×
Ad

ಇಂಗ್ಲೆಂಡ್ ವಿರುದ್ಧ ಮೊಹಾಲಿಯಲ್ಲಿ ಮೂರನೆ ಟೆಸ್ಟ್

Update: 2016-11-25 23:24 IST

ಮೊಹಾಲಿ, ನ.25: ಇಂಗ್ಲೆಂಡ್ ವಿರುದ್ಧ ಮೂರನೆ ಕ್ರಿಕೆಟ್ ಟೆಸ್ಟ್ ಪಂದ್ಯ ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ಶನಿವಾರ ಆರಂಭಗೊಳ್ಳಲಿದ್ದು, ಭಾರತ ಗೆಲುವಿನ ಅಭಿಯಾನ ಮುಂದುವರಿಸುವ ಯೋಜನೆಯಲ್ಲಿದೆ.
ಸ್ಪಿನ್ನರ್‌ಗಳ ಸ್ನೇಹಿಯಾಗಿರುವ ಪಿಸಿಎ ಕ್ರೀಡಾಂಗಣದಲ್ಲಿ ಕಳೆದ ವರ್ಷ ದಕ್ಷಿಣ ಆಫ್ರಿಕ ವಿರುದ್ಧ ನಡೆದ ಪಂದ್ಯ ಮೂರೇ ದಿನಗಳಲ್ಲಿ ಮುಗಿದಿತ್ತು. ಉಭಯ ತಂಡಗಳ ಪತನಗೊಂಡ 40 ವಿಕೆಟ್‌ಗಳಲ್ಲಿ 34 ವಿಕೆಟ್‌ಗಳನ್ನು ಸ್ಪಿನ್ನರ್‌ಗಳು ಎಗರಿಸಿದ್ದರು. ರವೀಂದ್ರ ಜಡೇಜ ಮತ್ತು ರವಿಚಂದ್ರನ್ ಅಶ್ವಿನ್ ತಲಾ 8 ವಿಕೆಟ್‌ಗಳನ್ನು ಹಂಚಿಕೊಂಡು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಜಡೇಜ, ಅಶ್ವಿನ್ ಮತ್ತು ಜಯಂತ್ ಯಾದವ್ ಇಂಗ್ಲೆಂಡ್‌ನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿ ಭಾರತಕ್ಕೆ 246 ರನ್‌ಗಳ ಗೆಲುವು ತಂದು ಕೊಟ್ಟಿದ್ದರು. ಈ ಪಂದ್ಯದಲ್ಲೂ ಅದೇ ಪ್ರದರ್ಶನ ಮುಂದುವರಿಸುವ ಯೋಜನೆಯಲ್ಲಿದ್ದಾರೆ.
ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ತಂಡವಾಗಿರುವ ಭಾರತ ತವರಿನಲ್ಲಿ ಕಳೆದ 16 ಟೆಸ್ಟ್‌ಗಳಲ್ಲಿ ಸೋತಿಲ್ಲ. 13ರಲ್ಲಿ ಜಯ ಗಳಿಸಿದೆ. ಮೂರರಲ್ಲಿ ಡ್ರಾ ಸಾಧಿಸಿದೆ. ಮೊಹಾಲಿಯಲ್ಲಿ ವೇಗಿಗಳಿಗೆ ಮಿಂಚುವ ಅವಕಾಶ ಕಡಿಮೆ .
 ಇಂಗ್ಲೆಂಡ್‌ನ ತಂಡದಲ್ಲಿರುವ ಆಟಗಾರರ ಪೈಕಿ ಐದು ಮಂದಿ ಆಟಗಾರರು 2012-13ರಲ್ಲಿ ಭಾರತ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ತಂಡದ ಸದಸ್ಯರಾಗಿದ್ದಾರೆ. ಭಾರತ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಸೋತಿದ್ದ ತಂಡ ಎರಡನೆ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ತಿರುಗೇಟು ನೀಡಿತ್ತು. ಈ ಕಾರಣದಿಂದಾಗಿ ತಂಡದ ಇನ್ನೂ ಗೆಲ್ಲುವ ವಿಶ್ವಾಸದಲ್ಲಿದೆ.
ಇಂಗ್ಲೆಂಡ್‌ಗೆ ಮೂರನೆ ಟೆಸ್ಟ್‌ನಲ್ಲಿ ಗೆಲ್ಲುವ ಮೂಲಕ ಗೆಲುವಿನ ಹಳಿಗೆ ಮರಳಲು ಅವಕಾಶ ಇದ್ದರೂ, ಈಗಿನ ಪರಿಸ್ಥಿತಿಯಲ್ಲಿ ಕಷ್ಟ ಸಾಧ್ಯ. ಯಾಕೆಂದರೆ ಬಾಂಗ್ಲಾ ವಿರುದ್ಧ ಸೋತು ಭಾರತಕ್ಕೆ ಬಂದಿರುವ ಇಂಗ್ಲೆಂಡ್ ಮೊದಲ ಟೆಸ್ಟ್‌ನಲ್ಲಿ ಚೇತರಿಸಿಕೊಂಡಂತೆ ಕಂಡು ಬಂದಿದ್ದರೂ, ಎರಡನೆ ಟೆಸ್ಟ್ ವೇಳೆಗೆ ತಂಡದ ಸಾಮರ್ಥ್ಯ ಅನಾವರಣಗೊಂಡಿದೆ.
  ಭಾರತಕ್ಕೆ ಸ್ಪರ್ಧೆ ನೀಡಬೇಕಾದರೆ ತಂಡದ ನಾಯಕ ಅಲಿಸ್ಟರ್ ಕುಕ್ ಮತ್ತು ಜೋ ರೂಟ್ ತಮ್ಮ ನೈಜ ಆಟವನ್ನು ಪ್ರದರ್ಶಿಸಬೇಕು. ಇದರ ಜೊತೆಗೆ ಮಧ್ಯಮ ಸರದಿ ಬಲಿಷ್ಠವಾಗಬೇಕಿದೆ. ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತದ ಸ್ಕೋರ್ ದಾಖಲಿಸಿ ಭಾರತವನ್ನು ಒತ್ತಡಕ್ಕೆ ಸಿಲುಕಿಸಬೇಕಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆದ ಕಳೆದ ಟೆಸ್ಟ್‌ನಲ್ಲಿ ಕೊಹ್ಲಿ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ವಂಚಿತಗೊಂಡಿದ್ದರು. ಎರಡನೆ ಇನಿಂಗ್ಸ್‌ನಲ್ಲಿ ಶತಕ ವಂಚಿತಗೊಂಡಿದ್ದರೂ ಅವರು ಒಟ್ಟು 248 ರನ್ ಸೇರಿಸಿದ್ದರು. ಮೊದಲ ದಿನವೇ ಕೊಹ್ಲಿ ಶತಕ ದಾಖಲಿಸಿದ್ದರು. ಇಂಗ್ಲೆಂಡ್ ವಿರುದ್ಧ ಕಳೆದ 13 ಇನಿಂಗ್ಸ್‌ಗಳಲ್ಲಿ ಮೊದಲ ಬಾರಿ 50ಕ್ಕಿಂತ ಅಧಿಕ ರನ್ ದಾಖಲಿಸಿದ್ದರು. ಇಂಗ್ಲೆಂಡ್ ವಿರುದ್ಧ ಅಶ್ವಿನ್ ಮೊದಲ ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದರು.ಪಂದ್ಯದ ಗೆಲುವಿನಲ್ಲಿ ಇವರು ದೊಡ್ಡ ಕೊಡುಗೆ ನೀಡಿದ್ದರು. ಈ ಕಾರಣದಿಂದಾಗಿ ಇಂಗ್ಲೆಂಡ್ ಮೊಹಾಲಿಯಲ್ಲಿ ಮಿಂಚಬೇಕಾದರೆ ಕೊಹ್ಲಿ ಮತ್ತು ಅಶ್ವಿನ್ ಅವರ ಬ್ಯಾಟಿಂಗ್ ಮತ್ತು ಬೌಲಿಂಗ್‌ಗೆ ಕಡಿವಾಣ ಹಾಕಬೇಕಾಗಿದೆ.
 
 ಇನ್ ದಿ ಸ್ಪಾಟ್ ಲೈಟ್: ಜೋಸ್ ಬಟ್ಲರ್ ಕಳೆದ 12 ತಿಂಗಳ ಅವಧಿಯಲ್ಲಿ ಕೇವಲ ಒಂದು ಪಂದ್ಯ ಆಡಿದ್ದರು. ಇದೀಗ ತಂಡದ ಮಧ್ಯಮ ಸರದಿಯಲ್ಲಿ ಅವರು ನಿರ್ಣಾಯಕ ಬ್ಯಾಟ್ಸ್‌ಮನ್. ಟ್ರಾವೊರ್ ಬೈಲೀಸ್ ಅವರು ಬಟ್ಲರ್ ಸಾಮರ್ಥ್ಯದ ಬಗ್ಗೆ ಗುಣಗಾನ ಮಾಡಿದ್ದಾರೆ. ಅಜಿಂಕ್ಯ ರಹಾನೆ ನ್ಯೂಝಿಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ 188 ರನ್ ಗಳಿಸಿದ್ದರು. ಆದರೆ ಇಂಗ್ಲೆಂಡ್ ವಿರುದ್ಧ ಎರಡೂ ಟೆಸ್ಟ್‌ಗಳಲ್ಲಿ ದೊಡ್ಡ ಮೊತ್ತದ ಸ್ಕೋರ್ ಅವರಿಂದ ದಾಖಲಾಗಿಲ್ಲ. ಮೊಹಾಲಿಯಲ್ಲಿ ಅವರಿಂದ ದೊಡ್ಡ ಕೊಡುಗೆ ನಿರೀಕ್ಷಿಸಲಾಗಿದೆ.ಭಾರತ ತಂಡದಲ್ಲಿ ಐವರು ತಜ್ಞ ಬ್ಯಾಟ್ಸ್‌ಮನ್‌ಗಳಿದ್ದಾರೆ.
 ತಂಡದ ಸಮಾಚಾರ: ಭಾರತ ತಂಡದಲ್ಲಿ ಒಂದು ಬದಲಾವಣೆ ಇದೆ. ಗಾಯಾಳು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಬದಲಿಗೆ ತಂಡದಲ್ಲಿ ಪಾರ್ಥಿವ್ ಪಟೇಲ್ ಸ್ಥಾನ ಪಡೆದಿದ್ದಾರೆ. ಪಾರ್ಥಿವ್ ಪಟೇಲ್ ಎಂಟು ವರ್ಷಗಳ ಬಳಿಕ ತಂಡಕ್ಕೆೆ ವಾಪಸಾಗಿದ್ದಾರೆ.
ಇಂಗ್ಲೆಂಡ್ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದೆ. ಬೆನ್ ಡಕೆಟ್ ಬದಲಿಗೆ ಜೋಸ್ ಬಟ್ಲರ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಕ್ರಿಸ್ ವೋಕೆಸ್ ಅವರು ಗಾಯಾಳು ಸ್ಟುವರ್ಟ್ ಬ್ರಾಡ್ ಬದಲಿಗೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಗ್ಯಾರೆತ್‌ಬ್ಯಾಟಿ ಅವರು ಜಾಫರ್ ಅನ್ಸಾರಿ ಬದಲಿಗೆ ಅವಕಾಶ ಪಡೆದಿದ್ದಾರೆ.
ಸಂಭಾವ್ಯ ತಂಡ
ಭಾರತ : ವಿರಾಟ್ ಕೊಹ್ಲಿ(ನಾಯಕ), ಕೆ.ಎಲ್.ರಾಹುಲ್,ಮುರಳಿ ವಿಜಯ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಆರ್.ಅಶ್ವಿನ್, ಪಾರ್ಥಿವ್ ಪಟೇಲ್(ವಿಕೆಟ್ ಕೀಪರ್), ರವೀಂದ್ರ ಜಡೇಜ, ಜಯಂತ್ ಯಾದವ್, ಉಮೇಶ್ ಯಾದವ್, ಮುಹಮ್ಮದ್ ಶಮಿ.
 ಇಂಗ್ಲೆಂಡ್: ಅಲಿಸ್ಟರ್ ಕುಕ್(ನಾಯಕ), ಹಸೀಬ್ ಹಮೀದ್, ಜೋ ರೂಟ್, ಮೊಯಿನ್ ಅಲಿ, ಜಾನಿ ಬೈರ್‌ಸ್ಟೋವ್(ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್, ಜೊಸ್ ಬಟ್ಲರ್, ಕ್ರಿಸ್ ವೋಕೆಸ್, ಆದಿಲ್ ರಶೀದ್, ಗ್ಯಾರೆತ್ ಬ್ಯಾಟಿ, ಜೇಮ್ಸ್ ಆ್ಯಂಡರ್ಸನ್.
 
ಪಿಚ್ ಮತ್ತು ವಾತಾವರಣ: ಪಿಸಿಎ ಕ್ರೀಡಾಂಗಣದ ಒಣಗಿದ ಮತ್ತು ನಯವಾದ ಪಿಚ್ ಸ್ಪಿನ್ನರ್‌ಗಳ ಸ್ನೇಹಿಯಾಗಿದೆ. ನಿಧಾನಗತಿಯ ಬೌಲರ್‌ಗಳಿಗೆ ಯಶಸ್ಸು ನಿಶ್ಚಿತ. ವೇಗದ ಬೌಲರ್‌ಗಳಿಗೆ ಬೌಲಿಂಗ್ ಇಲ್ಲಿ ಸವಾಲೇ ಸರಿ. ಉತ್ತರ ಭಾರತದಲ್ಲಿ ಚಳಿಗಾಲ ಆಗಮಿಸಿರುವ ಹಿನ್ನೆಲೆಯಲ್ಲಿ ತಂಪಾದ ವಾತಾವರಣದಲ್ಲಿ ಟೆಸ್ಟ್ ನಡೆಯಲಿದೆ.

ಹೈಲೈಟ್ಸ್
 *ಮೊಯಿನ್ ಅಲಿಗೆ ಟೆಸ್ಟ್‌ನಲ್ಲಿ 100 ವಿಕೆಟ್‌ಗಳ ಮೈಲುಗಲ್ಲು ತಲುಪಲು ಇನ್ನೂ 5 ವಿಕೆಟ್ ಪಡೆಯಬೇಕಾಗಿದೆ.
 *ಭಾರತ ಮೊಹಾಲಿಯಲ್ಲಿ 1994ರಲ್ಲಿ ಗೆಲುವಿನ ಅಭಿಯಾನ ಆರಂಭಿಸಿತ್ತು. ಆ ಬಳಿಕ ಇಲ್ಲಿ ಸೋಲು ಅನುಭವಿಸಿಲ್ಲ. 6 ಪಂದ್ಯಗಳಲ್ಲಿ ಜಯ ಗಳಿಸಿದೆ. 5ರಲ್ಲಿ ಡ್ರಾ ಸಾಧಿಸಿದೆ.
 *ವಿರಾಟ್ ಕೊಹ್ಲಿಗೆ ಟೆಸ್ಟ್‌ನಲ್ಲಿ 4,000 ರನ್ ಪೂರೈಸಲು ಇನ್ನು 109 ರನ್ ಗಳಿಸಬೇಕಾಗಿದೆ.
*ಅಲಿಸ್ಟರ್ ಕುಕ್‌ಗೆ 11,000 ರನ್‌ಗಳ ಕ್ಲಬ್ ಸೇರ್ಪಡೆಗೆ 105 ರನ್ ಸೇರಿಸಬೇಕಾಗಿದೆ.
*ಕಳೆದ ಟೆಸ್ಟ್‌ನ ಎರಡನೆ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 75 ರನ್ ಗಳಿಸಿದ್ದ ಇಂಗ್ಲೆಂಡ್ ಬಳಿಕ 158ಕ್ಕೆ ಆಲೌಟಾಗಿತ್ತು.
,,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News