ಮೊದಲ ಟೆಸ್ಟ್: ಸಂಕಷ್ಟದಲ್ಲಿ ಪಾಕಿಸ್ತಾನ
ಬ್ರಿಸ್ಬೇನ್, ಡಿ.16: ಆಸ್ಟ್ರೇಲಿಯದ ಬಿಗಿ ಬೌಲಿಂಗ್ ಹಾಗೂ ಚುರುಕಿನ ಫೀಲ್ಡಿಂಗ್‌ಗೆ ತತ್ತರಿಸಿದ ಪಾಕಿಸ್ತಾನ ತಂಡ ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದೆ.
ಎರಡನೆ ದಿನದಾಟವಾದ ಶುಕ್ರವಾರ ಆಸ್ಟ್ರೇಲಿಯದ ಮೂವರು ವೇಗದ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್(3-45), ಹೇಝಲ್‌ವುಡ್(3-19) ಹಾಗೂ ಜಾಕ್ಸನ್ ಬರ್ಡ್(2-7) ಶಿಸ್ತುಬದ್ಧ ದಾಳಿಗೆ ನಿರುತ್ತರವಾದ ಪಾಕ್ ಮೊದಲ ಇನಿಂಗ್ಸ್‌ನಲ್ಲಿ 43 ಓವರ್‌ಗಳಲ್ಲಿ 97 ರನ್‌ಗೆ 8 ವಿಕೆಟ್‌ಗಳನ್ನು ಕಳೆದುಕೊಂಡಿದೆ.
332 ರನ್ ಹಿನ್ನಡೆಯಲ್ಲಿರುವ ಪಾಕಿಸ್ತಾನಕ್ಕೆ ವಿಕೆಟ್‌ಕೀಪರ್ ಸರ್ಫರಾಝ್ ಅಹ್ಮದ್(ಅಜೇಯ 31) ಹಾಗೂ ಮುಹಮ್ಮದ್ ಆಮಿರ್(ಅಜೇಯ 8) ಆಸರೆಯಾಗಿದ್ದಾರೆ. ಆರಂಭಿಕ ಆಟಗಾರ ಸಮಿ ಅಸ್ಲಾಂ(22), ಬಾಬರ್ ಆಝಂ(19) ಎರಡಂಕೆ ಸ್ಕೋರ್ ದಾಖಲಿಸಿದರು. ಹಿರಿಯ ಆಟಗಾರ ಯೂನಿಸ್ ಖಾನ್(0) ಖಾತೆ ತೆರೆಯಲು ವಿಫಲರಾದರು. ನಾಯಕ ಮಿಸ್ಬಾವುಲ್ ಹಕ್ 4 ರನ್ ಗಳಿಸಲಷ್ಟೇ ಶಕ್ತರಾದರು.
ಆಸ್ಟ್ರೇಲಿಯ 429 ರನ್: ಇದಕ್ಕೆ ಮೊದಲು 3 ವಿಕೆಟ್ ನಷ್ಟಕ್ಕೆ 288 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯ 130.1 ಓವರ್‌ಗಳಲ್ಲಿ 429 ರನ್‌ಗೆ ಆಲೌಟಾಯಿತು. 110 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ನಾಯಕ ಸ್ಮಿತ್ 130 ರನ್ ಗಳಿಸಿ ಔಟಾದರು.
ಪೀಟರ್ ಹ್ಯಾಂಡ್ಸ್‌ಕಾಂಬ್(105 ರನ್, 240 ಎಸೆತ, 10 ಬೌಂಡರಿ, 1 ಸಿಕ್ಸರ್) ಚೊಚ್ಚಲ ಶತಕ ಗಳಿಸಿ ಗಮನ ಸೆಳೆದರು. ಸ್ಮಿತ್ ಹಾಗೂ ಹ್ಯಾಂಡ್ಸ್‌ಕಾಂಬ್ 4ನೆ ವಿಕೆಟ್‌ಗೆ 172 ರನ್ ಜೊತೆಯಾಟ ನಡೆಸಿದರು. 16ನೆ ಶತಕ(130 ರನ್, 222 ಎಸೆತ, 19 ಬೌಂಡರಿ) ಬಾರಿಸಿದ ಸ್ಮಿತ್ ವೇಗದ ಬೌಲರ್ ರಿಯಾಝ್‌ಗೆ ವಿಕೆಟ್ ಒಪ್ಪಿಸಿದರು.
ಕಳೆದ ತಿಂಗಳು ಅಡಿಲೇಡ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಚೊಚ್ಚಲ ಪಂದ್ಯ ಆಡಿರುವ ಹ್ಯಾಂಡ್ಸ್‌ಕಾಂಬ್ ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು. ತನಗೆ ಲಭಿಸಿದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಹ್ಯಾಂಡ್ಸ್‌ಕಾಂಬ್ ಔಟಾದಾಗ ಆಸ್ಟ್ರೇಲಿಯ 9 ವಿಕೆಟ್ ನಷ್ಟಕ್ಕೆ 380 ರನ್ ಗಳಿಸಿತ್ತು.
ಬಾಲಂಗೋಚಿಗಳಾದ ನಥನ್ ಲಿಯೊನ್(29) ಹಾಗೂ ಬರ್ಡ್(19) ಕೊನೆಯ ವಿಕೆಟ್‌ಗೆ 49 ರನ್ ಜೊತೆಯಾಟ ನಡೆಸಿದರು. ಪಾಕಿಸ್ತಾನದ ಪರ ವಹಾಬ್ ರಿಯಾಝ್(4-89) ಹಾಗೂ ಮುಹಮ್ಮದ್ ಆಮಿರ್(4-97) ತಲಾ 4 ವಿಕೆಟ್ ಕಬಳಿಸಿದರು. ಯಾಸಿರ್ ಷಾ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್: 429 ರನ್
(ಸ್ಮಿತ್ 130, ಹ್ಯಾಂಡ್ಸ್‌ಕಾಂಬ್ 105, ರೆನ್‌ಶಾ 71, ಆಮಿರ್ 4-97, ರಿಯಾಝ್ 4-89)
ಪಾಕಿಸ್ತಾನ ಪ್ರಥಮ ಇನಿಂಗ್ಸ್: 97/8
(ಸರ್ಫರಾಝ್ ಅಹ್ಮದ್ ಅಜೇಯ 31, ಅಸ್ಲಾಮ್ 22, ಬಾಬರ್ ಆಝಮ್ 19, ಸ್ಟಾರ್ಕ್ 3-45, ಹೇಝಲ್‌ವುಡ್ 3-19, ಬರ್ಡ್ 2-7)