ಕೆರೊಲಿನಾ ವಿರುದ್ಧ ಸೇಡು ತೀರಿಸಿಕೊಂಡ ಸಿಂಧು

Update: 2016-12-16 17:24 GMT

ದುಬೈ, ಡಿ.16: ವಿಶ್ವ ಸೂಪರ್ ಸರಣಿ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯ 3ನೆ ಸುತ್ತಿನ ಪಂದ್ಯದಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಕೆರೊಲಿನಾ ಮರಿನ್‌ರನ್ನು ನೇರ ಗೇಮ್‌ಗಳ ಅಂತರದಿಂದ ಮಣಿಸಿದ ಭಾರತದ ಆಟಗಾರ್ತಿ ಪಿ.ವಿ. ಸಿಂಧು ಸೆಮಿ ಫೈನಲ್‌ಗೆ ತಲುಪಿದ್ದಾರೆ.

ಶುಕ್ರವಾರ ಇಲ್ಲಿ ನಡೆದ 3ನೆ ಸುತ್ತಿನ ಪಂದ್ಯದಲ್ಲಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಸಿಂಧು ಅವರು ಮರಿನ್‌ರನ್ನು 21-17, 21-13 ನೇರ ಗೇಮ್‌ಗಳ ಅಂತರದಿಂದ ಮಣಿಸಿದರು. ಈಮೂಲಕ ರಿಯೋ ಒಲಿಂಪಿಕ್ಸ್ ಸೋಲಿಗೆ ತಕ್ಕ ಸೇಡು ತೀರಿಸಿಕೊಂಡರು. ಆಗಸ್ಟ್‌ನಲ್ಲಿ ನಡೆದಿದ್ದ ರಿಯೋ ಗೇಮ್ಸ್ ಸಿಂಗಲ್ಸ್ ಫೈನಲ್‌ನಲ್ಲಿ ಸಿಂಧು ಅವರು ಮರಿನ್‌ಗೆ ಶರಣಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು.

 ಸಿಂಧು ಮೊದಲ ಪಂದ್ಯದಲ್ಲಿ ಜಪಾನ್ ಆಟಗಾರ್ತಿ ಅನಾಕ್ ಯಮಗುಚಿ ಅವರನ್ನು ಮಣಿಸಿದ್ದರು. ಆದರೆ, ಗುರುವಾರ ಇಲ್ಲಿ ನಡೆದ 2ನೆ ಸುತ್ತಿನ ಪಂದ್ಯದಲ್ಲಿ ಚೀನಾದ ಸನ್‌ಯೂ ವಿರುದ್ದ 15-21, 17-2 ಗೇಮ್‌ಗಳ ಅಂತರದಿಂದ ಸೋತಿದ್ದರು.

ಈ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಈ ಪಂದ್ಯ ಸಿಂಧು ಪಾಲಿಗೆ ಮಾಡು-ಮಡಿ ಪಂದ್ಯ ಎನಿಸಿಕೊಂಡಿತ್ತು. ಮಾಜಿ ವಿಶ್ವದ ನಂ.1 ಆಟಗಾರ್ತಿ ಮರಿನ್ ಅವರು ಸಿಂಧು ವಿರುದ್ಧ 5-2 ಹೆಡ್-ಡು-ಹೆಡ್ ದಾಖಲೆ ಹೊಂದಿದ್ದರು. ಮರಿನ್‌ರನ್ನು ಮಣಿಸಿರುವ ಸಿಂಧು ಬಿ ಗುಂಪಿನಲ್ಲಿ 2ನೆ ಸ್ಥಾನ ಪಡೆದು ಸೆಮಿಫೈನಲ್‌ಗೆ ಅರ್ಹತೆ ಪಡೆದರು. ಎಲ್ಲ 3 ಪಂದ್ಯಗಳನ್ನು ಜಯಿಸಿದ ಸನ್ ಯೂ ಮೊದಲ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News