ಇಸ್ರೇಲ್: ಕೊನೆಗೂ ನಿಯಂತ್ರಣಕ್ಕೆ ಬಂದ ಕಾಡ್ಗಿಚ್ಚು

Update: 2016-11-27 16:25 GMT

ಜೆರುಸಲೇಂ.ನ.27: ಇಸ್ರೇಲ್ ಹಾಗೂ ಪಶ್ಚಿಮದಂಡೆಯ ವಸಾಹತು ಪ್ರದೇಶಗಳಲ್ಲಿ ಕಳೆದ ಮೂರು ದಿನಗಳಿಂದ ಆರ್ಭಟಿಸುತ್ತಿರುವ ಕಾಡ್ಗಿಚ್ಚನ್ನು ನಂದಿಸುವಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಕಾಡ್ಗಿಚ್ಚಿನ ಹಾವಳಿಯಿಂದಾಗಿ ಸಹಸ್ರಾರು ಮಂದಿ ಮನೆಮಾರುಗಳನ್ನು ತೊರೆದು ಸುರಕ್ಷಿತ ಪ್ರದೇಶಗಳಿಗೆ ಪಲಾಯನಗೈದಿರುವುದಾಗಿ ಇಸ್ರೇಲಿ ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರದಿಂದ ಇಸ್ರೇಲ್‌ನಾದ್ಯಂತ ಹರಡಿರುವ ಕಾಡ್ಗಿಚ್ಚನ್ನು ನಂದಿಸಲು ಅಗ್ನಿಶಾಮಕದಳದ ಸಿಬ್ಬಂದಿಗಳು ಅಹೋರಾತ್ರಿ ಶ್ರಮಿಸುತ್ತಿದ್ದು, ಕೊನೆಗೂ ಶನಿವಾರ ರಾತ್ರಿ ಅದನ್ನು ನಿಯಂತ್ರಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ. ಇಸ್ರೇಲ್‌ನ ಪ್ರಮುಖ ನಗರವಾದ ಹೈಫಾದಲ್ಲೂ ಕಾಡ್ಗಿಚ್ಚು ತನ್ನ ಆಟಾಟೋಪವನ್ನು ಪ್ರದರ್ಶಿಸಿದ್ದು, ಅಲ್ಲಿ ನೂರಾರು ಮನೆಗಳು ಹಾಗೂ ಕಟ್ಟಡಗಳು ಅಗ್ನಿಗಾಹುತಿಯಾಗಿವೆ.

ರಶ್ಯ,ಕೆನಡ,ಗ್ರೀಸ್, ಟರ್ಕಿ, ಫ್ರಾನ್ಸ್,ಸ್ಪೇನ್ ಸೇರಿದಂತೆ ವಿವಿಧ ದೇಶಗಳಿಂದ ಅಗ್ನಿಶಾಮಕದಳ ವಿಮಾನಗಳು ಇಸ್ರೇಲ್‌ಗೆ ಧಾವಿಸಿಬಂದಿದ್ದು, ಕಾಡ್ಗಿಚ್ಚು ಹರಡಿರುವ ಪ್ರದೇಶಗಳ ಮೇಲೆ ನೂರಾರು ಟನ್ ನೀರು ಸುರಿದು, ಬೆಂಕಿ ನಂದಿಸಲು ಯತ್ನಿಸಿವೆ. ಫೆಲೆಸ್ತೀನ್ ಆಡಳಿತವೂ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದು, ತನ್ನ 41 ಅಗ್ನಿಶಾಮಕವಾಹಗಳು ಹಾಗೂ ಎಂಟು ಟ್ರಕ್‌ಗಳನ್ನು ಕಾಡ್ಗಿಚ್ಚು ಪೀಡಿತ ಪ್ರದೇಶಗಳಿಗೆ ಕಳುಹಿಸಿಕೊಟ್ಟಿದೆ.
ಈ ಮಧ್ಯೆ ಸನ್ನಿವೇಶದ ದುರ್ಲಾಭ ಪಡೆದು ಬೆಂಕಿಯನ್ನು ಹರಡುವಂತೆ ಮಾಡಿದ್ದಾರೆಂದು ಶಂಕಿಸಲಾದ 23 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News