ರಣಜಿ ಟ್ರೋಫಿ: ಕರ್ನಾಟಕಕ್ಕೆ ಭರ್ಜರಿ ಜಯ
ಮೊಹಾಲಿ, ಡಿ.9: ರಣಜಿ ಟ್ರೋಫಿಯ 9ನೆ ಸುತ್ತಿನ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ ಮಹಾರಾಷ್ಟ್ರ ತಂಡವನ್ನು 10 ವಿಕೆಟ್‌ಗಳ ಅಂತರದಿಂದ ಮಣಿಸಿತು. ಈ ಋತುವಿನಲ್ಲಿ 5ನೆ ಗೆಲುವು ಸಾಧಿಸಿದ ಕರ್ನಾಟಕ ಬೋನಸ್ ಅಂಕವನ್ನು ಗಳಿಸಿತು.
ಈ ಸೋಲಿನೊಂದಿಗೆ ಮಹಾರಾಷ್ಟ್ರದ ಕ್ವಾರ್ಟರ್‌ಫೈನಲ್ ಕನಸು ಭಗ್ನಗೊಂಡಿದೆ. ಈಗಾಗಲೇ ಅಂತಿಮ-8 ಘಟ್ಟ ಪ್ರವೇಶಿಸಿರುವ ಕರ್ನಾಟಕ ತಾನಾಡಿರುವ 8ನೆ ಪಂದ್ಯದಲ್ಲಿ 5ನೆ ಜಯ ಸಾಧಿಸಿ ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಮರಳಿದೆ.
ಕೆಳ ಕ್ರಮಾಂಕದಲ್ಲಿ ನಾಯಕ ಆರ್. ವಿನಯಕುಮಾರ್(ಅಜೇಯ 56) ನೀಡಿದ ಅಮೂಲ್ಯ ಕೊಡುಗೆಯ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 182 ರನ್ ಮುನ್ನಡೆ ಸಂಪಾದಿಸಿದ್ದ ಕರ್ನಾಟಕ ತಂಡ ಮಹಾರಾಷ್ಟ್ರವನ್ನು 2ನೆ ಇನಿಂಗ್ಸ್‌ನಲ್ಲಿ ಕೇವಲ 218 ರನ್‌ಗೆ ಕಡಿವಾಣ ಹಾಕಿತು. ಮಹಾರಾಷ್ಟ್ರದ ಪರ ಕೇದಾರ್ ಜಾಧವ್(85 ರನ್) ಸರ್ವಾಧಿಕ ಸ್ಕೋರ್ ದಾಖಲಿಸಿದರು. ಉಳಿದ ಆಟಗಾರರು ಕರ್ನಾಟಕದ ದಾಳಿ ಎದುರಿಸಲು ವಿಫಲರಾದರು.
ಮನೀಷ್ ಪಾಂಡೆ ಬದಲಿಗೆ ಕೊನೆಯ ಕ್ಷಣದಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದ ಡೇವಿಡ್ ಮಥಾಯಿಸ್(3-37) ಅವರು ಕೇದಾರ್ ಜಾಧವ್ ಸಹಿತ ನಿರ್ಣಾಯಕ ಮೂರು ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ವೇಗಿ ಅಭಿಮನ್ಯು ಮಿಥುನ್(2-44) ಎರಡು ವಿಕೆಟ್ ಪಡೆದರು.
ಗೆಲ್ಲಲು 37 ರನ್ ಗುರಿ ಪಡೆದ ಕರ್ನಾಟಕ 10 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 39 ರನ್ ಗಳಿಸಿತು. ಆರ್.ಸಮರ್ಥ್(ಅಜೇಯ 25) ಹಾಗೂ ಕೆ.ಅಬ್ಬಾಸ್(ಅಜೇಯ 14) ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.
ಕರ್ನಾಟಕ 345: ಇದಕ್ಕೆ ಮೊದಲು 9 ವಿಕೆಟ್ ನಷ್ಟಕ್ಕೆ 313 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ 110 ಓವರ್‌ಗಳಲ್ಲಿ 345 ರನ್‌ಗಳಿಸಿ ಆಲೌಟಾಯಿತು. ವಿನಯಕುಮಾರ್(ಅಜೇಯ 56 ರನ್, 79 ಎಸೆತ, 9 ಬೌಂಡರಿ) ಕರ್ನಾಟಕ ತಂಡ ಮೊದಲ ಇನಿಂಗ್ಸ್‌ನಲ್ಲಿ 185 ರನ್ ಮುನ್ನಡೆ ಪಡೆಯಲು ಪ್ರಮುಖ ಪಾತ್ರವಹಿಸಿದರು.
ಮಹಾರಾಷ್ಟ್ರದ ಪರ ಅನುಪಮ್ ಸಂಕ್ಲೇಚಾ(3-78) ಯಶಸ್ವಿ ಬೌಲರ್ ಎನಿಸಿಕೊಂಡರು. ದಾಧೆ(2-98), ಸೈಯದ್(2-42) ಹಾಗೂ ಖುರಾನ(2-41) ತಲಾ ಎರಡು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಮಹಾರಾಷ್ಟ್ರ ಮೊದಲ ಇನಿಂಗ್ಸ್: 163
ಕರ್ನಾಟಕ ಮೊದಲ ಇನಿಂಗ್ಸ್: 110 ಓವರ್‌ಗಳಲ್ಲಿ 345
(ಪವನ್ ದೇಶಪಾಂಡೆ 70, ಸಮರ್ಥ್ 64, ಬಿನ್ನಿ 46, ಅಬ್ಬಾಸ್ 41, ವಿನಯ್‌ಕುಮಾರ್ ಅಜೇಯ 56, ಸಂಕ್ಲೇಚಾ 3-78, ಸೈಯದ್ 2-42, ಖುರಾನ 2-41, ಸೈಯದ್ 2-42)
ಮಹಾರಾಷ್ಟ್ರ ದ್ವಿತೀಯ ಇನಿಂಗ್ಸ್: 218 ರನ್‌ಗೆ ಆಲೌಟ್
(ಕೇದಾರ್ ಜಾಧವ್ 85, ಖುರಾನ 28, ಭಾವ್ನೆ 26, ಡೇವಿಡ್ ಮಥಾಯಿಸ್ 3-37, ಮಿಥುನ್ 2-44)
ಹರ್ಯಾಣ ಕ್ವಾರ್ಟರ್ ಫೈನಲ್‌ಗೆ
ಕೋಲ್ಕತಾ, ಡಿ.9: ತ್ರಿಪುರಾ ತಂಡವನ್ನು 119 ರನ್‌ಗಳ ಅಂತರದಿಂದ ಮಣಿಸಿರುವ ಹರ್ಯಾಣ ತಂಡ 2011-12ರ ಬಳಿಕ ಮೊದಲ ಬಾರಿ ರಣಜಿ ಟ್ರೋಫಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದೆ.
ಇಲ್ಲಿನ ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ಶುಕ್ರವಾರ 4 ವಿಕೆಟ್ ನಷ್ಟಕ್ಕೆ 186 ರನ್‌ನಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಹರ್ಯಾಣ ತಂಡ 75 ರನ್ ಸೇರಿಸುವಷ್ಟರಲ್ಲಿ ಕೊನೆಯ 5 ವಿಕೆಟ್‌ಗಳನ್ನು ಕಳೆದುಕೊಂಡಿತು. 9 ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿ ತ್ರಿಪುರಾಕ್ಕೆ 314 ರನ್ ಗುರಿ ನೀಡಿತು.
ಗೆಲ್ಲಲು ಕಠಿಣ ಸವಾಲು ಪಡೆದಿದ್ದ ತ್ರಿಪುರಾ ತಂಡ ಒಂದು ಹಂತದಲ್ಲಿ 65 ರನ್‌ಗೆ 7 ವಿಕೆಟ್ ಕಳೆದುಕೊಂಡಿತು. ಮಣಿಶಂಕರ್ ಸಿಂಗ್(60) ಹಾಗೂ ಗುರಿಂದರ್ ಸಿಂಗ್(62) 8ನೆ ವಿಕೆಟ್‌ಗೆ ಸೇರಿಸಿದ 119 ರನ್ ಜೊತೆಯಾಟದ ಹೊರತಾಗಿಯೂ ಅಂತಿಮವಾಗಿ 195 ರನ್‌ಗೆ ಆಲೌಟಾಯಿತು.
ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದ ಹರ್ಷಲ್ ಪಟೇಲ್ ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ ನಿತಿನ್ ಸೈನಿ(104ರನ್, 117 ಎಸೆತ, 22 ಬೌಂಡರಿ) ಹರ್ಯಾಣದ ಗೆಲುವಿನಲ್ಲಿ ಮಹತ್ವದ ಕಾಣಿಕೆ ನೀಡಿದರು.
ಪಂದ್ಯದಲ್ಲಿ 60 ರನ್‌ಗೆ 7 ವಿಕೆಟ್‌ಗಳನ್ನು ಕಬಳಿಸಿದ ಹರ್ಷಲ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.