×
Ad

ದಿಲ್ಲಿ ವಿರುದ್ಧ ಸೌರಾಷ್ಟ್ರಕ್ಕೆ ರೋಚಕ ಜಯ

Update: 2016-12-10 23:13 IST

ವಡೋದರ/ಮುಂಬೈ, ಡಿ.10: ಅತ್ಯಂತ ನಾಟಕೀಯ ತಿರುವಿನಲ್ಲಿ ದಿಲ್ಲಿ ತಂಡವನ್ನು ಕೇವಲ 5 ರನ್‌ಗಳ ಅಂತರದಿಂದ ಮಣಿಸಿದ ಸೌರಾಷ್ಟ್ರ ತಂಡ 2016-17ರ ಸಾಲಿನ ರಣಜಿ ಟ್ರೋಫಿಯಲ್ಲಿ ಎರಡನೆ ಜಯ ದಾಖಲಿಸಿತು. ಈ ಫಲಿತಾಂಶದಿಂದ ದಿಲ್ಲಿ ತಂಡ ಟೂರ್ನಿಯಿಂದ ಹೊರ ನಡೆಯಿತು.

 ಸೌರಾಷ್ಟ್ರ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಬಿ ಗುಂಪಿನಿಂದ ಒಡಿಶಾ ತಂಡ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆದಿದೆ. ಈ ಮೂಲಕ ಕರ್ನಾಟಕ ಹಾಗೂ ಜಾರ್ಖಂಡ್ ತಂಡದೊಂದಿಗೆ ಸ್ಥಾನ ಪಡೆದಿದೆ. ಡಿ.15 ರಂದು ನಡೆಯಲಿರುವ ಜಾರ್ಖಂಡ್ ವಿರುದ್ಧ ಅಂತಿಮ ಲೀಗ್ ಪಂದ್ಯಕ್ಕೆ ಮೊದಲೇ ಒಡಿಶಾ ಕ್ವಾರ್ಟರ್ ಫೈನಲ್ ತಲುಪಿದೆ.

ಗೆಲ್ಲಲು 276 ರನ್ ಗುರಿ ಪಡೆದಿದ್ದ ದಿಲ್ಲಿ ತಂಡ 4ನೆ ದಿನವಾದ ಶನಿವಾರ 4 ವಿಕೆಟ್‌ಗೆ 109 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿತು. ಮಿಲಿಂದ್ ಕುಮಾರ್(55) ಹಾಗೂ ಮನನ್ ಶರ್ಮ(46) ಸಾಹಸದ ಹೊರತಾಗಿಯೂ 271 ರನ್‌ಗೆ ಆಲೌಟಾಗಿ ಆಘಾತಕಾರಿ ಸೋಲನುಭವಿಸಿತು. ಈ ಸೋಲಿನೊಂದಿಗೆ ಮುಂದಿನ ಸುತ್ತಿಗೇರುವ ಅವಕಾಶ ಕಳೆದುಕೊಂಡಿತು.

ದಿಲ್ಲಿ ತಂಡ ರಿಷಬ್ ಪಂತ್(29ರನ್,69 ಎಸೆತ) ವಿಕೆಟ್ ಬೇಗನೆ ಕಳೆದುಕೊಂಡಿತು. ಆಗ 6ನೆ ವಿಕೆಟ್‌ಗೆ 77 ರನ್ ಜೊತೆಯಾಟ ನಡೆಸಿದ ಮಿಲಿಂದ್-ಮನನ್ ಜೋಡಿ ದಿಲ್ಲಿಗೆ ಗೆಲುವಿನ ಆಸೆ ಮೂಡಿಸಿದ್ದರು. ಆದರೆ, ದಿಲ್ಲಿ ಈ ಇಬ್ಬರು ದಾಂಡಿಗರನ್ನು ಏಳು ರನ್‌ಗಳ ಅಂತರದಲ್ಲಿ ಕಳೆದುಕೊಂಡಿತು. ಮಿಲಿಂದ್ ವಿಕೆಟ್ ಕಬಳಿಸಿದ ಶೌರ್ಯ(5-93) ಇನಿಂಗ್ಸ್‌ನಲ್ಲಿ ಐದು ವಿಕೆಟ್ ಗೊಂಚಲು ಪಡೆದರು. ಜಯದೇವ್ ಉನದ್ಕಟ್(1-31) ಮನನ್ ಶರ್ಮಗೆ ಪೆವಿಲಿಯನ್ ಹಾದಿ ತೋರಿಸಿದರು.

ಕೆಳ ಕ್ರಮಾಂಕದಲ್ಲಿ ಪ್ರದೀಪ್ ಸಾಂಗ್ವಾನ್‌ಗೆ(ಅಜೇಯ 24) ಉಳಿದ ಆಟಗಾರರು ಸಾಥ್ ನೀಡದ ಕಾರಣ ದಿಲ್ಲಿ 78.1 ಓವರ್‌ಗಳಲ್ಲಿ 271 ರನ್‌ಗೆ ಆಲೌಟಾಯಿತು.

9 ತಂಡಗಳಿರುವ ಬಿ ಗುಂಪಿನಲ್ಲಿ ಸೌರಾಷ್ಟ್ರ 7ನೆ ಸ್ಥಾನದಲ್ಲಿದೆ. ದಿಲ್ಲಿ ನಾಲ್ಕನೆ ಸ್ಥಾನದಲ್ಲಿದ್ದು, ಮೂರನೆ ಸ್ಥಾನದಲ್ಲಿರುವ ಒಡಿಶಾಗಿಂತ ಒಂದು ಅಂಕ ಹಿಂದಿದೆ.

ಹಿಮಾಚಲ ಪ್ರದೇಶಕ್ಕೆ ಜಯ: ಆಫ್-ಸ್ಪಿನ್ನರ್ ಗುರ್ವಿಂದರ್ ಸಿಂಗ್ ನೇತೃತ್ವದ ಸ್ಪಿನ್ನರ್‌ಗಳ ನೆರವಿನಿಂದ ಹಿಮಾಚಲ ಪ್ರದೇಶ ತಂಡ ಗೋವಾ ತಂಡದ ವಿರುದ್ಧ ಏಳು ವಿಕೆಟ್‌ಗಳ ಜಯ ದಾಖಲಿಸಿತು.

ಮುಂಬೈನಲ್ಲಿ ನಡೆದ ತನ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ ಗೋವಾ ತಂಡ 2ನೆ ಇನಿಂಗ್ಸ್‌ನಲ್ಲಿ 286 ರನ್‌ಗೆ ಆಲೌಟಾಯಿತು. ಹಿಮಾಚಲ ಪ್ರದೇಶದ ಗೆಲುವಿಗೆ 139 ರನ್ ಗುರಿ ನೀಡಿತು.

ಪರಾಸ್ ಡೋಗ್ರಾ(ಅಜೇಯ 55 ರನ್) ನೇತೃತ್ವದಲ್ಲಿ ಹಿಮಾಚಲ ಪ್ರದೇಶ ತಂಡ 3 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತು. ಇದಕ್ಕೆ ಮೊದಲು 2 ವಿಕೆಟ್ ನಷ್ಟಕ್ಕೆ 99 ರನ್‌ನಿಂದ 2ನೆ ಇನಿಂಗ್ಸ್ ಮುಂದುವರಿಸಿದ ಗೋವಾ ತಂಡ ಗುರ್ವಿಂದರ್ ಸಿಂಗ್(4-82)ದಾಳಿಗೆ ಸಿಲುಕಿ 286 ರನ್‌ಗೆ ಆಲೌಟಾಯಿತು.

ಗೋವಾದ ಪರ ದರ್ಶನ್ ಮಿಸಾಲ್(119) ಪಂದ್ಯದಲ್ಲಿ ಸತತ ಎರಡನೆ ಶತಕ ಬಾರಿಸಿದರು. ಸುಮಿರನ್ ಅಮೊನ್ಕರ್(55) ಪ್ರಮುಖ ಕಾಣಿಕೆ ನೀಡಿದರು. ಆದರೆ, ಅಮೋನ್ಕರ್ ದಿನದ 2ನೆ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು.

ದರ್ಶನ್ ಏಕಾಂಗಿ ಹೋರಾಟದ ಹೊರತಾಗಿಯೂ ಗುರ್ವಿಂದರ್, ಬಿಪುಲ್ ಶರ್ಮ(2-36) ಹಾಗೂ ಮಯಾಂಕ್ ದಾಗರ್(2-77) ಬೌಲಿಂಗ್‌ಗೆ ತತ್ತರಿಸಿದ ಗೋವಾ ತಂಡ ಹಿಮಾಚಲಪ್ರದೇಶದ ಗೆಲುವಿಗೆ 139 ರನ್ ಗುರಿ ನೀಡಲಷ್ಟೇ ಶಕ್ತವಾಯಿತು.

ಶ್ರೇಯಸ್ ಅಯ್ಯರ್ ಶತಕ, ಮುಂಬೈಗೆ ಅಗ್ರ ಸ್ಥಾನ

ಶ್ರೇಯಸ್ ಅಯ್ಯರ್ ಆಕರ್ಷಕ ಶತಕದ ನೆರವಿನಿಂದ ಮುಂಬೈ ತಂಡ ಪಂಜಾಬ್ ವಿರುದ್ಧದ ಎ ಗುಂಪಿನ ರಣಜಿ ಪಂದ್ಯವನ್ನು ಡ್ರಾಗೊಳಿಸಿದೆ. ಪಂಜಾಬ್‌ನಿಂದ ಫಾಲೊ-ಆನ್‌ಗೆ ಸಿಲುಕಿದ ಮುಂಬೈ 4 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತು. ಮುಂಬೈ ತಂಡ ಮೊದಲ ಇನಿಂಗ್ಸ್ ಅಂಕವನ್ನು ಬಿಟ್ಟುಕೊಟ್ಟರೂ ಎ ಗುಂಪಿನಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. 21 ಅಂಕ ಗಳಿಸಿ ನಾಲ್ಕನೆ ಸ್ಥಾನ ಪಡೆದ ಪಂಜಾಬ್ ಕ್ವಾರ್ಟರ್‌ಫೈನಲ್ ಸ್ಥಾನದಿಂದ ವಂಚಿತವಾಯಿತು.

ಪಂಜಾಬ್‌ನ 468 ರನ್‌ಗೆ ಉತ್ತರವಾಗಿ ಮುಂಬೈ ಮೊದಲ ಇನಿಂಗ್ಸ್‌ನಲ್ಲಿ 185 ರನ್‌ಗೆ ಆಲೌಟಾಗಿ ಫಾಲೋಆನ್‌ಗೆ ಸಿಲುಕಿತು. 59 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಅಯ್ಯರ್ 209 ಎಸೆತಗಳಲ್ಲಿ 14 ಬೌಂಡರಿ ಹಾಗೂ 1 ಸಿಕ್ಸರ್‌ಗಳ ಸಹಿತ 123 ರನ್ ಗಳಿಸಿದರು.

ರಣಜಿ ಟ್ರೋಫಿ ಫಲಿತಾಂಶ

ನಾಸಿಕ್: ಉತ್ತರಪ್ರದೇಶ-ಬರೋಡಾ ಪಂದ್ಯ ಡ್ರಾ

ಗ್ವಾಲಿಯರ್: ಚಂಡೀಗಢ-ಜಮ್ಮು-ಕಾಶ್ಮೀರ ಪಂದ್ಯ ಡ್ರಾ

ವಡೋದರ: ದಿಲ್ಲಿ ವಿರುದ್ಧ ಸೌರಾಷ್ಟ್ರಕ್ಕೆ 4 ರನ್ ಜಯ

ಮುಂಬೈ: ಗೋವಾ ವಿರುದ್ಧ ಹಿಮಾಚಲ ಪ್ರದೇಶಕ್ಕೆ 7 ವಿಕೆಟ್ ಜಯ

ಬೆಳಗಾವಿ: ಗುಜರಾತ್-ತಮಿಳುನಾಡು ಪಂದ್ಯ ಡ್ರಾ

ದಿಲ್ಲಿ: ಸರ್ವಿಸಸ್-ಕೇರಳ ಪಂದ್ಯ ಡ್ರಾ

ರಾಜ್‌ಕೋಟ್: ಪಂಜಾಬ್-ಮುಂಬೈ ಪಂದ್ಯ ಡ್ರಾ

ಗ್ರೇಟರ್‌ನೊಯ್ಡ: ರಾಜಸ್ಥಾನದ ವಿರುದ್ಧ ವಿದರ್ಭಕ್ಕೆ 6 ವಿಕೆಟ್‌ಗಳ ಜಯ

ಲಕ್ನೋ: ಆಂಧ್ರ-ಹೈದರಾಬಾದ್ ಪಂದ್ಯ ಡ್ರಾ

ದಿಲ್ಲಿ: ಬಂಗಾಳ-ಮಧ್ಯಪ್ರದೇಶ ಪಂದ್ಯ ಡ್ರಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News