ಪಪುವ ನ್ಯೂ ಗಿನಿಯಲ್ಲಿ ಪ್ರಬಲ ಭೂಕಂಪ
Update: 2016-12-17 20:41 IST
ಸಿಡ್ನಿ (ಆಸ್ಟ್ರೇಲಿಯ), ಡಿ. 17: ಪಪುವ ನ್ಯೂಗಿನಿಯ ಸಮುದ್ರದಲ್ಲಿ ಶನಿವಾರ ಪ್ರಬಲ 7.9ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯಾಲಜಿಕಲ್ ಸರ್ವೆ ತಿಳಿಸಿದೆ.
ಆರಂಭದಲ್ಲಿ ಸುನಾಮಿ ಎಚ್ಚರಿಕೆಯನ್ನು ಹೊರಡಿಸಲಾಯಿತಾದರೂ, ಬಳಿಕ ಹಿಂದಕೆ ಪಡೆದುಕೊಳ್ಳಲಾಯಿತು.
ಸ್ಥಳೀಯ ಸಮಯ ರಾತ್ರಿ 8:51ಕ್ಕೆ ನ್ಯೂ ಅಯರ್‌ಲ್ಯಾಂಡ್‌ನ ಟಾರನ್ ಪೂರ್ವಕ್ಕೆ 60 ಕಿ.ಮೀ. ದೂರದಲ್ಲಿ ಸಮುದ್ರದಲ್ಲಿ ಸುಮಾರು 75 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿತು.
ಸುನಾಮಿ ಅಲೆಗಳು ಪಪುವ ನ್ಯೂಗಿನಿ, ಇಂಡೋನೇಶ್ಯ, ನೌರು, ಸೋಲೊಮನ್ ದ್ವೀಪ ಮತ್ತು ಇತರ ಸ್ಥಳಗಳ ಕರಾವಳಿಗೆ ಅಪ್ಪಳಿಸಬಹುದೆಂದು ಆರಂಭದಲ್ಲಿ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ಎಚ್ಚರಿಕೆ ನೀಡಿತ್ತು.
ಆದರೆ, ಸುನಾಮಿ ಬೆದರಿಕೆಯ ಅವಧಿ ಮುಗಿದಿದೆ ಎಂಬುದಾಗಿ ಎರಡು ಗಂಟೆಗಳ ಬಳಿಕ ಅದು ಹೇಳಿತು.
ಯಾವುದೇ ಪ್ರಾಣ ಹಾನಿ ಅಥವಾ ಸೊತ್ತು ನಷ್ಟ ಉಂಟಾದ ವರದಿ ಬಂದಿಲ್ಲ.