×
Ad

ಮೂರನೆ ಟೆಸ್ಟ್: ಭಾರತ ಮೊದಲ ಇನಿಂಗ್ಸ್‌ನಲ್ಲಿ 271/6

Update: 2016-11-27 17:16 IST
ಮೂರನೆ ವಿಕೆಟ್‌ಗೆ 75 ರನ್‌ಗಳ ಜೊತೆಯಾಟ ನೀಡಿದ ಪೂಜಾರ ಮತ್ತು ಕೊಹ್ಲಿ .

ಮೊಹಾಲಿ, ನ.27: ಇಲ್ಲಿ ನಡೆಯುತ್ತಿರುವ ಮೂರನೆ ಕ್ರಿಕೆಟ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಒತ್ತಡಕ್ಕೆ ಸಿಲುಕಿದ್ದು, ಎರಡನೆ ದಿನದಾಟದಂತ್ಯಕ್ಕೆ  ಮೊದಲ ಇನಿಂಗ್ಸ್‌ನಲ್ಲಿ 84 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 271 ರನ್ ಗಳಿಸಿದೆ.
ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್‌ನ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇಂಗ್ಲೆಂಡ್‌ನ್ನು ಮೊದಲ ಇನಿಂಗ್ಸ್‌ನಲ್ಲಿ 283 ರನ್‌ಗಳಿಗೆ ನಿಯಂತ್ರಿಸಿದ ಭಾರತ ಆಟಗಾರರು ಸ್ಪಿನ್ನರ್‌ಗಳ ದಾಳಿಯನ್ನು ಎದುರಿಸುವಲ್ಲಿ ಎಡವಿದ್ದಾರೆ.
 ಆರನೆ ವಿಕೆಟ್‌ಗೆ ಆಲ್‌ರೌಂಡರ್‌ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜ ಮುರಿಯದ ಜೊತೆಯಾಟದಲ್ಲಿ67 ರನ್ ಗಳಿಸಿ ಬ್ಯಾಟಿಂಗ್‌ನ್ನು ಮೂರನೆ ದಿನಕ್ಕೆ ಕಾಯ್ದಿರಿಸಿದ್ದಾರೆ.ಇಂಗ್ಲೆಂಡ್‌ನ ಮೊತ್ತವನ್ನು ಸರಿಗಟ್ಟಲು ಭಾರತ ಇನ್ನೂ 12 ರನ್‌ ಗಳಿಸಬೇಕಾಗಿದೆ
   ಅಶ್ವಿನ್ ಔಟಾಗದೆ 57 ರನ್  ಮತ್ತು ಜಡೇಜ ಔಟಾಗದೆ 31 ರನ್ ಗಳಿಸಿದ್ದಾರೆ.
 ಭಾರತದ ಚೇತೇಶ್ವರ ಪೂಜಾರ (51) ಮತ್ತು ನಾಯಕ ವಿರಾಟ್ ಕೊಹ್ಲಿ (62) ಅರ್ಧಶತಕ ದಾಖಲಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಮುರಳಿ ವಿಜಯ್ (12) ಜೊತೆ ಇನಿಂಗ್ಸ್ ಆರಂಭಿಸಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ 42 ರನ್ ಗಳಿಸಿ ಔಟಾದರು.
ಅಜಿಂಕ್ಯ ರಹಾನೆ (0) ಅವರನ್ನು ಆದಿಲ್ ರಶೀದ್ ಖಾತೆ ತೆರೆಯಲು ಬಿಡಲಿಲ್ಲ. ಚೊಚ್ಚಲ ಟೆಸ್ಟ್ ಆಡುತ್ತಿರುವ ಕರುಣ್ ನಾಯರ್(4) ಅವರು ನಾಯಕ ಕೊಹ್ಲಿ ಜೊತೆ ಅನಗತ್ಯವಾಗಿ ರನ್ ಕದಿಯಲು ಯತ್ನಿಸಿ ರನೌಟಾದರು. ಕೊಹ್ಲಿ ಮತ್ತು ಪೂಜಾರ ಮೂರನೆ ವಿಕೆಟ್‌ಗೆ 75 ರನ್‌ಗಳ ಜೊತೆಯಾಟ ನೀಡಿದರು. ಇದು ಭಾರತದ ಪರ ಮೊದಲ ಇನಿಂಗ್ಸ್‌ನಲ್ಲಿ ದಾಖಲಾದ ಗರಿಷ್ಠ ರನ್‌ಗಳ ಜೊತೆಯಾಟವಾಗಿದೆ.

ಇಂಗ್ಲೆಂಡ್‌ನ ಬೌಲರ್‌ಗಳಾದ ಆದಿಲ್ ರಶೀದ್ 3 ವಿಕೆಟ್ ಮತ್ತು ಸ್ಟೋಕ್ಸ್ 2 ವಿಕೆಟ್ ಪಡೆದರು.
 ಇಂಗ್ಲೆಂಡ್ 283: ಇದಕ್ಕೂ ಮೊದಲು ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 93.5 ಓವರ್‌ಗಳಲ್ಲಿ 283 ರನ್‌ಗಳಿಗೆ ಆಲೌಟಾಗಿದೆ. ಮೊದಲ ದಿನದಾಟದಂತ್ಯಕ್ಕೆ 90 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 268 ರನ್ ಗಳಿಸಿದ್ದ ಇಂಗ್ಲೆಂಡ್ ಈ ಮೊತ್ತಕ್ಕೆ 15 ರನ್ ಸೇರಿಸಿತು. 4 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದ ಆದಿಲ್ ರಶೀದ್ ದಿನದ ಎರಡನೆ ಓವರ್‌ನ ಮೊದಲ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
ಕೊನೆಯ ವಿಕೆಟ್‌ಗೆ ಗ್ಯಾರೆತ್ ಬ್ಯಾಟಿಗೆ ಜೇಮ್ಸ್ ಆ್ಯಡರ್ಸನ್ ಜೊತೆಯಾದರು. ಇವರ ಜೊತೆಯಾಟದಲ್ಲಿ 15 ರನ್ ತಂಡದ ಖಾತೆಗೆ ಸೇರ್ಪಡೆಗೊಂಡಿತು. ಬ್ಯಾಟಿ 1 ರನ್ ಗಳಿಸಿದ್ದಾಗ ಮುಹಮ್ಮದ್ ಶಮಿ ಅವರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಜೇಮ್ಸ್ ಆ್ಯಂಡರ್ಸನ್ 13 ರನ್(9ಎ,1ಬೌ) ಗಳಿಸಿ ಔಟಾಗದೆ ಉಳಿದರು. ಭಾರತದ ಪರ ವೇಗಿ ಮುಹಮ್ಮದ್ ಶಮಿ 63ಕ್ಕೆ 3 ವಿಕೆಟ್ ಉಡಾಯಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. 

ಉಮೇಶ್ ಯಾದವ್ 58ಕ್ಕೆ 2, ಜಯಂತ್ ಯಾದವ್ 49ಕ್ಕೆ 2, ರವೀಂದ್ರ ಜಡೇಜ 59ಕ್ಕೆ 2 ಮತ್ತು ಆರ್.ಅಶ್ವಿನ್ 43ಕ್ಕೆ 1 ವಿಕೆಟ್ ಪಡೆದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News