ಪದಕ ದೃಢಪಡಿಸಿದ ಶಿವ, ದೇವೇಂದ್ರೊ, ಮನೋಜ್

Update: 2016-12-11 17:30 GMT

ಗುವಾಹಟಿ, ಡಿ.11: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಶಿವ ಥಾಪ ಇಲ್ಲಿ ರವಿವಾರ ನಡೆದ ನ್ಯಾಶನಲ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಹಣೆಯಲ್ಲಿ ರಕ್ತ ಸೋರುತ್ತಿರುವ ಹೊರತಾಗಿಯೂ 60 ಕೆಜಿ ತೂಕದ ಲೈಟ್‌ವೇಟ್ ವಿಭಾಗದಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸುವ ಮೂಲಕ ಪದಕವನ್ನು ದೃಢಪಡಿಸಿದ್ದಾರೆ.

ಮಾಜಿ ಏಷ್ಯಾ ಚಾಂಪಿಯನ್ ಹಾಗೂ ಎರಡು ಬಾರಿಯ ಒಲಿಂಪಿಯನ್ ಶಿವ ಥಾಪ ಅಖಿಲ ಭಾರತ ಪೊಲೀಸ್ ತಂಡದ ಅಶೋಕ್ ವಿರುದ್ಧ ಕ್ವಾರ್ಟರ್‌ಫೈನಲ್‌ನಲ್ಲಿ 5-0 ಅಂತರದಿಂದ ಜಯ ಸಾಧಿಸಿದರು. ದ್ವಿತೀಯ ಸುತ್ತಿನಲ್ಲಿ ಅಶೋಕ್ ಅವರು ಲೋಕಲ್ ಫೇವರಿಟ್ ಶಿವ ಥಾಪರ ಹಣೆಗೆ ಗುದ್ದುವ ಮೂಲಕ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿದರು. ಹಣೆಗೆ ಗುದ್ದಿದ ಕಾರಣ ರಕ್ತ ಸೋರಲಾರಂಭಿಸಿತು.

ಆದಾಗ್ಯೂ ಹೋರಾಟವನ್ನು ಕೈಬಿಡದ 23ರ ಹರೆಯದ ಶಿವ ಉಳಿದ ಮೂರು ಸುತ್ತಿನ ಪಂದ್ಯವನ್ನು ಪೂರ್ಣಗೊಳಿಸಿ ಭರ್ಜರಿ ಜಯ ಸಾಧಿಸಿದರು. ಪಂದ್ಯ ಮುಗಿದ ತಕ್ಷಣ ವೈದ್ಯರ ಬಳಿ ತೆರಳಿದರು. ಸೋಮವಾರ ಸೆಮಿ ಫೈನಲ್ ಪಂದ್ಯದಲ್ಲಿ ಆಡುವುದಾಗಿ ಶಿವ ಹೇಳಿದ್ದಾರೆ.

 ಇದೇ ವೇಳೆ ಮನೋಜ್ ಕುಮಾರ್(69ಕೆಜಿ) ಹಾಗೂ ದೇವೇಂದ್ರೊ ಸಿಂಗ್(52ಕೆಜಿ) ಕ್ವಾರ್ಟರ್ ಫೈನಲ್‌ನಲ್ಲಿ ಪ್ರಯಾಸದ ಗೆಲುವು ಸಾಧಿಸಿದರು. ಮನೋಜ್ ಜಮ್ಮು-ಕಾಶ್ಮೀರದ ಆಶೀಷ್ ವಿರುದ್ಧ ಜಯ ಸಾಧಿಸಿದರು. 3ನೆ ಸುತ್ತಿನ ಬಳಿಕ ಮನೋಜ್ ಪರ 4-1 ತೀರ್ಪು ಹೊರಬಂತು.

ಹರ್ಯಾಣದ ನೀರಜ್ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯವಾಡಿರುವ ಮಣಿಪುರದ ದೇವೇಂದ್ರೊ ಸಿಂಗ್ 3-2 ಅಂತರದಿಂದ ರೋಚಕ ಜಯ ಸಾಧಿಸಿದರು. ಇದೇ ವೇಳೆ, ಎರಡೂವರೆ ವರ್ಷಗಳ ಬಳಿಕ ಆಡಿದ್ದ ದಿನೇಶ್ ಕುಮಾರ್(91ಕೆಜಿ) ಹಿಮಾಚಲ ಪ್ರದೇಶದ ಅಭಿಷೇಕ್ ವಿರುದ್ಧ ಜಯ ಸಾಧಿಸಿ ಸೆಮಿಫೈನಲ್‌ಗೆ ತಲುಪಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News