×
Ad

ಮೊಹಾಲಿಯಲ್ಲಿ ಮೊಳಗಿದ ವಿಜಯ ದುಂದುಭಿ

Update: 2016-11-29 15:58 IST

ಮೊಹಾಲಿ , ನ.29: ಇಂಗ್ಲೆಂಡ್ ವಿರುದ್ಧ ಮೂರನೆ ಟೆಸ್ಟ್ ಪಂದ್ಯದಲ್ಲಿ ಭಾರತ ಎಂಟು ವಿಕೆಟ್‌ಗಳ ಭರ್ಜರಿ ಜಯ ಗಳಿಸಿದ್ದು, ಐದು ಟೆಸ್ಟ್‌ಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್‌ನ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್‌ನ ನಾಲ್ಕನೆ ದಿನವಾಗಿರುವ ಇಂದು ಎರಡನೆ ಇನಿಂಗ್ಸ್‌ನಲ್ಲಿ ಗೆಲುವಿಗೆ 103 ರನ್‌ಗಳ ಸವಾಲು ಪಡೆದ ಭಾರತ 20.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 104 ರನ್ ಗಳಿಸಿ ಗೆಲುವಿನ ನಗೆ ಬೀರಿದೆ.
ಆರಂಭಿಕ ದಾಂಡಿಗ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ ಔಟಾಗದೆ 80 ನಿಮಿಷಗಳ ಬ್ಯಾಟಿಂಗ್‌ನಲ್ಲಿ 54 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ ಆಕರ್ಷಕ 67 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿದರು. ನಾಯಕ ವಿರಾಟ್ ಕೊಹ್ಲಿ ಔಟಾಗದೆ 6 ರನ್ ಗಳಿಸಿದರು.
ಎಂಟು ವರ್ಷಗಳ ಬಳಿಕ ಟೀಮ್ ಇಂಡಿಯಾಕ್ಕೆ ವಾಪಸಾಗಿದ್ದ ಪಾರ್ಥಿವ್ ಪಟೇಲ್ ಮೊದಲ ಇನಿಂಗ್ಸ್‌ನಲ್ಲಿ 42 ರನ್ ಗಳಿಸಿ ಐದನೆ ಅರ್ಧಶತಕ ವಂಚಿತಗೊಂಡಿದ್ದರು.ಆದರೆ ಎರಡನೆ ಇನಿಂಗ್ಸ್‌ನಲ್ಲಿ ಅರ್ಧಶತಕ ದಾಖಲಿಸಿ ತನ್ನನ್ನು ತಂಡಕ್ಕೆ ಸೇರಿಸಿಕೊಂಡ ಆಯ್ಕೆಗಾರರ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡರು.
ಪಾರ್ಥಿವ್ ಪಟೇಲ್ ಜೊತೆ ಇನಿಂಗ್ಸ್ ಆರಂಭಿಸಿದ ಮುರಳಿ ವಿಜಯ್ ಕೇವಲ 6 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದರು. 8ಎಸೆತಗಳನ್ನು ಎದುರಿಸಿದ ಅವರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. 1.5ನೆ ಓವರ್‌ನಲ್ಲಿ ವೋಕ್ಸ್ ಎಸೆತದಲ್ಲಿ ರೂಟ್‌ಗೆ ಕ್ಯಾಚ್ ನೀಡುವುದರೊಂದಿಗೆ ಭಾರತದ ಮೊದಲ ವಿಕೆಟ್ ಪತನಗೊಂಡಿತು.
ಎರಡನೆ ವಿಕೆಟ್‌ಗೆ ಪಾರ್ಥಿವ್‌ಗೆ ಚೇತೇಶ್ವರ ಪೂಜಾರ ಜೊತೆಯಾದರು. ಇವರ ಜೊತೆಯಾಟದಲ್ಲಿ 81 ರನ್ ತಂಡದ ಖಾತೆಗೆ ಸೇರ್ಪಡೆಗೊಂಡಿತು. 25 ರನ್ (63ನಿ, 50ಎ, 4ಬೌ) ಗಳಿಸಿದ ಪೂಜಾರ ರಶೀದ್ ಎಸೆತದಲ್ಲಿ ರೂಟ್‌ಗೆ ಕ್ಯಾಚ್ ನೀಡಿದರು. 17.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 88 ರನ್ ಗಳಿಸಿದ ಭಾರತಕ್ಕೆ ಪಾರ್ಥಿವ್ ಪಟೇಲ್ ಮತ್ತು ಕೊಹ್ಲಿ ಮೂರನೆ ವಿಕೆಟ್‌ಗೆ 3 ಓವರ್‌ಗಳಲ್ಲಿ 16 ರನ್ ಸೇರಿಸಿ ಗೆಲುವಿನ ವಿಧಿ ವಿಧಾನ ಪೂರೈಸಿದರು.ಇದರೊಂದಿಗೆ ಭಾರತ 17 ಟೆಸ್ಟ್‌ಗಳಲ್ಲಿ ತವರಲ್ಲಿ ಗೆಲುವಿನ ಅಜೇಯ ಓಟ ಮುಂದುವರಿಸಿತು.
   ಇದರೊಂದಿಗೆ ಇಂಗ್ಲೆಂಡ್‌ಗೆ ಭಾರತವನ್ನು ಎರಡನೆ ಇನಿಂಗ್ಸ್‌ನಲ್ಲಿ 103ರೊಳಗೆ ನಿಯಂತ್ರಿಸಿ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ. ಕ್ರಿಕೆಟ್ ಇತಿಹಾಸದಲ್ಲಿ ಎರಡು ತಂಡಗಳಿಗೆ ತಲಾ ಒಂದು ಬಾರಿ ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿ ಗೆಲುವಿನ ನಗೆ ಬೀರಿತ್ತು.ಆಸ್ಟ್ರೇಲಿಯ ಆಗಸ್ಟ್ 1882ರಲ್ಲಿ ಇಂಗ್ಲೆಂಡ್‌ನ್ನು, ಮತ್ತು ವೆಸ್ಟ್‌ಇಂಡೀಸ್ ತಂಡ ಮಾರ್ಚ್ 2000ರಲ್ಲಿ 99 ರನ್‌ಗಳ ಸವಾಲನ್ನು ಝಿಂಬಾಬ್ವೆ ತಂಡವನ್ನು 63 ರನ್‌ಗಳಿಗೆ ನಿಯಂತ್ರಿಸಿ ಗೆಲುವು ಸಾಧಿಸಿತ್ತು.
    ಇಂಗ್ಲೆಂಡ್ 236ಕ್ಕೆ ಆಲೌಟ್: ಮೂರನೆ ದಿನದಾಟದಂತ್ಯಕ್ಕೆ 38 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 78 ರನ್ ಗಳಿಸಿದ್ದ ಇಂಗ್ಲೆಂಡ್‌ಗೆ ದೊಡ್ಡ ಮೊತ್ತದ ಸವಾಲನ್ನು ಸೇರಿಸಲು ಸಾಧ್ಯವಾಗಲಿಲ್ಲ. ನಿನ್ನೆಯ ಮೊತ್ತಕ್ಕೆ 158ರನ್ ಸೇರಿಸಲಷ್ಟೇ ಶಕ್ತವಾಗಿದೆ. 90.2ಓವರ್‌ಗಳಲ್ಲಿ 236 ರನ್‌ಗಳಿಗೆ ಆಲೌಟಾಗಿದೆ.
 ಮೂರನೆ ದಿನದಾಟದಂತ್ಯಕ್ಕೆ 36 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಜೋ ರೂಟ್ ಜೊತೆ ಬ್ಯಾಟಿಂಗ್ ಮುಂದುವರಿಸಿದ ನೈಟ್‌ವಾಚ್‌ಮೆನ್ ಗ್ಯಾರಿ ಬ್ಯಾಟಿ ಅವರನ್ನು ಇಂದಿನ ಆಟದ ಎರಡನೆ ಓವರ್‌ನ ಎರಡನೆ ಎಸೆತದಲ್ಲಿ ರವೀಂದ್ರ ಜಡೇಜ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.
 ಬಟ್ಲರ್ 18 ಎಸೆತಗಳಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿ 18 ರನ್ ಗಳಿಸಿ ವಾಪಸಾದಾಗ ತಂಡದ ಸ್ಕೋರ್ 46.4 ಓವರ್‌ಗಳಲ್ಲಿ 107 ಆಗಿತ್ತು. ಏಳನೆ ವಿಕೆಟ್ ಗೆ ರೂಟ್‌ಗೆ ಯುವ ಆಟಗಾರ ಹಮೀದ್ ಜೊತೆಯಾದರು. ಆರಂಭಿಕ ಬ್ಯಾಟ್ಸ್‌ಮನ್ ಆಗಿ ನಾಯಕ ಕುಕ್ ಜೊತೆ ಕಣಕ್ಕಿಳಿಯುತ್ತಿದ್ದ ಹಮೀದ್ ಕೈ ಬೆರಳಿಗೆ ಆಗಿದ್ದ ಗಾಯದ ಕಾರಣದಿಂದಾಗಿ ಕೆಳಕ್ರಮಾಂಕದಲ್ಲಿ ಆಡಿದ್ದರು. ಹಮೀದ್ ಅವರು ಏಕಾಂಗಿ ಹೋರಾಟ ನಡೆಸುತ್ತಿದ್ದ ರೂಟ್‌ಗೆ ಹೋರಾಟಕ್ಕೆ ಉತ್ತಮ ಬೆಂಬಲ ನೀಡಿದರು. ಏಳನೆ ವಿಕೆಟ್‌ಗೆ ಹಮೀದ್ ಮತ್ತು ರೂಟ್ ಜೊತೆಯಾಟದಲ್ಲಿ 45 ರನ್ ಸೇರಿಸಿದರು. 78 ರನ್ (179ಎ, 6ಬೌ) ಗಳಿಸಿದ್ದ ರೂಟ್ ಅವರಿಗೆ ಜಡೇಜ ಪೆವಿಲಿಯನ್ ಹಾದಿ ತೋರಿಸುವುದರೊಂದಿಗೆ ಇವರ ಜೊತೆಯಾಟವನ್ನು ಮುರಿದರು.
 ವೋಕ್ಸ್ ಮತ್ತು ಹಮೀದ್ 8ನೆ ವಿಕೆಟ್‌ಗೆ ಜೊತೆಯಾಟದಲ್ಲಿ 43 ರನ್ ಸೇರಿಸಿದರು. 30 ರನ್ ಗಳಿಸಿದ ವೋಕ್ಸ್ ಮುಹಮ್ಮದ್ ಶಮಿ ಎಸೆತದಲ್ಲಿ ಪಾರ್ಥಿವ್ ಪಟೇಲ್‌ಗೆ ಕ್ಯಾಚ್ ನೀಡಿದರು. ಇದರ ಬೆನ್ನಲ್ಲೆ ಆದಿಲ್ ರಶೀದ್ (0) ಅವರನ್ನು ಬಂದ ದಾರಿಯಲ್ಲೇ ಹಿಂದಕ್ಕೆ ಕಳುಹಿಸುವ ಮೂಲಕ ಶಮಿ ಇಂಗ್ಲೆಂಡ್‌ಗೆ ಆಘಾತ ನೀಡಿದರು.
ಕೊನೆಯಲ್ಲಿ ಹಮೀದ್ ಮತ್ತು ಆ್ಯಂಡರ್ಸನ್ ಭಾರತದ ದಾಳಿಯನ್ನು ಎದುರಿಸುವ ಜವಾಬ್ದಾರಿ ಹೊತ್ತುಕೊಂಡರು. 90.2ನೆ ಓವರ್‌ನಲ್ಲಿ ಆ್ಯಂಡರ್ಸನ್ ಅವರನ್ನು ಜಡೇಜ ಮತ್ತು ಅಶ್ವಿನ್ ರನೌಟ್ ಮಾಡುವುದರೊಂದಿಗೆ ಇಂಗ್ಲೆಂಡ್‌ನ ಇನಿಂಗ್ಸ್‌ನ್ನು ಮುಗಿಸಿದರು. ಆ್ಯಂಡರ್ಸನ್ 5 ರನ್ ಗಳಿಸಿದರು. ಹಮೀದ್ 59 ರನ್(156ಎ, 6ಬೌ,1ಸಿ) ಗಳಿಸಿ ಅಜೇಯರಾಗಿ ಉಳಿದರು. ಹಮೀದ್ ಮೂರನೆ ಟೆಸ್ಟ್‌ನಲ್ಲಿ ಎರಡನೆ ಅರ್ಧಶತಕ ದಾಖಲಿಸಿದರು.

ಭಾರತದ ಪರ ಆರ್ ಅಶ್ವಿನ್ 81ಕ್ಕೆ 3 ವಿಕೆಟ್, ಮುಹಮ್ಮದ್ ಶಮಿ 37ಕ್ಕೆ 2, ರವೀಂದ್ರ ಜಡೇಜ 62ಕ್ಕೆ 2 ಮತ್ತು ಜಯಂತ್ ಯಾದವ್ 21ಕ್ಕೆ 2 ವಿಕೆಟ್ ಪಡೆದರು. ಮೊದಲ ಇನಿಂಗ್ಸ್‌ನಲ್ಲಿ 90 ರನ್, ಎರಡೂ ಇನಿಂಗ್ಸ್‌ಗಳಲ್ಲಿ ಒಟ್ಟು 4 ವಿಕೆಟ್(2+2) ಪಡೆದಿದ್ದ ರವೀಂದ್ರ ಜಡೇಜ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News