×
Ad

ಪಾಕ್ ವಿರುದ್ಧ ಹಾಕಿ ಪಂದ್ಯಗಳ ಪುನರಾರಂಭಕ್ಕೆ ರೂಪಿಂದರ್,ಶ್ರೀಜೇಶ್ ಒಲವು

Update: 2016-12-06 23:19 IST

ಹೊಸದಿಲ್ಲಿ, ಡಿ.6: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಕ್ರೀಡಾ ಸಂಬಂಧವನ್ನು ಪುನರಾರಂಭಿಸುವ ಬಗ್ಗೆ ಭಾರತೀಯ ಹಾಕಿ ಆಟಗಾರರಾದ ರೂಪಿಂದರ್ ಪಾಲ್ ಸಿಂಗ್ ಹಾಗೂ ನಾಯಕ ಪಿ.ಆರ್.ಶ್ರೀಜೇಶ್ ಒಲವು ವ್ಯಕ್ತಪಡಿಸಿದ್ದಾರೆ.

ನೆರೆಯ ರಾಷ್ಟ್ರ ಪಾಕಿಸ್ತಾನ ತಂಡ ಭಾರತಕ್ಕೆ ಪ್ರವಾಸ ಕೈಗೊಳ್ಳುವ ಅವಕಾಶವನ್ನು ಯಾವುದೇ ಕಾರಣಕ್ಕೆ ತಪ್ಪಿಸಿಕೊಳ್ಳಬಾರದು ಎಂದು ಹೇಳಿದ್ದಾರೆ.

ಕ್ರೀಡಾಳುವಾಗಿ ಟೂರ್ನಿಗಳಲ್ಲಿ ನಮಗೆ ಅವಕಾಶ ಲಭಿಸಿದಾಗಲೆಲ್ಲಾ ಆಡಬೇಕು. ಆದರೆ, ಇವೆಲ್ಲವೂ ಸುರಕ್ಷತೆಯ ವಿಷಯವಾಗಿದ್ದು, ಪರಿಸ್ಥಿತಿ ಭಿನ್ನವಾಗಿದೆ ಎಂದು ರೂಪಿಂದರ್ ಹೇಳಿದರು.

ಏಷ್ಯನ್ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿದ ಅನುಭವ ಹೇಗಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ರೂಪಿಂದರ್,‘‘ಪಾಕಿಸ್ತಾನ ವಿರುದ್ಧ ಆಡುವಾಗ ವಿಭಿನ್ನ ಅನುಭವವಾಗುತ್ತದೆ. ಪಾಕ್ ವಿರುದ್ಧ ಪಂದ್ಯ ಉಳಿದೆಲ್ಲಾ ಪಂದ್ಯಗಳಿಗಿಂತ ಭಿನ್ನವಾದುದು ಎಂದರು.

ವಿಶ್ವಶ್ರೇಷ್ಠ ಡ್ರಾಗ್ ಫ್ಲಿಕರ್ ಆಗಿರುವ ರೂಪಿಂದರ್ ಪಾಲ್ ಸಿಂಗ್, ಚಾಂಪಿಯನ್ಸ್ ಟ್ರೋಫಿಯಲ್ಲಿ 11 ಗೋಲುಗಳನ್ನು ಬಾರಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.

ಪಾಕಿಸ್ತಾನ ವಿರುದ್ಧ ಪಂದ್ಯವನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿದ ವಿಕೆಟ್‌ಕೀಪರ್ ಪಿಆರ್ ಶ್ರೀಜೇಶ್,‘‘ಪಾಕಿಸ್ತಾನ ತಂಡ ಭಾರತಕ್ಕೆ ಬರುವ ಬಗ್ಗೆ ಚಿಂತಿಸಬಾರದು. ಪ್ರವಾಸಿ ತಂಡಗಳಿಗೆ ಭಾರತದಲ್ಲಿ ಭದ್ರತೆಯ ಭೀತಿ ಇಲ್ಲ. ಟೂರ್ನಿಯ ಆರಂಭಕ್ಕೆ ಮೊದಲು ಯಾವುದು ಭಿನ್ನವಾಗಿರುವುದಿಲ್ಲ. ಪಂದ್ಯದ ಮೊದಲು ಎರಡೂ ತಂಡದ ಆಟಗಾರರ ಮುಖದಲ್ಲಿ ನಗುವಿರುತ್ತದೆ. ಡೈನಿಂಗ್ ಟೇಬಲ್‌ನಲ್ಲಿ ಒಟ್ಟಿಗೆ ಕಾಫಿ ಕುಡಿಯುತ್ತೇವೆ. ಪಂದ್ಯ ಮುಗಿದ ಬಳಿಕ ಭಾರತ ಹಾಗೂ ಆಟಗಾರರಲ್ಲಿ ದ್ವೇಷವಿರುವುದಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News