ಕೊಹ್ಲಿ ದ್ವಿಶತಕ, ಜಯಂತ್ ಶತಕ; ಸರಣಿ ಗೆಲುವಿನ ಹಾದಿಯಲ್ಲಿ ಭಾರತ

Update: 2016-12-11 17:44 GMT

ಮುಂಬೈ, ಡಿ.11: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೆ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಈ ವರ್ಷ ಮೂರನೆ ದ್ವಿಶತಕ ದಾಖಲಿಸಿದ್ದಾರೆ. ಆಲ್‌ರೌಂಡರ್ ಜಯಂತ್ ಯಾದವ್ ಚೊಚ್ಚಲ ಶತಕ ಸಿಡಿಸಿದ್ದಾರೆ ಭಾರತ ಸರಣಿ ಗೆಲುವಿನತ್ತ ಹೆಜ್ಜೆ ಇರಿಸಿದೆ.

ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್‌ನ ನಾಲ್ಕನೆ ದಿನ ಇಂಗ್ಲೆಂಡ್ ವಿರುದ್ಧ 231 ರನ್‌ಗಳ ಮೊದಲ ಇನಿಂಗ್ಸ್‌ನಲ್ಲಿ ಮೇಲುಗೈ ಸಾಧಿಸಿರುವ ಭಾರತ ಸತತ ಮೂರು ಟೆಸ್ಟ್‌ಗಳಲ್ಲಿ ಗೆಲುವಿನೊಂದಿಗೆ ಸರಣಿಯನ್ನು ಇನ್ನೂ ಒಂದು ಟೆಸ್ಟ್ ಬಾಕಿ ಇರುವಾಗಲೇ 3-0 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ.
ನಾಲ್ಕನೆ ದಿನದಾಟದಂತ್ಯಕ್ಕೆ ಇಂಗ್ಲೆಂಡ್ ತಂಡ ಎರಡನೆ ಇನಿಂಗ್ಸ್‌ನಲ್ಲಿ 47.3 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 182 ರನ್ ಗಳಿಸಿದ್ದು, ಇನಿಂಗ್ಸ್ ಸೋಲು ತಪ್ಪಿಸಲು ಇನ್ನೂ 49 ರನ್ ಗಳಿಸಬೇಕಾಗಿದೆ. ಮೊದಲ ಇನಿಂಗ್ಸ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದ ಕೀಟನ್ ಜೆನ್ನಿಂಗ್ಸ್ ಎರಡನೆ ಇನಿಂಗ್ಸ್‌ನಲ್ಲಿ ಖಾತೆ ತೆರೆಯದೆ ಪೆವಿಲಿಯನ್ ಸೇರಿದರು. ಮೊದಲ ಓವರ್‌ನ ಎರಡನೆ ಎಸೆತದಲ್ಲಿ ಭುವನೇಶ್ವರ ಕುಮಾರ್ ಅವರು ಆರಂಭಿಕ ದಾಂಡಿಗ ಜೆನ್ನಿಂಗ್ಸ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಬಳಿಕ 11.5 ಓವರ್‌ನಲ್ಲಿ ನಾಯಕ ಅಲಿಸ್ಟರ್ ಕುಕ್ (18) ಅವರಿಗೆ ರವೀಂದ್ರ ಜಡೇಜ ಪೆವಿಲಿಯನ್ ಹಾದಿ ತೋರಿಸಿದರು. ಜಡೇಜ ಅವರು ವೇಗವಾಗಿ ಟೆಸ್ಟ್‌ನಲ್ಲಿ 100 ವಿಕೆಟ್ ಪಡೆದ ದಾಖಲೆ ಬರೆದರು. 24 ಟೆಸ್ಟ್‌ಗಳಲ್ಲಿ ಈ ಸಾಧನೆ ಮಾಡಿದ ಜಡೇಜ ರ್ಯಾನ್ ಹ್ಯಾರಿಸ್ ಮತ್ತು ಲ್ಯಾನ್ಸ್ ಗಿಬ್ಸ್ ದಾಖಲೆ ಸರಿಗಟ್ಟಿದರು.
ಸ್ಕೋರ್ 49ಕ್ಕೆ ತಲುಪುವಾಗ ಇಂಗ್ಲೆಂಡ್‌ಗೆ ಇನ್ನೊಂದು ಆಘಾತ ಕಾದಿತ್ತು. ಮೊಯಿನ್ ಅಲಿ(0) ಅವರು ಖಾತೆ ತೆರೆಯದೆ ಜಡೇಜ ಎಸೆತದಲ್ಲಿ ಮುರಳಿ ವಿಜಯ್‌ಗೆ ಕ್ಯಾಚ್ ನೀಡಿದರು.
 92 ರನ್‌ಗಳ ಜೊತೆಯಾಟ: 13.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 49 ರನ್ ಗಳಿಸಿದ್ದ ಇಂಗ್ಲೆಂಡ್‌ಗೆ ನಾಲ್ಕನೆ ವಿಕೆಟ್‌ಗೆ ಜೊತೆಯಾದ ಜೋ ರೂಟ್ ಮತ್ತು ಬೈರ್‌ಸ್ಟೋವ್ 99 ರನ್‌ಗಳ ಕೊಡುಗೆ ನೀಡುವ ಮೂಲಕ ಇಂಗ್ಲೆಂಡ್‌ನ್ನು ನಾಲ್ಕನೆ ದಿನ ಇನಿಂಗ್ಸ್ ಸೋಲಿನ ಭೀತಿಯಿಂದ ಪಾರು ಮಾಡಲು ಶ್ರಮಿಸಿದರು.
112 ಎಸೆತಗಳನ್ನು ಎದುರಿಸಿದ ಜೋ ರೂಟ್ 11 ಬೌಂಡರಿಗಳ ಸಹಾಯದಿಂದ 77 ರನ್ ಗಳಿಸಿದ್ದಾಗ ಅವರನ್ನು ಜಯಂತ್ ಯಾದವ್ ಎಲ್‌ಬಿಡಬ್ಲು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದರು.
ಬೆನ್ ಸ್ಟೋಕ್ಸ್ ಅವರು ಬೈರ್‌ಸ್ಟೋವ್‌ಗೆ ಜೊತೆಯಾದರು. ಇವರ ಜೊತೆಯಾಟದಲ್ಲಿ ತಂಡದ ಖಾತೆಗೆ 39 ರನ್ ಸೇರ್ಪಡೆಗೊಂಡಿತು.ಅಂತಿಮ ಐದು ಓವರ್‌ಗಳು ಇಂಗ್ಲೆಂಡ್‌ನ ಪಾಲಿಗೆ ಕಠಿಣವಾಗಿ ಪರಿಣಮಿಸಿತ್ತು. 43.3ನೆ ಓವರ್‌ನಲ್ಲಿ ಬೆನ್ ಸ್ಟೋಕ್ಸ್ ಅವರು ಅಶ್ವಿನ್ ಎಸೆತದಲ್ಲಿ ವಿಜಯ್‌ಗೆ ಕ್ಯಾಚ್ ನೀಡಿದರು.
ನೈಟ್‌ವಾಚ್‌ಮೇನ್ ಜಾಕ್ ಬಾಲ್(2) ಕ್ರೀಸ್‌ಗೆ ಆಗಮಿಸಿದ್ದರೂ, ಅವರಿಗೆ ಹೆಚ್ಚು ಹೊತ್ತು ನಿಲ್ಲಲು ಅಶ್ವಿನ್ ಅವಕಾಶ ನೀಡಲಿಲ್ಲ. ಜಾಕ್ ಬಾಲ್ ಔಟಾಗುತ್ತಿದ್ದಂತೆ ನಾಲ್ಕನೆ ದಿನದ ಆಟವನ್ನು ನಿಲ್ಲಿಸಲಾಯಿತು.
ಭಾರತದ ಪರ ಆರ್. ಅಶ್ವಿನ್(49ಕ್ಕೆ 2) ಮತ್ತು ರವೀಂದ್ರ ಜಡೇಜ(58ಕ್ಕೆ 2) ತಲಾ ಎರಡು ವಿಕೆಟ್, ಭುವನೇಶ್ವರ ಕುಮಾರ್(11ಕ್ಕೆ 1) ಮತ್ತು ಜಯಂತ್ ಯಾದವ್(39ಕ್ಕೆ 1) ತಲಾ 1 ವಿಕೆಟ್ ಹಂಚಿಕೊಂಡರು.
ಭಾರತ 631ಕ್ಕೆ ಆಲೌಟ್: ಭಾರತ ಮೊದಲ ಇನಿಂಗ್ಸ್‌ನಲ್ಲಿ 182.3 ಓವರ್‌ಗಳಲ್ಲಿ 631 ರನ್‌ಗಳಿಗೆ ಆಲೌಟಾಗಿದೆ.
 ಮೂರನೆ ದಿನದಾಟದಂತ್ಯಕ್ಕೆ ನಾಯಕ ವಿರಾಟ್ ಕೊಹ್ಲಿ ಮತ್ತು ಆರಂಭಿಕ ದಾಂಡಿಗ ಮುರಳಿ ವಿಜಯ್ ಶತಕದ ನೆರವಿನಲ್ಲಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 142 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 451 ರನ್ ಗಳಿಸಿತ್ತು. 51 ರನ್‌ಗಳ ಮುನ್ನಡೆ ಸಾಧಿಸಿತ್ತು. ಮುರಳಿ ವಿಜಯ್ 46ನೆ ಟೆಸ್ಟ್‌ನಲ್ಲಿ 8ನೆ ಶತಕ ಮತ್ತು ವಿರಾಟ್ ಕೊಹ್ಲಿ 52ನೆ ಟೆಸ್ಟ್‌ನಲ್ಲಿ 15ನೆ ಶತಕ ದಾಖಲಿಸಿದ್ದರು.
ನಾಯಕ ವಿರಾಟ್ ಕೊಹ್ಲಿ ಔಟಾಗದೆ 147ರನ್(241ಎ, 17ಬೌ) ಮತ್ತು ಜಯಂತ್ ಯಾದವ್30 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು. ಇಂದು ಬ್ಯಾಟಿಂಗ್ ಮುಂದುವರಿಸಿದ ಕೊಹ್ಲಿ ಮತ್ತು ಯಾದವ್ ಎಂಟನೆ ವಿಕೆಟ್‌ಗೆ 241 ರನ್‌ಗಳ ದಾಖಲೆಯ ಜೊತೆಯಾಟ ನೀಡಿ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಇನಿಂಗ್ಸ್ ಮುನ್ನಡೆಗೆ ನೆರವಾದರು.
164.4ನೆ ಓವರ್‌ನಲ್ಲಿ ಆದಿಲ್ ರಶೀದ್ ಎಸೆತದಲ್ಲಿ 1ರನ್ ಗಳಿಸಿದ ಕೊಹ್ಲಿ ದ್ವಿಶತಕ ದಾಖಲಿಸುವ ಮೂಲಕ ಒಂದೇ ವರ್ಷ ಮೂರು ಶತಕ ದಾಖಲಿಸಿದ ಸಾಧನೆ ಮಾಡಿದರು. ಡಾನ್ ಬ್ರಾಡ್ಮನ್, ರಿಕಿ ಪಾಂಟಿಂಗ್, ಮೈಕ್ ಕ್ಲಾರ್ಕ್, ಬ್ರೆಂಡನ್ ಮೆಕಲಮ್ ಒಂದೇ ವರ್ಷ ಮೂರು ದ್ವಿಶತಕ ದಾಖಲಿಸಿದ ಸಾಧನೆಯನ್ನು ಸರಿಗಟ್ಟಿದರು.
302 ಎಸೆತಗಳಲ್ಲಿ 23 ಬೌಂಡರಿಗಳ ಸಹಾಯದಿಂದ ಕೊಹ್ಲಿ ದ್ವಿಶತಕದ ಸಾಧನೆ ಮಾಡಿದರು. ಆಗ ಮೈದಾನದಲ್ಲಿದ್ದ ಎಲ್ಲ ಸ್ಮಾರ್ಟ್ ಪೋನ್‌ಗಳು ಕೊಹ್ಲಿ ದ್ವಿಶತಕದ ಸಾಧನೆಯನ್ನು ಸೆರೆ ಹಿಡಿಯಿತು. ಕೋಚ್ ಅನಿಲ್ ಕುಂಬ್ಳೆ ಕೂಡಾ ತನ್ನ ಮೊಬೈಲ್ ಪೋನ್‌ನಲ್ಲಿ ಆ ಅಪೂರ್ವ ಕ್ಷಣವನ್ನು ಸೆರೆ ಹಿಡಿಯುವ ಅವಕಾಶವನ್ನು ಮಿಸ್ ಮಾಡಿಕೊಳ್ಳಲಿಲ್ಲ.
 ಜಯಂತ್ ಚೊಚ್ಚಲ ಶತಕ: ಜಯಂತ್ ಯಾದವ್ ಅವರು ಅಗ್ರ ಸರದಿಯ ದಾಂಡಿಗರನ್ನು ನಾಚಿಸುವಂತೆ ಬ್ಯಾಟಿಂಗ್ ನಡೆಸಿದರು. ಮೂರನೆ ಟೆಸ್ಟ್ ಆಡುತ್ತಿರುವ ಜಯಂತ್ ಯಾದವ್ ಚೊಚ್ಚಲ ಶತಕ ದಾಖಲಿಸಿದರು. ಮೊಹಾಲಿಯಲ್ಲಿ ನಡೆದ ಮೂರನೆ ಟೆಸ್ಟ್‌ನಲ್ಲಿ ಅವರು ಚೊಚ್ಚಲ ಅರ್ಧಶತಕ(55) ದಾಖಲಿಸಿದ್ದರು.173.5ನೆ ಓವರ್‌ನಲ್ಲಿ ವೋಕ್ಸ್ ಎಸೆತದಲ್ಲಿ 1 ರನ್ ಗಳಿಸುವ ಮೂಲಕ 26ರ ಹರೆಯದ ದಿಲ್ಲಿಯ ಆಟಗಾರ ಜಯಂತ್ ಯಾದವ್ ಶತಕ ದಾಖಲಿಸಿದರು.
ಜಯಂತ್ ಯಾದವ್ 104 ರನ್(204ಎ, 15ಬೌ) ಗಳಿಸಿ ರಶೀದ್‌ಗೆ ವಿಕೆಟ್ ಒಪ್ಪಿಸಿದರು. ಅವರು ನಿರ್ಗಮಿಸಿ ತಂಡದ ಖಾತೆಗೆ 10 ರನ್ ಸೇರುವಷ್ಟರಲ್ಲಿ ಕೊಹ್ಲಿ ಅವರ ಎಂಟು ಗಂಟೆಗಳ ಕಾಲ ನಡೆಸುತ್ತಿದ್ದ ಬ್ಯಾಟಿಂಗ್ ಅಂತ್ಯಗೊಂಡಿತು. 235 ರನ್(340ಎ, 25ಬೌ,1ಸಿ) ಗಳಿಸಿದ ಕೊಹ್ಲಿ ಅವರು ವೋಕ್ಸ್ ಎಸೆತದಲ್ಲಿ ಆ್ಯಂಡರ್ಸನ್‌ಗೆ ಕ್ಯಾಚ್ ನೀಡಿದರು. ಆಗ ತಂಡದ ಸ್ಕೋರ್ 615ಕ್ಕೆ ತಲುಪಿತ್ತು. ಭುವನೇಶ್ವರ ಕುಮಾರ್9 ರನ್ ಗಳಿಸಿ ಔಟಾಗುವುದರೊಂದಿಗೆ ಭಾರತದ ಮೊದಲ ಇನಿಂಗ್ಸ್ ಮುಕ್ತಾಯಗೊಂಡಿತು. ಉಮೇಶ್ ಯಾದವ್ ಔಟಾಗದೆ 7 ರನ್ ಗಳಿಸಿದರು.
ಇಂಗ್ಲೆಂಡ್‌ನ ಆದಿಲ್ ರಶೀದ್ 192ಕ್ಕೆ 4 ವಿಕೆಟ್, ಎಂ.ಎಂ.ಅಲಿ( 174ಕ್ಕೆ 2) ಮತ್ತು ಜೋ ರೂಟ್ (31ಕ್ಕೆ 2) ತಲಾ 2 ವಿಕೆಟ್, ವೋಕ್ಸ್ ಮತ್ತು ಜಾಕ್ ಬಾಲ್ ತಲಾ 1 ವಿಕೆಟ್ ಹಂಚಿಕೊಂಡರು.

ಸ್ಕೋರ್ ಪಟ್ಟಿ
 ಇಂಗ್ಲೆಂಡ್ ಮೊದಲ ಇನಿಂಗ್ಸ್ 130.1 ಓವರ್‌ಗಳಲ್ಲಿ ಆಲೌಟ್ 400
 ಭಾರತ ಮೊದಲ ಇನಿಂಗ್ಸ್ 182.3 ಓವರ್‌ಗಳಲ್ಲಿ ಆಲೌಟ್ 631
            ಕೆ.ಎಲ್.ರಾಹುಲ್ ಬಿ ಅಲಿ24
        ಮುರಳಿ ವಿಜಯ್ ಸಿ ಆ್ಯಂಡ್ ಬಿ ರಶೀದ್136
            ಚೇತೇಶ್ವರ ಪೂಜಾರ ಬಿ ಬಾಲ್47
        ವಿರಾಟ್ ಕೊಹ್ಲಿ ಸಿ ಆ್ಯಂಡರ್ಸನ್ ಬಿ ವೋಕ್ಸ್235
         ಕರುಣ್ ನಾಯರ್ ಎಲ್‌ಬಿಡಬ್ಲು ಬಿ ಅಲಿ13
        ಪಿ.ಪಟೇಲ್ ಸಿ ಬೈರ್‌ಸ್ಟೋವ್ ಬಿ ರೂಟ್15
        ಆರ್.ಅಶ್ವಿನ್ ಸಿ ಜೆನ್ನಿಂಗ್ಸ್ ಬಿ ರೂಟ್00
        ರವೀಂದ್ರ ಜಡೇಜ ಸಿ ಬಟ್ಲರ್ ಬಿ ರಶೀದ್25
    ಜಯಂತ್ ಯಾದವ್ ಸ್ಟಂ.ಬೈರ್‌ಸ್ಟೋವ್ ಬಿ ರಶೀದ್104
        ಬಿ. ಕುಮಾರ್ ಸಿ ವೋಕ್ಸ್ ಬಿ ರಶೀದ್09
             ಉಮೇಶ್ ಔಟಾಗದೆ07
                    ಇತರೆ16
ವಿಕೆಟ್ ಪತನ: 1-39, 2-146, 3-262, 4-279, 5-305, 6-307, 7-364, 8-605, 9-615,10-631
ಬೌಲಿಂಗ್ ವಿವರ
          ಆ್ಯಂಡರ್ಸನ್20.0-5-063-0
            ವೋಕ್ಸ್16.0-2-079-1
        ಎಂಎಂ ಅಲಿ53.0-5-174-2
            ರಶೀದ್55.3-5-192-4
        ಜಾಕ್ ಬಾಲ್18.0-5-047-1
            ಸ್ಟೋಕ್ಸ್10.0-2-032-0
            ರೂಟ್10.0-2-031-2
ಇಂಗ್ಲೆಂಡ್ ಎರಡನೆ ಇನಿಂಗ್ಸ್ 47.3 ಓವರ್‌ಗಳಲ್ಲಿ 182/6
         ಅಲಿಸ್ಟರ್ ಕುಕ್ ಎಲ್‌ಬಿಡಬ್ಲು ಬಿ ಜಡೇಜ18
        ಜೆನ್ನಿಂಗ್ಸ್ ಎಲ್‌ಬಿಡಬ್ಯು ಬಿ ಕುಮಾರ್00
    ಜೋ ರೂಟ್ ಎಲ್‌ಬಿಡಬ್ಲು ಬಿ ಜಯಂತ್ ಯಾದವ್77
        ಎಂಎಂ ಅಲಿ ಸಿ ವಿಜಯ್ ಬಿ ಜಡೇಜ00
            ಬೈರ್‌ಸ್ಟೋವ್ ಔಟಾಗದೆ 50
            ಸ್ಟೋಕ್ಸ್ ಸಿ ವಿಜಯ್ ಬಿ ಅಶ್ವಿನ್ 18
        ಜಾಕ್ ಬಾಲ್ ಸಿ ಪಟೇಲ್ ಬಿ ಅಶ್ವಿನ್02
                    ಇತರೆ17
ವಿಕೆಟ್ ಪತನ: 1-1, 2-43, 3-49, 4-141, 5-180, 6-182
ಬೌಲಿಂಗ್ ವಿವರ
        ಬಿ.ಕುಮಾರ್04.0-1-11-1
        ಉಮೇಶ್ ಯಾದವ್03.0-0-10-0
        ಆರ್.ಜಡೇಜ18.0-3-58-2
        ಆರ್.ಅಶ್ವಿನ್16.3-1-49-2
        ಜಯಂತ್ ಯಾದವ್06.0-0-39-1
,,,,,,,,,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News