×
Ad

ಸೋಲಿನ ಭೀತಿಯಲ್ಲಿ ಆಂಗ್ಲರು

Update: 2016-12-11 17:09 IST

ಮುಂಬೈ ಡಿ.11: ಅವಳಿ ಸ್ಪಿನ್ನರ್‌ಗಳಾದ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜ ಅವರ ಅಮೋಘ ಬೌಲಿಂಗ್ ನೆರವಿನಿಂದ ಭಾರತ ಕ್ರಿಕೆಟ್ ತಂಡ ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೆ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವಿನ ಹೊಸ್ತಿಲಲ್ಲಿದೆ.

ನಾಯಕ ವಿರಾಟ್ ಕೊಹ್ಲಿ ದ್ವಿಶತಕ(235 ರನ್, 340 ಎಸೆತ, 25 ಬೌಂಡರಿ, 1 ಸಿಕ್ಸರ್) ಹಾಗೂ ಆಲ್‌ರೌಂಡರ್ ಜಯಂತ್ ಯಾದವ್(104 ರನ್, 204 ಎಸೆತ, 15 ಬೌಂಡರಿ) 8ನೆ ವಿಕೆಟ್‌ಗೆ ದಾಖಲಿಸಿದ 241 ರನ್ ಜೊತೆಯಾಟದ ನೆರವಿನಿಂದ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 631 ರನ್ ಗಳಿಸಿತು. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 231 ರನ್ ಮುನ್ನಡೆ ಸಾಧಿಸಿತು.

ಭಾರತದ ಬೆಟ್ಟದಷ್ಟು ಮೊತ್ತವನ್ನು ನೋಡಿಯೇ ಬೆದರಿದ ಆಂಗ್ಲರು ಎರಡನೆ ಇನಿಂಗ್ಸ್‌ನಲ್ಲಿ ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿದರು. ನಾಲ್ಕನೆ ದಿನದಾಟದಂತ್ಯಕ್ಕೆ 6 ವಿಕೆಟ್‌ಗಳ ನಷ್ಟಕ್ಕೆ 182 ರನ್ ಗಳಿಸಿದ್ದಾರೆ. ವಿಕೆಟ್‌ಕೀಪರ್ ಬೈರ್‌ಸ್ಟೋವ್(ಅಜೇಯ 50ರನ್) ಕ್ರೀಸ್ ಕಾಯ್ದುಕೊಂಡಿದ್ದು, ದಿನದ ಕೊನೆಯ ಎಸೆತದಲ್ಲಿ ಜಾಕ್‌ಬಾಲ್(2) ಔಟಾದರು.

ಇಂಗ್ಲೆಂಡ್‌ನ ಪರ ಜೋ ರೂಟ್(77) ಅಗ್ರ ಕ್ರಮಾಂಕದಲ್ಲಿ ಒಂದಷ್ಟು ಹೋರಾಟ ನೀಡಿದರು. ಉಳಿದವರು ಬಂದಷ್ಟೇ ವೇಗವಾಗಿ ಪೆವಿಲಿಯನ್‌ಗೆ ಸೇರಿದರು.

ಭಾರತದ ಪರ ಸ್ಪಿನ್ನರ್‌ಗಳಾದ ಆರ್.ಅಶ್ವಿನ್(2-49)ಹಾಗೂ ರವೀಂದ್ರ ಜಡೇಜ(2-58) ತಲಾ ಎರಡು ವಿಕೆಟ್ ಕಬಳಿಸಿದರು. ಈ ಇಬ್ಬರು ಕೊನೆಯ ದಿನದಾಟವಾದ ಸೋಮವಾರ ಆಂಗ್ಲರನ್ನು ಕಾಡುವ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News