×
Ad

ಐದನೆ ಟೆಸ್ಟ್:ಸುಭದ್ರ ನೆಲೆಯಲ್ಲಿ ಭಾರತ

Update: 2016-12-18 17:23 IST

ಚೆನ್ನೈ, ಡಿ.2:ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಅಗ್ರ ಸರದಿಯ ದಾಂಡಿಗ ಲೋಕೇಶ್ ರಾಹುಲ್ ದ್ವಿಶತಕ ವಂಚಿತಗೊಂಡಿದ್ದಾರೆ. ಭಾರತ ಈ ಟೆಸ್ಟ್‌ನಲ್ಲಿ ಸುಭದ್ರ ನೆಲೆಯಲ್ಲಿ ದ್ದು ಇಂಗ್ಲೆಂಡ್‌ನ ಮೊತ್ತವನ್ನು ಸರಿಗಟ್ಟಲು 86 ರನ್ ಗಳಿಸಬೇಕಾಗಿದೆ.
ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್‌ನಲ್ಲಿ ಲೋಕೇಶ್ ರಾಹುಲ್ ಒಂದು ರನ್‌ನಿಂದ ಚೊಚ್ಚಲ ದ್ವಿಶತಕ ವಂಚಿತಗೊಂಡರು.
  ಇನಿಂಗ್ಸ್ ಆರಂಭಿಸಿದ ಪಾರ್ಥಿವ್ ಪಟೇಲ್ ಮತ್ತು ರಾಹುಲ್ ಮೊದಲ ವಿಕೆಟ್‌ಗೆ 152 ರನ್ ದಾಖಲಿಸುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ಬಳಿಕ ರಾಹುಲ್ ಕರುಣ್ ನಾಯರ್ ಜೊತೆ ನಾಲ್ಕನೆ ವಿಕೆಟ್‌ಗೆ 161 ರನ್‌ಗಳ ಜೊತೆಯಾಟ ನೀಡಿದರು. ಭಾರತ ಈ ಎರಡು ಜೊತೆಯಾಟದ ನೆರವಿನಲ್ಲಿ ದಿನದಾಟದಂತ್ಯಕ್ಕೆ 108 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 391 ರನ್ ಗಳಿಸಿದೆ.
71 ರನ್ ಗಳಿಸಿರುವ ಕರುಣ್ ನಾಯರ್ ಮತ್ತು 17 ರನ್ ಗಳಿಸಿರುವ ಮುರಳಿ ವಿಜಯ್ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.
 ಎರಡನೆ ದಿನದಾಟದಂತ್ಯಕ್ಕೆ ಭಾರತ 20 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 60 ರನ್ ಗಳಿಸಿತ್ತು. ಲೋಕೇಶ್ ರಾಹುಲ್ ಔಟಾಗದೆ 30 ರನ್ ಮತ್ತು ಪಾರ್ಥಿವ್ ಪಟೇಲ್ ಔಟಾಗದೆ 28 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.
ಇಂದು ಆಟ ಮುಂದುವರಿಸಿದ ರಾಹುಲ್ ಮತ್ತು ಪಾರ್ಥಿವ್ ಪಟೇಲ್ ಅವರು ಇಂಗ್ಲೆಂಡ್‌ನ ಬೌಲರ್‌ಗಳ ಬೆವರಿಳಿಸಿದರು. 41.5ನೆ ಓವರ್‌ನಲ್ಲಿ ಅಲಿ ಎಸೆತದಲ್ಲಿ ಪಾರ್ಥಿವ್ ಪಟೇಲ್ ಅವರು ಬಟ್ಲರ್‌ಗೆ ಕ್ಯಾಚ್ ನೀಡಿದರು. ಪಾರ್ಥಿವ್ ಪಟೇಲ್ ಅವರು 71 ರನ್(112ಎ, 7ಬೌ) ಗಳಿಸಿದರು.
ಪಾರ್ಥಿವ್ ಪಟೇಲ್ ನಿರ್ಗಮನದ ಬಳಿಕ ಚೇತೇಶ್ವರ ಪೂಜಾರ ಅವರು ಕ್ರೀಸ್‌ಗೆ ಆಗಮಿಸಿದರು. ಆದರೆ ಅವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. 16 ರನ್ ಗಳಿಸಿ ಪೆವಿಲಿಯನ್ ಸೇರಿದರು. ಬಳಿಕ ವಿರಾಟ್ ಕೊಹ್ಲಿ ಕ್ರೀಸ್‌ಗೆ ಆಗಮಿಸಿದರು. 60.4ನೆ ಓವರ್‌ನಲ್ಲಿ ಕೊಹ್ಲಿ ಅವರು ಬ್ರಾಡ್ ಎಸೆತದಲ್ಲಿ ಜೆನ್ನಿಂಗ್ಸ್‌ಗೆ ಕ್ಯಾಚ್ ನೀಡಿ ವಾಪಸಾದರು. ಕೊಹ್ಲಿ 15 ರನ್ ಗಳಿಸಿದರು.
ರಾಹುಲ್ ಶತಕ:ಹನ್ನೆರಡನೆ ಟೆಸ್ಟ್ ಆಡುತ್ತಿರುವ ಲೋಕೇಶ್ ರಾಹುಲ್ 52.3ನೆ ಓವರ್‌ನಲ್ಲಿ ಸ್ಟೋಕ್ಸ್ ಎಸೆತದಲ್ಲಿ 3 ರನ್ ಗಳಿಸುವ ಮೂಲಕ 4ನೆ ಶತಕ ಪೂರ್ಣಗೊಳಿಸಿರು. 171 ಎಸೆತಗಳಲ್ಲಿ 8ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ ಶತಕ ಪೂರ್ಣಗೊಳಿಸಿದರು.
ರಾಹುಲ್ ಶತಕ ಪೂರ್ಣಗೊಳಿಸಿದ ಬಳಿಕ ಮತ್ತೆ ಗುಡುಗತೊಡಗಿದರು. ಕೊಹ್ಲಿ ಅವರು ರಾಹುಲ್ ಜೊತೆ ತಂಡದ ಸ್ಕೋರ್ 60.4 ಓವರ್‌ಗಳಲ್ಲಿ 211 ತಲುಪುವ ತನಕ ಕ್ರೀಸ್‌ನಲ್ಲಿ ನಿಂತರು. ಕೊಹ್ಲಿ ನಿರ್ಗಮನದ ಬಳಿಕ ಕರುಣ್ ನಾಯರ್ ಕ್ರೀಸ್‌ಗೆ ಆಗಮಿಸಿದರು. ಕರ್ನಾಟಕ ರಣಜಿ ತಂಡದ ಇಬ್ಬರು ಆಟಗಾರರು ಇಂಗ್ಲೆಂಡ್‌ನ ದಾಳಿಯನ್ನು ಪುಡಿ ಪುಡಿ ಮಾಡಿದರು.
  ಈ ಮೊದಲು ವೆಸ್ಟ್‌ಇಂಡೀಸ್ ವಿರುದ್ಧ ಕಿಂಗ್ಸ್‌ಸ್ಟನ್‌ನಲ್ಲಿ 2016, ಜುಲೈ 30ರಂದು 158 ರನ್ ಗಳಿಸಿದ್ದ ರಾಹುಲ್ ಈ ದಾಖಲೆಯನ್ನು ಉತ್ತಮ ಪಡಿಸಿದರು. 102.3ನೆ ಓವರ್‌ನಲ್ಲಿ ರಾಹುಲ್ ಅವರು ರಶೀದ್ ಎಸೆತದಲ್ಲಿ ಚೆಂಡನ್ನು ತಳ್ಳಿ ಒಂದು ರನ್ ಗಳಿಸಲು ಯತ್ನಿಸಿದರು. ಆದರೆ ಬಟ್ಲರ್ ಕ್ಯಾಚ್ ತೆಗದುಕೊಳ್ಳುವುದರೊಂದಿಗೆ ರಾಹುಲ್ ಔಟಾದರು. ಜೀವನಶ್ರೇಷ್ಠ 199 ರನ್ ಗಳಿಸಿದರು. ದ್ವಿಶತಕ ವಂಚಿತಗೊಂಡು ಪೆವಿಲಿಯನ್‌ಗೆ ವಾಪಸಾದರು. ಕರುಣ್ ನಾಯರ್ ಮತ್ತು ಮುರಳಿ ವಿಜಯ್ ಆಟ ಮುಂದುವರಿಸಿ ನಾಲ್ಕನೆ ದಿನಕ್ಕೆ ಬ್ಯಾಟಿಂಗ್‌ನ್ನು ಕಾಯ್ದಿರಿಸಿದ್ದಾರೆ.
ಇಂಗ್ಲೆಂಡ್‌ನ ಪರ ಬ್ರಾಡ್, ಎಂಎಂ ಅಲಿ , ಸ್ಟೋಕ್ಸ್ ಮತ್ತು ರಶೀದ್ ತಲಾ ಒಂದು ವಿಕೆಟ್ ಹಂಚಿಕೊಂಡರು.
ಸ್ಕೋರ್ ಪಟ್ಟಿ
ಇಂಗ್ಲೆಂಡ್ ಮೊದಲ ಇನಿಂಗ್ಸ್ 477
ಭಾರತ 108 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 391
        ರಾಹುಲ್ ಸಿ ಬಟ್ಲರ್ ಬಿ ರಶೀದ್ 199
        ಪಾರ್ಥಿವ್ ಪಟೇಲ್ ಸಿ ಬಟ್ಲರ್ ಬಿ ಅಲಿ71
            ಪೂಜಾರ ಸಿ ಕುಕ್ ಬಿ ಸ್ಟೋಕ್ಸ್16
             ಕೊಹ್ಲಿ ಸಿ ಜೆನ್ನಿಂಗ್ಸ್ ಬಿ ಬ್ರಾಡ್15
            ಕರುಣ್ ನಾಯರ್ ಔಟಾಗದೆ 71
            ಮುರಳಿ ವಿಜಯ್ ಔಟಾಗದೆ17
                    ಇತರೆ02
ವಿಕೆಟ್ ಪತನ: 1-152, 2-181, 3-211, 4-372
ಬೌಲಿಂಗ್ ವಿವರ
        ಸ್ಟುವರ್ಟ್ ಬ್ರಾಡ್18-4-46-1
        ಜಾಕ್ ಬಾಲ್15-1-50-0
        ಮೊಯಿನ್ ಅಲಿ24-1-96-1
            ಸ್ಟೋಕ್ಸ್09-1-37-1
            ರಶೀದ್17-0-76-1
        ಡಾವಿಸನ್23-3-72-0
        ಜೋ ರೂಟ್02-0-12-0

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News