×
Ad

ಭಾರತೀಯ ಕ್ರಿಕೆಟ್‌ನ ನೂತನ ‘ದಾಖಲೆ ಸರದಾರ’ ವಿರಾಟ್ ಕೊಹ್ಲಿ

Update: 2016-12-10 23:09 IST

ಮುಂಬೈ, ಡಿ.10: ಆಧುನಿಕ ಯುಗದ ಭಾರತೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ‘ದಾಖಲೆಗಳ ಸರದಾರ’ ಎನ್ನುವುದರಲ್ಲಿ ಸಂಶಯವಿಲ್ಲ. ಸಚಿನ್ ತೆಂಡುಲ್ಕರ್ ರಂತೆಯೇ ಕೊಹ್ಲಿ ಪ್ರತಿಬಾರಿ ರನ್ ಗಳಿಸಿದಾಗಲೆಲ್ಲಾ ಹೊಸ ದಾಖಲೆಯೊಂದು ನಿರ್ಮಾಣವಾಗುತ್ತದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೆ ಟೆಸ್ಟ್‌ನ ಮೂರನೆ ದಿನದಾಟದಲ್ಲಿ ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಎರಡು ಮೈಲುಗಲ್ಲನ್ನು ತಲುಪಿದರು.

28ರಪ್ರಾಯದ ಕೊಹ್ಲಿ 2016ರಲ್ಲಿ 1000 ಟೆಸ್ಟ್ ರನ್ ಪೂರೈಸಿದರು. ಬೆನ್ ಸ್ಟೋಕ್ಸ್ ಎಸೆತವನ್ನು ಮಿಡ್-ವಿಕೆಟ್‌ನತ್ತ ತಳ್ಳಿದ ಕೊಹ್ಲಿ ಕ್ಯಾಲೆಂಡರ್ ವರ್ಷದಲ್ಲಿ ಸಾವಿರಕ್ಕೂ ಅಧಿಕ ಟೆಸ್ಟ್ ರನ್ ದಾಖಲಿಸಿದ ಭಾರತದ ಎರಡನೆ ಆಟಗಾರ ಎನಿಸಿಕೊಂಡರು. 2011ರಲ್ಲಿ ರಾಹುಲ್ ದ್ರಾವಿಡ್ ಈ ಸಾಧನೆ ಮಾಡಿದ್ದರು.

15ನೆ ಟೆಸ್ಟ್ ಶತಕ ಬಾರಿಸಿದ ಕೊಹ್ಲಿ ಪ್ರಸ್ತುತ ಸರಣಿಯಲ್ಲಿ 500 ರನ್ ಪೂರೈಸಿದರು. ಬ್ಯಾಟಿಂಗ್ ದಂತಕತೆ ಸುನಿಲ್ ಗವಾಸ್ಕರ್ ಬಳಿಕ ಟೆಸ್ಟ್ ಸರಣಿಯೊಂದರಲ್ಲಿ 500ಕ್ಕೂ ಅಧಿಕ ರನ್ ಗಳಿಸಿದ ಎರಡನೆ ನಾಯಕ ಕೊಹ್ಲಿ.

ಕೊಹ್ಲಿ ಈ ವರ್ಷ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 70ಕ್ಕೂ ಅಧಿಕ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 211 ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ.

ಕೊಹ್ಲಿ ಈ ವರ್ಷ ಟೆಸ್ಟ್‌ನಲ್ಲಿ ಸಾವಿರ ರನ್ ಗಳಿಸಿದ ವಿಶ್ವದ ನಾಲ್ಕನೆ ಬ್ಯಾಟ್ಸ್‌ಮನ್. ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್, ಜೋ ರೂಟ್ ಹಾಗೂ ಅಲಿಸ್ಟರ್ ಕುಕ್ ಈ ಸಾಧನೆ ಮಾಡಿದ್ದಾರೆ.

ಕೊಹ್ಲಿ ಟೆಸ್ಟ್ ವೃತ್ತಿಜೀವನದಲ್ಲಿ ಮತ್ತೊಂದು ಮೈಲುಗಲ್ಲು ತಲುಪಿದರು. ಹೊಸದಿಲ್ಲಿಯ ಆಟಗಾರ ಕೊಹ್ಲಿ 4000 ರನ್ ಪೂರೈಸಿದರು. ವೀರೇಂದ್ರ ಸೆಹ್ವಾಗ್(79 ಟೆಸ್ಟ್), ಸುನೀಲ್ ಗವಾಸ್ಕರ್(81), ದ್ರಾವಿಡ್(84), ಸಚಿನ್ ತೆಂಡುಲ್ಕರ್(86) ಹಾಗೂ ಮುಹಮ್ಮದ್ ಅಝರುದ್ದೀನ್(88) ಬಳಿಕ ಅತ್ಯಂತ ವೇಗವಾಗಿ 4 ಸಾವಿರ ರನ್ ಪೂರೈಸಿದ ಭಾರತದ ಆರನೆ ಬ್ಯಾಟ್ಸ್‌ಮನ್ ಕೊಹ್ಲಿ.

 ಕೊಹ್ಲಿ ಕ್ಯಾಲೆಂಡರ್ ವರ್ಷದಲ್ಲಿ 1000ಕ್ಕೂ ಅಧಿಕ ರನ್ ಗಳಿಸಿದ ಭಾರತದ ಮೂರನೆ ಟೆಸ್ಟ್ ತಂಡದ ನಾಯಕ. ತೆಂಡುಲ್ಕರ್(1997) ಹಾಗೂ ದ್ರಾವಿಡ್(2006) ಈ ಮೊದಲು ಈ ಸಾಧನೆ ಮಾಡಿದ್ದರು.

ಐಸಿಸಿ ಏಕದಿನ ಆಟಗಾರರ ರ್ಯಾಂಕಿಂಗ್: ದ್ವಿತೀಯ ಸ್ಥಾನ ಕಾಯ್ದುಕೊಂಡ ವಿರಾಟ್

ದುಬೈ, ಡಿ.10: ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಏಕದಿನ ಆಟಗಾರರ ರ್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನ ಉಳಿಸಿಕೊಂಡಿದ್ದಾರೆ. ಕೊಹ್ಲಿಗೆ ತೀವ್ರ ಸ್ಪರ್ಧೆಯೊಡುತ್ತಿರುವ ಆಸ್ಟ್ರೇಲಿಯದ ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ 3ನೆ ಸ್ಥಾನದಲ್ಲಿದ್ದಾರೆ.

ಶನಿವಾರ ಇಲ್ಲಿ ಬಿಡುಗಡೆಯಾದ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ವಾರ್ನರ್ ಅವರು ಕೊಹ್ಲಿಗಿಂತ ಕೇವಲ ಎರಡು ಅಂಕ ಹಿಂದಿದ್ದಾರೆ. ವಾರ್ನರ್ ಶುಕ್ರವಾರ ಮೆಲ್ಬೋರ್ನ್‌ನಲ್ಲಿ ಕೊನೆಗೊಂಡ ಚಾಪೆಲ್-ಹ್ಯಾಡ್ಲಿ ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಆಸ್ಟ್ರೇಲಿಯ 3-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಲು ಪ್ರಮುಖ ಕಾಣಿಕೆ ನೀಡಿದ್ದರು.

ವಾರ್ನರ್ ಕಿವೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಒಟ್ಟು 299 ರನ್ ಗಳಿಸಿ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ 3ನೆ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕದ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಈಗಲೂ ನಂ.1 ಸ್ಥಾನದಲ್ಲಿದ್ದಾರೆ. 2ನೆ ಸ್ಥಾನದಲ್ಲಿರುವ ಕೊಹ್ಲಿಗಿಂತ 13 ಅಂಕ ಮುನ್ನಡೆಯಲ್ಲಿದ್ದಾರೆ.

ಮುಂದಿನ ತಿಂಗಳಿಂದ ನಂ.1 ರ್ಯಾಂಕಿಂಗ್‌ಗಾಗಿ ತೀವ್ರ ಪೈಪೋಟಿ ಆರಂಭವಾಗಲಿದೆ. ಕೊಹ್ಲಿ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ(ಜ.15-23),ವಾರ್ನರ್ ಪಾಕಿಸ್ತಾನ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿ(ಜ.13-26) ಹಾಗೂ ಡಿವಿಲಿಯರ್ಸ್ ಶ್ರೀಲಂಕಾ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿ(ಜ.28 ರಿಂದ ಫೆ.10)ಯಲ್ಲಿ ಆಡಲಿದ್ದಾರೆ. ಇದೇ ವೇಳೆ,ನ್ಯೂಝಿಲೆಂಡ್‌ನ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಹಾಗೂ ಆಸ್ಟ್ರೇಲಿಯದ ಸ್ಟೀವ್ ಸ್ಮಿತ್, ಮಿಚೆಲ್ ಮಾರ್ಷ್ ಹಾಗೂ ಜೋಶ್ ಹೇಝಲ್‌ವುಡ್ ರ್ಯಾಂಕಿಂಗ್‌ನಲ್ಲಿ ಜೀವನ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಗಪ್ಟಿಲ್ 2 ಸ್ಥಾನ ಭಡ್ತಿ ಪಡೆದು ಆರನೆ ಸ್ಥಾನಕ್ಕೆ,ಸ್ಮಿತ್ ಆರು ಸ್ಥಾನ ಭಡ್ತಿ ಪಡೆದು 10 ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. 3 ಸ್ಥಾನ ಭಡ್ತಿ ಪಡೆದ ಮಾರ್ಷ್ 22ನೆ ಸ್ಥಾನದಲ್ಲಿದ್ದಾರೆ. ಕಿವೀಸ್ ವಿರುದ್ಧದ ಸರಣಿಯಲ್ಲಿ ಒಟ್ಟು 6 ವಿಕೆಟ್ ಪಡೆದಿರುವ ಹೇಝಲ್‌ವುಡ್ 11ನೆ ಸ್ಥಾನಕ್ಕೆ ಏರಿದ್ದಾರೆ.

ಐಸಿಸಿ ಏಕದಿನ ಟೀಮ್ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ಆಸ್ಟ್ರೇಲಿಯ ಒಟ್ಟು 120 ಅಂಕ ಗಳಿಸಿದೆ. ನ್ಯೂಝಿಲೆಂಡ್ 4ನೆ ಸ್ಥಾನಕ್ಕೆ ಕುಸಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News