ಶುಕ್ರವಾರ ಎರಡನೆ ದಿನದಾಟದಂತ್ಯಕ್ಕೆ 6 ವಿಕೆಟ್‌ಗಳ ನಷ್ಟಕ್ಕೆ 307 ರನ್ ಕಲೆ ಹಾಕಿದೆ. 48 ರನ್ ಮುನ್ನಡೆಯಲ್ಲಿದೆ. ಖ್ವಾಜಾ(ಅಜೇಯ 138 ರನ್, 285 ಎಸೆತ, 12 ಬೌಂಡರಿ) ಹಾಗೂ ಮಿಚೆಲ್ ಸ್ಟಾರ್ಕ್(ಅಜೇಯ 16) ಕ್ರೀಸ್ ಕಾಯ್ದುಕೊಂಡಿದ್ದಾರೆ. ಇಂದು ದಿನಪೂರ್ತಿ ಆಡಿದ ಖ್ವಾಜಾ ಶನಿವಾರ ಬಾಲಂಗೋಚಿಗಳ ನೆರವಿನಿಂದ ತಂಡಕ್ಕೆ ಉತ್ತಮ ಮುನ್ನಡೆ ಒದಗಿಸಿಕೊಡುವ ವಿಶ್ವಾಸದಲ್ಲಿದ್ದಾರೆ.

ಇಲ್ಲಿ ನಡೆಯುತ್ತಿರುವ ಹಗಲು-ರಾತ್ರಿ ಟೆಸ್ಟ್‌ನಲ್ಲಿ ಮೊದಲ ಬಾರಿ ಇನಿಂಗ್ಸ್ ಆರಂಭಿಸಿದ ಖ್ವಾಜಾ 197 ಎಸೆತಗಳಲ್ಲಿ 5ನೆ ಟೆಸ್ಟ್ ಶತಕ ಬಾರಿಸಿದರು. ಸರಣಿಯಲ್ಲಿ ಖ್ವಾಜಾ ಬಾರಿಸಿದ ಮೊದಲ ಶತಕ ಇದಾಗಿದೆ. ಆಸ್ಟ್ರೇಲಿಯ ಚೊಚ್ಚಲ ಪಂದ್ಯ ಆಡಿರುವ ರೆನ್‌ಶಾ(10) ಹಾಗೂ ಡೇವಿಡ್ ವಾರ್ನರ್(11) ವಿಕೆಟ್‌ನ್ನು ಬೇಗನೆ ಕಳೆದುಕೊಂಡಿತು. ಈ ಇಬ್ಬರು ಔಟಾದಾಗ ತಂಡದ ಸ್ಕೋರ್ 2 ವಿಕೆಟ್‌ಗೆ 37.

ಆಗ ಜೊತೆಯಾದ ಖ್ವಾಜಾ ಹಾಗೂ ನಾಯಕ ಸ್ಟೀವನ್ ಸ್ಮಿತ್ 3ನೆ ವಿಕೆಟ್‌ಗೆ 137 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು. ಸ್ಮಿತ್ 113 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 59 ರನ್ ಗಳಿಸಿದ್ದಾಗ ರನೌಟಾದರು. ಸ್ಮಿತ್ ಔಟಾದ ಬಳಿಕ ಮೊದಲ ಬಾರಿ ಟೆಸ್ಟ್ ಇನಿಂಗ್ಸ್ ಆಡಿದ ಹ್ಯಾಂಡ್‌ಕಾಂಬ್‌ರೊಂದಿಗೆ ಕೈಜೋಡಿಸಿದ ಖ್ವಾಜಾ 4ನೆ ವಿಕೆಟ್‌ಗೆ 99 ರನ್ ಸೇರಿಸಿದರು.

ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಗಮನ ಸೆಳೆದ ಹ್ಯಾಂಡ್‌ಕಾಂಬ್(54 ರನ್, 78 ಎಸೆತ, 6 ಬೌಂಡರಿ) ಅಬಾಟ್‌ಗೆ ಕ್ಲೀನ್ ಬೌಲ್ಡಾದರು. ಹ್ಯಾಂಡ್‌ಕಾಂಬ್ ಔಟಾದ ಬೆನ್ನಿಗೆ ಮ್ಯಾಡಿಸನ್(0) ಹಾಗೂ ವ್ಯಾಡ್(4) ಪೆವಿಲಿಯನ್‌ಗೆ ಸೇರಿದರು. 7ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 24 ರನ್ ಸೇರಿಸಿದ ಖ್ವಾಜಾ ಹಾಗೂ ಸ್ಟಾರ್ಕ್ ಬ್ಯಾಟಿಂಗ್‌ನ್ನು ಮೂರನೆ ದಿನಕ್ಕೆ ಕಾಯ್ದಿರಿಸಿದರು.

ದಕ್ಷಿಣ ಆಫ್ರಿಕದ ಪರ ಕೈಲ್ ಅಬಾಟ್(3-38) ಯಶಸ್ವಿ ಬೌಲರ್ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್

ದಕ್ಷಿಣ ಆಫ್ರಿಕ ಮೊದಲ ಇನಿಂಗ್ಸ್: 259

ಆಸ್ಟ್ರೇಲಿಯ ಮೊದಲ ಇನಿಂಗ್ಸ್: 307/6

(ಉಸ್ಮಾನ್ ಖ್ವಾಜಾ ಅಜೇಯ 138, ಸ್ಮಿತ್ 59, ಹ್ಯಾಂಡ್‌ಕಾಂಬ್ 54, ಸ್ಟಾರ್ಕ್ ಅಜೇಯ 16, ಅಬಾಟ್ 3-38)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News