ನಾಲ್ಕನೆ ಟೆಸ್ಟ್: ಜೆನ್ನಿಂಗ್ಸ್ ಚೊಚ್ಚಲ ಶತಕ; ಇಂಗ್ಲೆಂಡ್ 288/5
ಮುಂಬೈ, ಡಿ.8: ಇಲ್ಲಿ ಆರಂಭಗೊಂಡ ನಾಲ್ಕನೆ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತ ವಿರುದ್ಧ ಆರಂಭಿಕ ದಾಂಡಿಗ ಕೀಟನ್ ಜೆನ್ನಿಂಗ್ಸ್ ಶತಕದ ನೆರವಿನಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
ಮೊದಲ ದಿನದಾಟದಂತ್ಯಕ್ಕೆ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 94 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 288 ರನ್ ಗಳಿಸಿದೆ.
ಬೆನ್ ಸ್ಟೋಕ್ಸ್ 25 ರನ್ ಮತ್ತು ಜೋ ಬಟ್ಲರ್ 18 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದಾರೆ. ಟಾಸ್ ಜಯಿಸಿದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡು ದೊಡ್ಡ ಮೊತ್ತ ದ ಸ್ಕೋರ್ ದಾಖಲಿಸುವ ಸೂಚನೆ ನೀಡಿದೆ.
ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ಚೊಚ್ಚಲ ಟೆಸ್ಟ್ ಆಡಿದ ಇಂಗ್ಲೆಂಡ್‌ನ ಆರಂಭಿಕ ದಾಂಡಿಗ ಕೀಟನ್ ಜೆನ್ನಿಂಗ್ಸ್ ಶತಕ ದಾಖಲಿಸಿದರು. ಇದರೊಂದಿಗೆ ಟೆಸ್ಟ್ ಪ್ರವೇಶದಲ್ಲೇ ಶತಕ ದಾಖಲಿಸಿದ ಇಂಗ್ಲೆಂಡ್‌ನ ನಾಲ್ಕನೆ ಮತ್ತು ವಿಶ್ವದ 69ನೆ ಆಟಗಾರ ಎನಿಸಿಕೊಂಡರು.
ಗಾಯಾಳು ಹಮೀದ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಜೆನ್ನಿಂಗ್ಸ್ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ನಾಯಕ ಅಲಿಸ್ಟರ್ ಕುಕ್ ಜೊತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್‌ನ 11ನೆ ಆಟಗಾರ.
ಮಾಜಿ ಹೆಡ್ ಕೋಚ್ ರೇ ಜೆನ್ನಿಂಗ್ಸ್ ಅವರ ಪುತ್ರ ಜೆನ್ನಿಂಗ್ಸ್ ಅವರು ಕುಕ್ ಜೊತೆ ಇನಿಂಗ್ಸ್ ಆರಂಭಿಸಿ ಇಂಗ್ಲೆಂಡ್ ತಂಡಕ್ಕೆ ಉತ್ತಮವಾದ ಅಡಿಪಾಯ ಹಾಕಿಕೊಡುವಲ್ಲಿ ನೆರವಾದರು. ಇವರ ಜೊತೆಯಾಟದಲ್ಲಿ ತಂಡದ ಖಾತೆಗೆ 99 ರನ್ ಸೇರ್ಪಡೆಗೊಂಡಿತು.
25.3ನೆ ಓವರ್‌ನಲ್ಲಿ ನಾಯಕ ಕುಕ್ ಅವರನ್ನು ಜಡೇಜ ಎಸೆತದಲ್ಲಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಸ್ಟಂಪ್ ಮಾಡಿದರು. ಕುಕ್ 46 ರನ್(60ಎ, 5ಬೌ) ಗಳಿಸಿದರು.
ಜೋ ರೂಟ್ 21 ರನ್ ಗಳಿಸಿ ರವಿಚಂದ್ರನ್ ಅಶ್ವಿನ್ ಎಸೆತದಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿದರು.
ಮೂರನೆ ವಿಕೆಟ್‌ಗೆ ಜೆನ್ನಿಂಗ್ಸ್ ಮತ್ತು ಮೊಯಿನ್ ಅಲಿ 96 ರನ್‌ಗಳ ಜೊತೆಯಾಟ ನೀಡಿದರು. 48.2ನೆ ಓವರ್‌ನಲ್ಲಿ ಅಶ್ವಿನ್ ಎಸೆತವನ್ನು ಡೀಪ್ ಸ್ಕ್ವಾರ್‌ಲೆಗ್ ಕಡೆಗೆ ಅಟ್ಟಿದ ಜೆನಿಂಗ್ಸ್ ಅವರು ಅಲಿ ಜೊತೆ 1ರನ್ ಪೂರೈಸಿದರು. ಈ ಹಂತದಲ್ಲಿ ಚೆಂಡನ್ನು ಹಿಡಿದ ಭುವನೇಶ್ವರ ಕುಮಾರ್ ವಿಕೆಟ್ ಕೀಪರ್ ಅವರತ್ತ ಎಸೆದಿದ್ದರು. ಆದರೆ ಚೆಂಡು ಫೀಲ್ಡ್ ಅಂಪೈರ್ ಪಾಲ್ ರಿಫೆಲ್ ತಲೆಗೆ ಬಡಿಯಿತು. ಪಾಲ್ ಕೆಳಕ್ಕೆ ಬಿದ್ದ ಘಟನೆ ನಡೆಯಿತು. ಈ ಕಾರಣದಿಂದಾಗಿ ಸ್ವಲ್ಪ ಹೊತ್ತು ಆಟಕ್ಕೆ ಅಡಚಣೆ ಉಂಟಾಗಿತ್ತು.
58.4ನೆ ಓವರ್‌ನಲ್ಲಿ ಜಯಂತ್ ಯಾದವ್ ಎಸೆತದಲ್ಲಿ ಚೆಂಡನ್ನು ಬೌಂಡರಿಗಟ್ಟಿದ ಜೆನ್ನಿಂಗ್ಸ್ ಚೊಚ್ಚಲ ಶತಕ ಪೂರ್ಣಗೊಳಿಸಿದರು.
ಜೋಹಾನ್ಸ್‌ಬರ್ಗ್ ಮೂಲದ 24ರ ಹರೆಯದ ಯುವ ಆಟಗಾರ ಕೀಟನ್ ಜೆನ್ನಿಂಗ್ಸ್ 186 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಿಂದ ಶತಕ ದಾಖಲಿಸಿದರು. ಬಳಿಕ ಅವರು 112 ರನ್(219ಎ, 13ಬೌ) ಗಳಿಸಿ ಔಟಾದರು. ಒಂದು ವೇಳೆ 3.3ನೆ ಓವರ್‌ನಲ್ಲಿ ಜೆನ್ನಿಂಗ್ಸ್ ಅವರು ಉಮೇಶ್ ಯಾದವ್ ಎಸೆತದಲ್ಲಿ ನೀಡಿದ ಕಠಿಣ ಕ್ಯಾಚ್‌ನ್ನು ಪಡೆಯುವಲ್ಲಿ ಕರುಣ್ ನಾಯರ್ ಯಶಸ್ವಿಯಾಗುತ್ತಿದ್ದರೆ ಜೆನ್ನಿಂಗ್ಸ್ ಚೊಚ್ಚಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಸೊನ್ನೆ ಸುತ್ತುವ ಸಾಧ್ಯತೆ ಇತ್ತು. ಆದರೆ ಅವರು ಜೀವದಾನ ಪಡೆದರು.
ರೂಟ್ ನಿರ್ಗಮನದ ಬಳಿಕ ಕ್ರೀಸ್‌ಗೆ ಆಗಮಿಸಿದ ಅಲಿ ಅವರು ಜೆನ್ನಿಂಗ್ಸ್‌ಗೆ ಉತ್ತಮ ಬೆಂಬಲ ನೀಡಿದರು. ಇವರ ಜೊತೆಯಾಟದಲ್ಲಿ ತಂಡದ ಖಾತೆಗೆ 94 ರನ್ ಸೇರ್ಪಡೆಗೊಂಡಿತು. ಅಲಿ ಅರ್ಧಶತಕ ದಾಖಲಿಸಿದ ಬೆನ್ನಲ್ಲೆ ಅವರಿಗೆ ಅಶ್ವಿನ್ ಪೆವಿಲಿಯನ್ ಹಾದಿ ತೋರಿಸಿದರು. ಆಗ ತಂಡದ ಸ್ಕೋರ್ 70.2 ಓವರ್‌ಗಳಲ್ಲಿ 230 ಆಗಿತ್ತು. ಅದೇ ಓವರ್‌ನಲ್ಲಿ ಜೆನ್ನಿಂಗ್ಸ್ ಅವರು ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. 80.2ನೆ ಓವರ್‌ನಲ್ಲಿ ಬೈರ್‌ಸ್ಟೋವ್(14) ವಿಕೆಟ್ ಪಡೆಯುವುದರೊಂದಿಗೆ ಅಶ್ವಿನ್ ಇಂಗ್ಲೆಂಡ್‌ಗೆ ಆಘಾತ ನೀಡಿದರು. ಬಳಿಕ ಬೆನ್ ಸ್ಟೋಕ್ಸ್ ಮತ್ತು ಬಟ್ಲರ್ ಮುರಿಯದ ಜೊತೆಯಾಟದಲ್ಲಿ ಆರನೆ ವಿಕೆಟ್‌ಗೆ 39 ರನ್ ಸೇರಿಸಿ ಬ್ಯಾಟಿಂಗ್‌ನ್ನು ಶುಕ್ರವಾರಕ್ಕೆ ಕಾಯ್ದಿರಿಸಿದ್ದಾರೆ.
ಭಾರತದ ರವಿಚಂದ್ರನ್ ಅಶ್ವಿನ್ 75ಕ್ಕೆ 4 ವಿಕೆಟ್ ಮತ್ತು ರವೀಂದ್ರ ಜಡೇಜ 60ಕ್ಕೆ1 ವಿಕೆಟ್ ಪಡೆದರು.
ಸ್ಕೋರ್ ಪಟ್ಟಿ
ಇಂಗ್ಲೆಂಡ್ ಮೊದಲ ಇನಿಂಗ್ಸ್ 94 ಓವರ್‌ಗಳಲ್ಲಿ 5 ವಿಕೆಟ್‌ಗೆ 288
ಅಲಿಸ್ಟರ್ ಕುಕ್ ಸ್ಟಂ.ಪಟೇಲ್ ಬಿ ಜಡೇಜ46
ಜೆನ್ನಿಂಗ್ಸ್ ಸಿ ಪೂಜಾರ ಬಿ ಅಶ್ವಿನ್112
ಜೋ ರೂಟ್ ಸಿ ಕೊಹ್ಲಿ ಬಿ ಅಶ್ವಿನ್21
ಎಂ.ಎಂ. ಅಲಿ ಸಿ ನಾಯರ್ ಬಿ ಅಶ್ವಿನ್50
ಬೈರ್‌ಸ್ಟೋವ್ ಸಿ ಉಮೇಶ್ ಯಾದವ್ ಬಿ ಅಶ್ವಿನ್14
ಬೆನ್ ಸ್ಟೋಕ್ಸ್ ಔಟಾಗದೆ25
ಬಟ್ಲರ್ ಔಟಾಗದೆ18
ಇತರೆ02
ವಿಕೆಟ್ ಪತನ: 1-99, 2-136, 3-230, 4-230, 5-249
ಬೌಲಿಂಗ್ ವಿವರ
ಬಿ.ಕುಮಾರ್11-0-38-0
ಉಮೇಶ್ ಯಾದವ್10-2-36-0
ಆರ್.ಅಶ್ವಿನ್30-3-75-4
ಜಯಂತ್ ಯಾದವ್22-3-78-0
ರವೀಂದ್ರ ಜಡೇಜ21-3-60-1
ಅಂಕಿ-ಅಂಶ
8: ಪಾದಾರ್ಪಣೆ ಪಂದ್ಯದಲ್ಲೇ ಶತಕ ಬಾರಿಸಿದ ಇಂಗ್ಲೆಂಡ್‌ನ 8ನೆ ಆರಂಭಿಕ ಬ್ಯಾಟ್ಸ್‌ಮನ್ ಕೀಟನ್ ಜೆನ್ನಿಂಗ್ಸ್. ಮುಂಬೈ ಟೆಸ್ಟ್‌ನ ಮೊದಲ ದಿನ ಜೆನ್ನಿಂಗ್ಸ್ ಶತಕ ಬಾರಿಸಿದ್ದಾರೆ. ಕಳೆದ 50ವರ್ಷಗಳವಧಿಯಲ್ಲಿ ಆ್ಯಂಡ್ರೂ ಸ್ಟ್ರಾಸ್ ಹಾಗೂ ಅಲಿಸ್ಟರ್ ಕುಕ್ ಈ ಸಾಧನೆ ಮಾಡಿರುವ ಇಂಗ್ಲೆಂಡ್‌ನ ಆರಂಭಿಕ ಆಟಗಾರರಾಗಿದ್ದಾರೆ. ಒಟ್ಟಾರೆ ಜೆನ್ನಿಂಗ್ಸ್ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ ಇಂಗ್ಲೆಂಡ್‌ನ 19ನೆ ಬ್ಯಾಟ್ಸ್‌ಮನ್.
2009: ಈ ಹಿಂದೆ 2009ರಲ್ಲಿ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಜೋನಾಥನ್ ಟ್ರಾಟ್ ದಿ ಓವಲ್ ಅಂಗಳದಲ್ಲಿ ಆಸ್ಟ್ರೇಲಿಯದ ವಿರುದ್ಧ ಈ ಸಾಧನೆ ಮಾಡಿದ್ದರು. ಜೆನ್ನಿಂಗ್ಸ್ ವಿದೇಶಿ ನೆಲದಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ ಇಂಗ್ಲೆಂಡ್‌ನ 9ನೆ ಬ್ಯಾಟ್ಸ್‌ಮನ್. ಭಾರತದ ವಿರುದ್ಧ ಈ ಸಾಧನೆ ಮಾಡಿದ ಮೂರನೆ ದಾಂಡಿಗ.
239: ಆರ್. ಅಶ್ವಿನ್ ಒಟ್ಟು 239 ವಿಕೆಟ್‌ಗಳನ್ನು ಉರುಳಿಸಿದರು. ಈ ಮೂಲಕ ಜಾವಗಲ್ ಎಕ್ಸ್‌ಪ್ರೆಸ್ ಶ್ರೀನಾಥ್(236) ದಾಖಲೆ ಮುರಿದರು. ಅಶ್ವಿನ್ ಭಾರತದ ಪರ ಗರಿಷ್ಠ ವಿಕೆಟ್ ಪಡೆದ 7ನೆ ಬೌಲರ್.
107: ಈ ಹಿಂದೆ ಭಾರತ ವಿರುದ್ಧ ಚೊಚ್ಚಲ ಪಂದ್ಯದಲ್ಲಿ ಇಂಗ್ಲೆಂಡ್‌ನ ಆರಂಭಿಕ ದಾಂಡಿಗ ದಾಖಲಿಸಿದ ಗರಿಷ್ಠ ಸ್ಕೋರ್ 107. 1974-75ರಲ್ಲಿ ಬೆಂಗಳೂರಿನಲ್ಲಿ ಗೊರ್ಡನ್ ಗ್ರೀನಿಜ್ ಈ ಸಾಧನೆ ಮಾಡಿದ್ದರು. ಕುಕ್(ಅಜೇಯ 104) ಹಾಗೂ ಕೇವಿನ್ ಪೀಟರ್ಸನ್(100) ಭಾರತ ವಿರುದ್ಧ ಆಡಿರುವ ತನ್ನ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ್ದಾರೆ.
51: ಅಶ್ವಿನ್ ಟೆಸ್ಟ್ ಕ್ರಿಕೆಟ್‌ನ ಮೊದಲ ದಿನ 51 ವಿಕೆಟ್ ಕಬಳಿಸಿದ್ದಾರೆ. ಇಂಗ್ಲೆಂಡ್‌ನ ಇಬ್ಬರು ವೇಗದ ಬೌಲರ್‌ಗಳಾದ ಸ್ಟುವರ್ಟ್ ಬ್ರಾಡ್(65) ಹಾಗೂ ಜೇಮ್ಸ್ ಆ್ಯಂಡರ್ಸನ್(61) ಅಶ್ವಿನ್‌ಗಿಂತ ಮುಂದಿದ್ದಾರೆ.
22: ಅಶ್ವಿನ್ ವಾಂಖೆಡೆ ಸ್ಟೇಡಿಯಂನಲ್ಲಿ ಈ ತನಕ ಆಡಿರುವ 4 ಟೆಸ್ಟ್‌ಗಳಲ್ಲಿ ಒಟ್ಟು 22 ವಿಕೆಟ್ ಕಬಳಿಸಿದ್ದಾರೆ. ಅಶ್ವಿನ್ ದಿಲ್ಲಿಯ ಕೋಟ್ಲಾ ಸ್ಟೇಡಿಯಂನಲ್ಲಿ 3 ಪಂದ್ಯಗಳಲ್ಲಿ 23 ವಿಕೆಟ್ ಪಡೆದಿದ್ದಾರೆ.
6: 2006ರ ಬಳಿಕ ಭಾರತದಲ್ಲಿ ಆರು ಬ್ಯಾಟ್ಸ್‌ಮನ್‌ಗಳು ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಆರು ಬ್ಯಾಟ್ಸ್‌ಮನ್‌ಗಳ ಪೈಕಿ ನಾಲ್ವರು ವಿದೇಶಿಗರು. ಅವರುಗಳೆಂದರೆ: ಕುಕ್, ಪೀಟರ್ಸನ್, ವಿಲಿಯಮ್ಸನ್ ಹಾಗೂ ಜೆನ್ನಿಂಗ್ಸ್.
6: ಭಾರತ ವಿರುದ್ಧ ಆರು ಬ್ಯಾಟ್ಸ್‌ಮನ್‌ಗಳು 2,000 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಮುಂಬೈ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 19 ರನ್ ಗಳಿಸಿದ ತಕ್ಷಣ ಕುಕ್ ಈ ಸಾಧನೆ ಮಾಡಿದರು. ಕುಕ್ ಭಾರತ ವಿರುದ್ಧ 2000 ರನ್ ಗಳಿಸಿದ ಇಂಗ್ಲೆಂಡ್‌ನ ಮೊದಲ ಬ್ಯಾಟ್ಸ್‌ಮನ್.
42: ಕುಕ್ ಭಾರತ ವಿರುದ್ಧ 2,000 ರನ್ ಪೂರೈಸಲು 42 ಇನಿಂಗ್ಸ್ ಬಳಸಿಕೊಂಡರು. ಆಸ್ಟ್ರೇಲಿಯದ ನಾಯಕ ರಿಕಿ ಪಾಂಟಿಂಗ್ ಭಾರತ ವಿರುದ್ಧ ಗರಿಷ್ಠ ಸ್ಕೋರ್(2,555) ದಾಖಲಿಸಿದ್ದು, ತನ್ನ 45ನೆ ಇನಿಂಗ್ಸ್‌ನಲ್ಲಿ 2 ಸಾವಿರ ರನ್ ಗಳಿಸಿದ್ದರು. ಪಾಕಿಸ್ತಾನದ ಜಾವೇದ್ ಮಿಯಾಂದಾದ್ ಭಾರತ ವಿರುದ್ಧ ಅತ್ಯಂತ ವೇಗವಾಗಿ(35 ಇನಿಂಗ್ಸ್) ಈ ಸಾಧನೆ ಮಾಡಿದ್ದರು.