ಮಕಾವು ಓಪನ್‌ನಿಂದ ಹಿಂದೆ ಸರಿದ ಸಿಂಧು
ಹೊಸದಿಲ್ಲಿ, ನ.28: ಚೀನಾ ಓಪನ್ ಹಾಗೂ ಹಾಂಕಾಂಗ್ ಓಪನ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ.ಸಿಂಧು ಮಕಾವು ಓಪನ್‌ನಿಂದ ಹೊರಗುಳಿದಿದ್ದಾರೆ.
ಮಕಾವು ಓಪನ್‌ನಲ್ಲಿ ಹಾಲಿ ಚಾಂಪಿಯನ್ ಆಗಿರುವ ಸಿಂಧು ಈ ವರ್ಷ ಎರಡನೆ ಶ್ರೇಯಾಂಕ ಪಡೆದಿದ್ದರು. ಮಕಾವು ಓಪನ್‌ನಲ್ಲಿ ಪ್ರತಿ ಬಾರಿ ಸ್ಪರ್ಧಿಸುವ ಸಿಂಧು 2013ರಿಂದ ಸತತ ಮೂರು ಪ್ರಶಸ್ತಿಗಳನ್ನು ಜಯಿಸಿದ್ದರು.
‘‘ಚೀನಾ ಹಾಗೂ ಹಾಂಕಾಂಗ್ ಓಪನ್‌ನ ಬಳಿಕ ವಿಶ್ರಾಂತಿ ಪಡೆಯಲು ಬಯಸಿದ್ದೇನೆ. ಈ ಹಿನ್ನೆಲೆಯಲ್ಲಿ ಮಕಾವು ಓಪನ್‌ನಿಂದ ಹಿಂದೆ ಸರಿಯುವೆ. ಡಿಸೆಂಬರ್‌ನಲ್ಲಿ ನಡೆಯಲಿರುವ ವಿಶ್ವ ಸೂಪರ್ ಸರಣಿಯಲ್ಲಿ ಭಾಗವಹಿಸಲು ತಯಾರಿ ನಡೆಸುವೆ’’ ಎಂದು ಸಿಂಧು ತಿಳಿಸಿದರು.
ಸಿಂಧು ಟೂರ್ನಿಯಿಂದ ಹಿಂದೆ ಸರಿದ ಕಾರಣ ಸೈನಾ ನೆಹ್ವಾಲ್ ಡ್ರಾನಲ್ಲಿರುವ ಭಾರತದ ಪ್ರಮುಖ ಆಟಗಾರ್ತಿಯಾಗಿದ್ದಾರೆ. ಸೈನಾ ತನ್ನ ಮೊದಲ ಪಂದ್ಯದಲ್ಲಿ ಇಂಡೋನೇಷ್ಯದ ಹನ್ನಾ ರಮದಿನಿ ಅವರನ್ನು ಎದುರಿಸಲಿದ್ದಾರೆ.
ಸಿಂಧು ಪಾಲಿಗೆ ಕಳೆದೆರಡು ವಾರ ತೃಪ್ತಿದಾಯಕವಾಗಿತ್ತು. ಚೀನಾ ಓಪನ್‌ನಲ್ಲಿ ಮೊದಲ ಬಾರಿ ಸೂಪರ್ ಸರಣಿ ಜಯಿಸಿದ್ದ ಸಿಂಧು ಹಾಂಕಾಂಗ್ ಓಪನ್‌ನಲ್ಲಿ ಎರಡನೆ ಸ್ಥಾನ ಪಡೆದಿದ್ದರು.