×
Ad

ಚೆನ್ನೈ ಟೆಸ್ಟ್: ಕಾದು ನೋಡುವ ತಂತ್ರಕ್ಕೆ ಮೊರೆ ಹೋದ ಬಿಸಿಸಿಐ

Update: 2016-12-06 23:15 IST

 ಹೊಸದಿಲ್ಲಿ, ಡಿ.6: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ನಿಧನರಾದ ಬಳಿಕ ಆ ರಾಜ್ಯದಲ್ಲಿ ನೆಲೆಸಿರುವ ಸೂಕ್ಷ್ಮ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತ ಹಾಗೂ ಇಂಗ್ಲೆಂಡ್‌ನ ನಡುವೆ ಐದನೆ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಚೆನ್ನೈನಲ್ಲಿ ನಡೆಸುವ ಬಗ್ಗೆ ಕಾದು ನೋಡುವ ತಂತ್ರ ಅಳವಡಿಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ.

ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ಚೆನ್ನೈನಲ್ಲಿ ಡಿ.16 ರಿಂದ 20ರ ತನಕ ನಿಗದಿಯಾಗಿದೆ.

‘‘ಚೆನ್ನೈನಲ್ಲಿ ನಿಗದಿಯಾಗಿರುವ ಟೆಸ್ಟ್ ಪಂದ್ಯದ ಬಗ್ಗೆ ಹಲವು ಸುದ್ದಿಗಳು ಬರುತ್ತಿವೆ. ಮಾನ್ಯ ಮುಖ್ಯಮಂತ್ರಿಗಳು ನಿಧನರಾಗುವ ಮೂಲಕ ಚೆನ್ನೈನಲ್ಲಿ ದುರದೃಷ್ಟಕರ ಘಟನೆ ನಡೆದಿದೆ. ಚೆನ್ನೈ ಟೆಸ್ಟ್ ಪಂದ್ಯದ ಬಗ್ಗೆ ಬಿಸಿಸಿಐ ಇನ್ನೂ ನಿರ್ಧರಿಸಿಲ್ಲ ಎಂದು ಸ್ಪಷ್ಟಪಡಿಸುವೆವು ಎಂದು ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ಸುದ್ದಿಗಾರರಿಗೆ ತಿಳಿಸಿದರು.

 ನಾವು ಯಾವುದೇ ಡೆಡ್‌ಲೈನ್ ನಿಗದಿಪಡಿಸಿಲ್ಲ. ಅದೊಂದು ಸೂಕ್ಷ್ಮ ವಿಷಯವಾಗಿರುವ ಕಾರಣ ಯಾವುದೇ ಗಡುವು ನಿಗದಿಪಡಿಸಲು ಸಾಧ್ಯವಿಲ್ಲ. ತಮಿಳುನಾಡು ರಾಜ್ಯ ಕ್ರಿಕೆಟ್ ಸಂಸ್ಥೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಪ್ರತಿದಿನ ಅಲ್ಲಿನ ಪರಸ್ಥಿತಿಯನ್ನು ಗಮನಿಸಲಿದ್ದೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಅಜಯ್ ಸಿರ್ಕೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಚೆನ್ನೈ ಟೆಸ್ಟ್‌ಗೆ ಸಂಬಂಧಿಸಿ ನಾವು ಈಗಲೇ ಏನು ನಿರ್ಧಾರ ತೆಗೆದುಕೊಂಡಿಲ್ಲ.ನಾವು ಚೆನ್ನೈನ ಪರಿಸ್ಥಿತಿಯನ್ನು ಪರಿಶೀಲಿಸಲು ಅಲ್ಲಿನ ಕ್ರಿಕೆಟ್ ಸಂಸ್ಥೆ ಹಾಗೂ ಸ್ಥಳೀಯಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಬಿಸಿಸಿಐ ವಿಷಯದ ಸೂಕ್ಷ್ಮತೆಯನ್ನು ಚೆನ್ನಾಗಿ ಅರಿತಿದೆ ಎಂದು ಕ್ರಿಕೆಟ್ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ. ಒಡಿಶಾ ಹಾಗೂ ಜಾರ್ಖಂಡ್‌ನ ನಡುವೆ ಡಿ.7 ರಂದು ತಮಿಳುನಾಡಿನ ದಿಂಡಿಗಲ್‌ನಲ್ಲಿ ನಿಗದಿಯಾಗಿರುವ ರಣಜಿ ಟ್ರೋಫಿ ಬಿ ಗುಂಪಿನ ಪಂದ್ಯಗಳು ಬೇರೆಡೆಗೆ ಸ್ಥಳಾಂತರವಾಗುವ ಸಾಧ್ಯತೆಯಿದೆ.

ಒಡಿಶಾ ಹಾಗೂ ಜಾರ್ಖಂಡ್ ನಡುವಿನ ರಣಜಿ ಪಂದ್ಯ ಬೇರೆಡೆಗೆ ಸ್ಥಳಾಂತರವಾಗಲಿದೆ. ಹೊಸ ತಾಣ ಹಾಗೂ ಸ್ಥಳವನ್ನು ಶೀಘ್ರವೇ ಘೋಷಿಸಲಾಗುತ್ತದೆ ಎಂದು ಶಿರ್ಕೆ ತಿಳಿಸಿದರು.

ಕಳೆದ ತಿಂಗಳು ಹೊಸದಿಲ್ಲಿಯಲ್ಲಿ ದಟ್ಟ ಮಂಜು ಕವಿದು, ವಾತಾವರಣ ಕಲುಷಿತಗೊಂಡ ಕಾರಣ ರದ್ದಾಗಿದ್ದ ಎರಡು ರಣಜಿ ಪಂದ್ಯಗಳು ಈ ತಿಂಗಳಾಂತ್ಯದಲ್ಲಿ ನಡೆಯುವುದಿಲ್ಲ. ಪಂದ್ಯ ರದ್ಧತಿಯಿಂದ ತೊಂದರೆಗೀಡಾಗಿರುವ ನಾಲ್ಕು ತಂಡಗಳಾದ-ಹೈದರಾಬಾದ್, ತ್ರಿಪುರಾ, ಬಂಗಾಳ ಹಾಗೂ ಗುಜರಾತ್‌ಗೆ ತಲಾ ಒಂದು ಅಂಕ ಗಳಿಸಲಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News