ಚೆನ್ನೈ ಟೆಸ್ಟ್: ಶಮಿ, ಸಹಾ ಔಟ್
ಮುಂಬೈ, ಡಿ.11: ವೇಗದ ಬೌಲರ್ ಮುಹಮ್ಮದ್ ಶಮಿ ಹಾಗೂ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ವೃದ್ದಿಮಾನ್ ಸಹಾ ಇಂಗ್ಲೆಂಡ್ ವಿರುದ್ಧದ ಐದನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.
ಐದನೆ ಟೆಸ್ಟ್ ಪಂದ್ಯ ಡಿ.16 ರಿಂದ ಚೆನ್ನೈನಲ್ಲಿ ಆರಂಭವಾಗಲಿದೆ.
ಈ ಇಬ್ಬರು ಆಟಗಾರರು ಗಾಯದ ಸಮಸ್ಯೆಯಿಂದಾಗಿ ಪ್ರಸ್ತುತ ನಡೆಯುತ್ತಿರುವ ನಾಲ್ಕನೆ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.
ರಾಜ್‌ಕೋಟ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಬೌಲಿಂಗ್ ಮಾಡುತ್ತಿದ್ದ ವೇಳೆ ಶಮಿಗೆ ಸ್ನಾಯು ಸೆಳೆತ ಕಾಣಿಸಿಕೊಂಡಿತ್ತು. ಮಾತ್ರವಲ್ಲ ಅವರು ಬಲಗಾಲು ನೋವಿನಿಂದಲೂ ಬಳಲುತ್ತಿದ್ದರು. ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದ ಶಮಿ ಮುಂಬೈ ಟೆಸ್ಟ್‌ನಿಂದ ಹೊರಗುಳಿದಿದ್ದರು.
‘‘ಶಮಿ ಬಲಭಾಗದ ಮಂಡಿನೋವಿನಿಂದ ಬಳಲುತ್ತಿದ್ದಾರೆ. ಅವರಿಗೆ ವಿಶ್ರಾಂತಿಯ ಅಗತ್ಯವಿದ್ದು, ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ(ಎನ್‌ಸಿಎ) ತೆರಳಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ’’ ಎಂದು ಬಿಸಿಸಿಐ ರವಿವಾರ ಬಿಡುಗಡೆಗೊಳಿಸಿರುವ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ವಿಶಾಖಪಟ್ಟಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿರುವ ಸಹಾ ಪ್ರಸ್ತುತ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಪಾರ್ಥಿವ್ ಪಟೇಲ್ ಮೊಹಾಲಿಯಲ್ಲಿ ನಡೆದ ಮೂರನೆ ಟೆಸ್ಟ್‌ನ ಬಳಿಕ ವಿಕೆಟ್‌ಕೀಪಿಂಗ್ ನಡೆಸುತ್ತಿದ್ದಾರೆ.