×
Ad

ವಿಜಯ್‌ರನ್ನು ಟೀಕಿಸುವುದು ಸರಿಯಲ್ಲ: ಕುಂಬ್ಳೆ

Update: 2016-12-06 23:17 IST

ಮುಂಬೈ, ಡಿ.6: ‘‘ಶಾರ್ಟ್‌ಬಾಲ್ ಎಸೆತವನ್ನು ಎದುರಿಸಲು ಪರದಾಡುತ್ತಿರುವ ಹಿರಿಯ ಆರಂಭಿಕ ಆಟಗಾರ ಮುರಳಿ ವಿಜಯ್ ಅವರನ್ನು ಟೀಕಿಸುವುದು ಸರಿಯಲ್ಲ. ಅವರು ಶೀಘ್ರವೇ ಕಳಪೆ ಫಾರ್ಮ್‌ನಿಂದ ಹೊರಬರಲಿದ್ದಾರೆ’’ ಎಂದು ಭಾರತದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ.

‘‘ವಿಜಯ್ ಕಳೆದ ಕೆಲವು ವರ್ಷಗಳಿಂದ ಭಾರತದ ಪರ ಸ್ಥಿರ ಪ್ರದರ್ಶವನ್ನು ನೀಡುತ್ತಾ ಬಂದಿದ್ದಾರೆ. ರಾಜ್‌ಕೋಟ್‌ನಲ್ಲಿ ಶತಕ ಬಾರಿಸುವ ಮೂಲಕ ಇಂಗ್ಲೆಂಡ್ ವಿರುದ್ದ ಸರಣಿ ಆರಂಭಿಸಿದ್ದಾರೆ. ಅವರು ಶಾರ್ಟ್‌ಬಾಲ್ ಎಸೆತದಲ್ಲಿ ಔಟ್ ಆಗುತ್ತಿದ್ದಾರೆ. ಇದು ಅವರ ದೌರ್ಬಲ್ಯವೆಂದು ಹೇಳಲು ಸಾಧ್ಯವಿಲ್ಲ. ಹಾಗೇ ಹೇಳುವುದು ನ್ಯಾಯವಲ್ಲ. ಅವರು ಶೀಘ್ರವೇ ದೊಡ್ಡ ಸ್ಕೋರ್ ದಾಖಲಿಸಲಿದ್ದಾರೆ’’ ಎಂದು ಕುಂಬ್ಳೆ ವಿಶ್ವಾಸ ವ್ಯಕ್ತಪಡಿಸಿದರು.

‘‘ನಾವು ನೆಟ್ ಪ್ರಾಕ್ಟೀಸ್‌ನ ವೇಳೆ ವಿಜಯ್‌ಗೆ ನೆರವಾಗಲು ಯತ್ನಿಸಿದ್ದೇವೆ. ಅವರು ಒಂದೇ ರೀತಿಯ ಎಸೆತದಲ್ಲಿ ಔಟಾಗುತ್ತಿರುವ ಬಗ್ಗೆ ಆಳವಾಗಿ ಚಿಂತಿಸುವ ಅಗತ್ಯವಿಲ್ಲ’’ ಎಂದು ಕುಂಬ್ಳೆ ಹೇಳಿದರು.

ಪ್ರಸ್ತುತ ಸ್ವದೇಶಿ ಟೆಸ್ಟ್ ಸರಣಿಯಲ್ಲಿ ಭಾರತ ಆರಂಭಿಕ ಆಟಗಾರರ ಸಮಸ್ಯೆಯನ್ನು ಎದುರಿಸುತ್ತಿದೆ. ಶಿಖರ್ ಧವನ್ ಫಾರ್ಮ್ ಕಳೆದುಕೊಳ್ಳ್ಳುವ ಜೊತೆಗೆ ಗಾಯಾಳುವಾಗಿದ್ದಾರೆ. ಕೆಎಲ್ ರಾಹುಲ್ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಗೌತಮ್ ಗಂಭೀರ್ ಅವಕಾಶ ಬಳಸಿಕೊಳ್ಳಲು ವಿಫಲರಾಗಿದ್ದಾರೆ.

‘‘ಆಟಗಾರರು ಗಾಯಗೊಳ್ಳುವುದು ನಮ್ಮ ಹಿಡಿತದಲ್ಲಿಲ್ಲದ ವಿಚಾರ. ಅದು ಕ್ರೀಡೆಯಲ್ಲಿ ಸಾಮಾನ್ಯ. ಕೆಎಲ್ ರಾಹುಲ್ ದ್ವಿತೀಯ ಟೆಸ್ಟ್‌ನಲ್ಲಿ ಗಾಯಗೊಂಡರು. ಮೂರನೆ ಟೆಸ್ಟ್‌ನಲ್ಲಿ ಪಾರ್ಥಿವ್ ಪಟೇಲ್ ಆಡಿದರು. ಪಟೇಲ್ ಕಳೆದ ಪಂದ್ಯದಲ್ಲಿ ಚೆನ್ನಾಗಿ ಆಡಿದ್ದಾರೆ’’ ಎಂದು ಕುಂಬ್ಳೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News