×
Ad

ಕುಕ್ 11 ಸಾವಿರ ರನ್ ಗಳಿಸಿದ ಇಂಗ್ಲೆಂಡ್‌ನ ಮೊದಲ ಬ್ಯಾಟ್ಸ್‌ಮನ್

Update: 2016-12-16 23:10 IST

ಚೆನ್ನೈ, ಡಿ.16: ಭಾರತ ವಿರುದ್ಧ ಶುಕ್ರವಾರ ಇಲ್ಲಿ ಆರಂಭವಾದ ಐದನೆ ಟೆಸ್ಟ್‌ನ ಮೊದಲ ದಿನದಾಟದಲ್ಲಿ ನಾಯಕ ಅಲಿಸ್ಟರ್ ಕುಕ್ 11,000 ಟೆಸ್ಟ್ ರನ್ ಗಳಿಸಿದ ಇಂಗ್ಲೆಂಡ್‌ನ ಮೊದಲ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಭಾಜನರಾದರು.

ಜೆನ್ನಿಂಗ್ಸ್‌ರೊಂದಿಗೆ ಇನಿಂಗ್ಸ್ ಆರಂಭಿಸಿದ ಕುಕ್ ಪಂದ್ಯದ ಮೊದಲ ಎಸೆತವನ್ನು ಕವರ್‌ನತ್ತ ತಳ್ಳಿ 2 ರನ್ ಗಳಿಸಿದರು. ಈ ಮೂಲಕ ಟೆಸ್ಟ್‌ನಲ್ಲಿ 11,000 ರನ್ ಪೂರೈಸಿದರು. ಆದರೆ, ಕುಕ್ 10 ರನ್ ಗಳಿಸಿ ರವೀಂದ್ರ ಜಡೇಜಗೆ ವಿಕೆಟ್ ಒಪ್ಪಿಸಿದರು.

ಟೆಸ್ಟ್ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಸ್ಕೋರರ್‌ಗಳ ಪಟ್ಟಿಯಲ್ಲಿ ಕುಕ್ 10ನೆ ಸ್ಥಾನದಲ್ಲಿದ್ದಾರೆ. ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡುಲ್ಕರ್(200 ಟೆಸ್ಟ್, 15,921 ರನ್) ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯದ ರಿಕಿ ಪಾಂಟಿಂಗ್(13,378) ,ದಕ್ಷಿಣ ಆಫ್ರಿಕದ ಆಲ್‌ರೌಂಡರ್ ಜಾಕ್ ಕಾಲಿಸ್(13,289), ರಾಹುಲ್ ದ್ರಾವಿಡ್(13,288), ಶ್ರೀಲಂಕಾದ ಕುಮಾರ ಸಂಗಕ್ಕರ(12,400), ವಿಂಡೀಸ್‌ನ ಬ್ರಿಯಾನ್ ಲಾರಾ(11,953), ಶಿವನಾರಾಯಣ್ ಚಂದರ್‌ಪಾಲ್(11,867), ಮಹೇಲ ಜಯವರ್ಧನೆ(11,814) ಹಾಗೂ ಅಲನ್ ಬಾರ್ಡರ್(11,174) 11,000 ಕ್ಕೂ ಅಧಿಕ ರನ್ ಗಳಿಸಿದ್ದಾರೆ.

140ನೆ ಟೆಸ್ಟ್ ಪಂದ್ಯ ಆಡಿರುವ ಕುಕ್ ಗರಿಷ್ಠ ರನ್ ಹಾಗೂ ಗರಿಷ್ಠ ಶತಕಗಳನ್ನು(30) ಬಾರಿಸಿದ ಇಂಗ್ಲೆಂಡ್‌ನ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ. 2006ರ ಮಾರ್ಚ್‌ನಲ್ಲಿ ನಾಗ್ಪುರದಲ್ಲಿ ಭಾರತದ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಆಡಿರುವ ಕುಕ್ 2011ರಲ್ಲಿ ಭಾರತದ ವಿರುದ್ದ ಗರಿಷ್ಠ ವೈಯಕ್ತಿಕ ಸ್ಕೋರ್(294) ಗಳಿಸಿದರು. ಮಾಜಿ ಇಂಗ್ಲೆಂಡ್ ನಾಯಕ ಗ್ರಹಾಂ ಗೂಚ್ 118 ಟೆಸ್ಟ್‌ಗಳಲ್ಲಿ 8,900 ರನ್ ಗಳಿಸಿ ಇಂಗ್ಲೆಂಡ್‌ನ ಪರ ಎರಡನೆ ಯಶಸ್ವಿ ಟೆಸ್ಟ್ ಬ್ಯಾಟ್ಸ್‌ಮನ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News