ಟೂರ್ನಿಯ ಮಧ್ಯೆ ವಿಶೇಷ ಅತಿಥಿಯನ್ನು ರೂಮಿಗೇ ಕರೆದುಕೊಂಡು ಹೋದ ಪಾಕ್ ಆಲ್‌ರೌಂಡರ್!
ಢಾಕಾ, ಡಿ.11: ಬಾಂಗ್ಲಾದೇಶ ಪ್ರೀಮಿಯರ್ ಲೀಗ್(ಬಿಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಬಾಂಗ್ಲಾದೇಶಕ್ಕೆ ತೆರಳಿದ್ದ ಪಾಕಿಸ್ತಾನದ ಆಲ್‌ರೌಂಡರ್‌ವೊಬ್ಬ ತನ್ನ ರೂಮಿಗೇ ವಿಶೇಷ ಅತಿಥಿಯೊಬ್ಬರನ್ನು ಕರೆದುಕೊಂಡು ಹೋಗಿದ್ದಾನೆ.
ಸ್ಥಳೀಯ ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳ ಹಿಟ್‌ಲಿಸ್ಟ್‌ನಲ್ಲಿರುವ ವಿದೇಶಿ ಹುಡುಗಿಯೊಂದಿಗಿದ್ದ ಪಾಕ್ ಆಟಗಾರ ಸದ್ಯ ಶಿಕ್ಷೆಯಿಂದ ಪಾರಾಗಿದ್ದಾನೆ.
ಇತ್ತೀಚೆಗೆ ಪಾಕಿಸ್ತಾನ ಸೀಮಿತ ಓವರ್ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಆಲ್‌ರೌಂಡರ್‌ನ ರೂಮಿನಲ್ಲಿ ಮಹಿಳಾ ಅತಿಥಿಯನ್ನು ಪತ್ತೆ ಹಚ್ಚಿದ ಭದ್ರತಾ ಅಧಿಕಾರಿಗಳು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಕ್ರಿಕೆಟಿಗರು ತಮ್ಮ ಕೊಠಡಿಯೊಳಗೆ ಹುಡುಗಿಯರನ್ನು ಕರೆದುಕೊಂಡು ಹೋಗಬಾರದು ಎಂದು ಆಯೋಜಕರು ಎಚ್ಚರಿಕೆ ನೀಡಿದ್ದರು. ಆದಾಗ್ಯೂ ಪಾಕ್ ಆಲ್‌ರೌಂಡರ್‌ವೊಬ್ಬ ತನ್ನ ರೂಮಿನೊಳಗೆ ಬಿಪಿಎಲ್‌ನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಹಿಟ್‌ಲಿಸ್ಟ್‌ನಲ್ಲಿರುವ ವಿದೇಶಿ ಹುಡುಗಿಯನ್ನು ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.
ಸುಮಾರು 18 ಪಾಕಿಸ್ತಾನಿ ಕ್ರಿಕೆಟಿಗರಿಗೆ ಬಿಪಿಎಲ್‌ನಲ್ಲಿ ಭಾಗವಹಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ನಿರಪೇಕ್ಷಣಾ ಪತ್ರ(ಎನ್‌ಒಸಿ)ನೀಡಿತ್ತು. ಬಿಪಿಎಲ್ ಟೂರ್ನಿಯು ರವಿವಾರ ಕೊನೆಗೊಂಡಿದ್ದು, ಢಾಕಾ ಡೈನಮೈಟ್ಸ್ ತಂಡ ಪ್ರಶಸ್ತಿ ಗೆದ್ದುಕೊಂಡಿದೆ.
ಈ ಹಿಂದೆ ಇದೇ ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡದ ಇಬ್ಬರು ಆಟಗಾರರಾದ ಅಲ್ ಅಮಿನ್ ಹಾಗೂ ಶಬ್ಬೀರ್ ರಹ್ಮಾನ್ ಹುಡುಗಿಯರನ್ನು ತಾವು ತಂಗಿರುವ ಹೊಟೇಲ್ ರೂಮ್‌ಗೆ ಕರೆದುಕೊಂಡು ಹೋಗಿದ್ದಕ್ಕೆ ಭಾರೀ ದಂಡ ವಿಧಿಸಲಾಗಿತ್ತು.
ಪಾಕಿಸ್ತಾನಿ ಆಟಗಾರ ಯಾವುದೇ ದಂಡವಿಲ್ಲದೆ ಪಾರಾಗಿದ್ದಾರೆ. ಅವರು ವಿದೇಶಿ ಆಟಗಾರನಾಗಿದ್ದ ಕಾರಣ ಶಿಕ್ಷೆಯಿಂದ ಬಚಾವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಪಿಎಲ್ ಟೂರ್ನಿಯು ಈ ಹಿಂದೆ ಸ್ಪಾಟ್ ಫಿಕ್ಸಿಂಗ್‌ನಿಂದ ಸುದ್ದಿಯಾಗಿತ್ತು. ಈ ಪ್ರಕರಣದಲ್ಲಿ ಬಾಂಗ್ಲಾದೇಶದ ಹಿರಿಯ ಬ್ಯಾಟ್ಸ್‌ಮನ್ ಅಶ್ರಫುಲ್ ಮೂರು ವರ್ಷ ಕಾಲ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯಿಂದ ನಿಷೇಧಿಸಲ್ಪಟ್ಟಿದ್ದಾರೆ.