ಗಲ್ಲಿ ಕ್ರಿಕೆಟ್‌ನಲ್ಲಿ ಗಂಗುಲಿ ಬ್ಯಾಟಿಂಗ್

Update: 2016-12-05 18:04 GMT

ಕೋಲ್ಕತಾ, ಡಿ.5: ಭಾರತ ಕಂಡ ಯಶಸ್ವಿ ನಾಯಕ ಸೌರವ್ ಗಂಗುಲಿ ಭರ್ಜರಿ ಬ್ಯಾಟಿಂಗ್‌ನಿಂದ ಎದುರಾಳಿ ಬೌಲರ್‌ಗಳನ್ನು ಕಾಡುತ್ತಿದ್ದರು. ಅಭಿಮಾನಿಗಳಿಂದ ‘ದಾದಾ’ ಎಂದು ಕರೆಯಲ್ಪಡುವ ಗಂಗುಲಿ ಕ್ರಿಕೆಟ್‌ನಿಂದ ನಿವೃತ್ತಿಯಾಗಿ 8 ವರ್ಷಗಳು ಕಳೆದಿವೆ. ಇದೀಗ ಅವರು ಬ್ಯಾಟ್ ಹಿಡಿದು ತನ್ನ ದಾದಾಗಿರಿ ತೋರಿಸಿದ್ದಾರೆ.

 ಪ್ರಸ್ತುತ ಬಂಗಾಳ ಕ್ರಿಕೆಟ್ ಸಂಸ್ಥೆಯ(ಸಿಎಬಿ) ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಗಂಗುಲಿ ಗಲ್ಲಿ ಕ್ರಿಕೆಟ್‌ನಲ್ಲಿ ಮಕ್ಕಳೊಂದಿಗೆ ಟೆನಿಸ್ ಬಾಲ್‌ನೊಂದಿಗೆ ಕ್ರಿಕೆಟ್ ಆಡಿ ಎಲ್ಲರನ್ನು ರಂಜಿಸಿದರು.

ಭರ್ಜರಿ ಸಿಕ್ಸರ್ ಸಿಡಿಸಿದ ಗಂಗುಲಿ ಆಫ್ ಸೈಡ್‌ನಲ್ಲಿ ಹೊಡೆತ ಬಾರಿಸಿದರು. ಎಡಗೈ ಬ್ಯಾಟ್ಸ್‌ಮನ್ ಗಂಗುಲಿ ಬಲಗೈನಲ್ಲಿ ಬ್ಯಾಟಿಂಗ್ ಮಾಡಿ ಗಮನ ಸೆಳೆದರು.

ಗಂಗುಲಿ 2008ರಲ್ಲಿ ಆಸ್ಟ್ರೇಲಿಯ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದರು. 2007ರಲ್ಲಿ ಪಾಕಿಸ್ತಾನ ವಿರುದ್ಧ ಕೊನೆಯ ಏಕದಿನ ಆಡಿದ್ದರು.

 ಭಾರತದ ಶ್ರೇಷ್ಠ ನಾಯಕನೆಂದು ಪರಿಗಣಿಸಲ್ಪಟ್ಟಿರುವ ಗಂಗುಲಿ 2003ರ ವಿಶ್ವಕಪ್‌ನಲ್ಲಿ ಭಾರತ ಫೈನಲ್‌ಗೆ ತಲುಪಲು ನೆರವಾಗಿದ್ದರು. ಗಂಗುಲಿ ನಾಯಕತ್ವದಲ್ಲಿ ಭಾರತ ತಂಡ ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ನೆಲದಲ್ಲಿ ಮೊದಲ ಬಾರಿ ಟೆಸ್ಟ್ ಪಂದ್ಯ ಜಯಿಸಿದೆ.

ಭಾರತದ ಪರ 113 ಟೆಸ್ಟ್ ಪಂದ್ಯಗಳನ್ನು ಆಡಿರುವ ಗಂಗುಲಿ 7,212 ರನ್ ಗಳಿಸಿದ್ದಾರೆ. 311 ಏಕದಿನಗಳಲ್ಲಿ 11,363 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News