ರಣಜಿಯಲ್ಲಿ ದೇವೇಂದ್ರ ಐತಿಹಾಸಿಕ ಸಾಧನೆ
ಹೊಸದಿಲ್ಲಿ, ನ.28: ಮಧ್ಯಪ್ರದೇಶದ ರಣಜಿ ತಂಡದ ನಾಯಕ ದೇವೇಂದ್ರ ಬಂಡೇಲಾ ಐತಿಹಾಸಿಕ ಸಾಧನೆ ಮಾಡುವತ್ತ ಹೆಜ್ಜೆ ಇಟ್ಟಿದ್ದಾರೆ.
ಇನ್ನೆರಡು ತಿಂಗಳಲ್ಲಿ 40ರ ವಸಂತಕ್ಕೆ ಕಾಲಿಡಲಿರುವ ದೇವೇಂದ್ರ ‘ಬಂಡಿ ಬಾಯ್’ ಎಂದೇ ಸಹ ಆಟಗಾರರಿಂದ ಕರೆಯಲ್ಪಡುತ್ತಿದ್ದಾರೆ. 1995-96ರಲ್ಲಿ 19ರ ಹರೆಯದಲ್ಲಿ ರಣಜಿ ಟ್ರೋಫಿಗೆ ಕಾಲಿಟ್ಟಿರುವ ದೇವೇಂದ್ರ ಈಗಲೂ ರಣಜಿಯಲ್ಲಿ ಸಕ್ರಿಯರಾಗಿದ್ದಾರೆ. ಅವರ ಸಮಕಾಲೀನ ಆಟಗಾರರಲ್ಲಿ ಕೆಲವರು ನಿವೃತ್ತಿಯಾಗಿದ್ದರೆ, ಇನ್ನು ಕೆಲವರು ಕೋಚ್‌ಗಳಾಗಿ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ವೀಕ್ಷಕವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಂಗಳವಾರ ದೇವೇಂದ್ರ 137ನೆ ರಣಜಿ ಪಂದ್ಯ ಆಡಲಿದ್ದಾರೆ. ಈ ಮೂಲಕ ತನ್ನ ಸ್ನೇಹಿತ, ಮುಂಬೈ ತಂಡದ ಮಾಜಿ ನಾಯಕ ಅಮೊಲ್ ಮುಝುಂದಾರ್ ದಾಖಲೆಯನ್ನು ಸರಿಗಟ್ಟಲಿದ್ದಾರೆ.
83 ವರ್ಷಗಳ ರಣಜಿ ಇತಿಹಾಸದಲ್ಲಿ ಮುಝಂದಾರ್ ಗರಿಷ್ಠ ಪಂದ್ಯಗಳನ್ನು ಆಡಿರುವ ಸಾಧನೆ ಮಾಡಿದ್ದಾರೆ.
ಕ್ರಿಕೆಟ್ ನನ್ನಲ್ಲಿ ಶಿಸ್ತನ್ನು ತಂದುಕೊಟ್ಟಿದೆ. ಮಧ್ಯಪ್ರದೇಶದ ಕ್ರಿಕೆಟ್ ಚರಿತ್ರೆಯಿಲ್ಲದ ಉಜ್ಜೈನಿಯಿಂದ ಬಂದಿರುವ ನನಗೆ ವೃತ್ತಿಪರ ಕ್ರಿಕೆಟ್‌ಗೆ ಹೊಂದಿಕೊಳ್ಳಲು ಸಮಯ ಬೇಕಾಯಿತು.ನಾನು ತವರು ಪಟ್ಟಣದಿಂದ ಇಂದೋರ್‌ಗೆ ತೆರಳಿದೆ. ನನಗೆ ಎದುರಾದ ಸವಾಲು ನನ್ನನ್ನು ಕಠಿಣ ಪರಿಶ್ರಮಿಯನ್ನಾಗಿಸಿತು. ನನ್ನದು ದೀರ್ಘ ಪಯಣ. ಈ ಪಯಣದಲ್ಲಿ ಸಾಕಷ್ಟು ಏರಿಳಿತವಿದ್ದವು. ಸೀಮಿತ ಅವಕಾಶದಲ್ಲೂ ಉತ್ತಮ ಪ್ರದರ್ಶನ ನೀಡಿರುವ ತೃಪ್ತಿ ನನಗಿದೆ ಎಂದು ದೇವೇಂದ್ರ ಹೇಳಿದ್ದಾರೆ.
ಸಚಿನ್ ತೆಂಡುಲ್ಕರ್,ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಹಾಗೂ ಸೌರವ್ ಗಂಗುಲಿ ಅವರೊಂದಿಗೆ ಬೆಳೆದಿರುವ ದೇವೇಂದ್ರ, ಅವರೆಲ್ಲರೂ ನೈಜ ಕೊಡುಗೆಯಾಗಿದ್ದಾರೆ ಎಂದರು.
ಇಂದು ರಣಜಿ ಆರಂಭ:ಕರ್ನಾಟಕ-ಸೌರಾಷ್ಟ್ರ ಸೆಣಸು
ಪಾಟಿಯಾಲ, ನ.28: ರಣಜಿ ಟ್ರೋಫಿಯ ಬಿ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿರುವ ಕರ್ನಾಟಕ ತಂಡ ಮಂಗಳವಾರ ಇಲ್ಲಿ ಆರಂಭವಾಗಲಿರುವ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ. ಈ ವರ್ಷದ ರಣಜಿಯಲ್ಲಿ ಕರ್ನಾಟಕ ತಂಡ ಅಜೇಯ ದಾಖಲೆ ಕಾಯ್ದುಕೊಂಡಿದೆ.
ಕರ್ನಾಟಕ ಈ ತನಕ 6 ಪಂದ್ಯಗಳನ್ನು ಆಡಿದ್ದು, ಈ ಪೈಕಿ 4ರಲ್ಲಿ ಜಯ, ಎರಡು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಒಟ್ಟು 30 ಅಂಕ ಗಳಿಸಿ ‘ಬಿ’ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿದೆ.
ಮತ್ತೊಂದೆಡೆ, ಸೌರಾಷ್ಟ್ರ ತಂಡ ಆರು ಪಂದ್ಯಗಳಲ್ಲಿ 4 ಪಂದ್ಯಗಳನ್ನು ಸೋತಿದೆ. 2ರಲ್ಲಿ ಜಯ ಸಾಧಿಸಿ ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.