×
Ad

ಇಂದೋರ್‌ನಲ್ಲಿ ರಣಜಿ ಟ್ರೋಫಿ ಫೈನಲ್

Update: 2016-12-18 23:14 IST

ಇಂದೋರ್, ಡಿ.18: ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಹೋಳ್ಕರ್ ಸ್ಟೇಡಿಯಂ 2016-17ರ ಆವೃತ್ತಿಯ ರಣಜಿ ಟ್ರೋಫಿಯ ಫೈನಲ್ ಪಂದ್ಯದ ಆತಿಥ್ಯವಹಿಸಿಕೊಳ್ಳಲಿದೆ ಎಂದು ಬಿಸಿಸಿಐ ರವಿವಾರ ಘೋಷಿಸಿದೆ.

  ರಣಜಿ ಟ್ರೋಫಿ ಫೈನಲ್ ಪಂದ್ಯ ಜ.10ಕ್ಕೆ ನಡೆಯಲಿರುವುದು. ಈ ಹಿಂದೆ ಜ.12ಕ್ಕೆ ಫೈನಲ್ ಪಂದ್ಯವನ್ನು ನಿಗದಿಪಡಿಸಲಾಗಿತ್ತು. ಇದೀಗ ಕ್ರಿಕೆಟ್ ಮಂಡಳಿ ಕೆಲವೊಂದು ಪಂದ್ಯಗಳ ವೇಳಾಪಟ್ಟಿಯಲ್ಲಿ ಪರಿಷ್ಕರಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಫೈನಲ್ ಪಂದ್ಯ ಎರಡು ದಿನ ಮುಂಚಿತವಾಗಿ ನಡೆಯಲಿದೆ.

ಹೋಳ್ಕರ್ ಸ್ಟೇಡಿಯಂ ಈ ವರ್ಷದ ಅಕ್ಟೋಬರ್‌ನಲ್ಲಿ ನ್ಯೂಝಿಲೆಂಡ್ ಹಾಗೂ ಭಾರತ ನಡುವಿನ ಮೂರನೆ ಹಾಗೂ ಅಂತಿಮ ಟೆಸ್ಟ್‌ನ ಆತಿಥ್ಯವಹಿಸಿಕೊಂಡಿತ್ತು. ರಣಜಿಯ ಸೆಮಿ ಫೈನಲ್ ಪಂದ್ಯಗಳು ರಾಜ್‌ಕೋಟ್ ಹಾಗೂ ನಾಗ್ಪುರದಲ್ಲಿ ಜ.3ರ ಬದಲಿಗೆ ಜ.1 ರಿಂದಲೇ ಆರಂಭವಾಗಲಿದೆ.

ಬಹುನಿರೀಕ್ಷಿತ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಕ್ವಾರ್ಟರ್ ಫೈನಲ್ ಪಂದ್ಯ ಜ.23 ರಿಂದ ವಿಶಾಖಪಟ್ಟಣದ ಡಾ.ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಜ.23 ರಿಂದ ರಾಯ್‌ಪುರದಲ್ಲಿ ಆರಂಭವಾಗಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಮುಂಬೈ ತಂಡ ಹೈದರಾಬಾದ್ ತಂಡವನ್ನು ಎದುರಿಸಲಿದೆ.

 ಇತರ ಎರಡು ಕ್ವಾರ್ಟರ್ ಫೈನಲ್ ಪಂದ್ಯಗಳು ಗುಜರಾತ್-ಒಡಿಶಾ ಹಾಗೂ ಹರ್ಯಾಣ-ಜಾರ್ಖಂಡ್‌ನ ನಡುವೆ ಕ್ರಮವಾಗಿ ಜೈಪುರ ಹಾಗೂ ಬರೋಡಾದಲ್ಲಿ ನಡೆಯಲಿದೆ.

ರಣಜಿ ವೇಳಾಪಟ್ಟಿ

ಕ್ವಾರ್ಟರ್‌ಫೈನಲ್‌ಗಳು:(ಡಿ.23-27): ಮುಂಬೈ-ಹೈದರಾಬಾದ್(ರಾಯಿಪುರ)

ತಮಿಳುನಾಡು-ಕರ್ನಾಟಕ(ವಿಶಾಖಪಟ್ಟಣ)

ಗುಜರಾತ್-ಒಡಿಶಾ(ಜೈಪುರ)

ಹರ್ಯಾಣ-ಜಾರ್ಖಂಡ್(ಬರೋಡಾ)

ಸೆಮಿಫೈನಲ್‌ಗಳು:(ಜ.1 ರಿಂದ 4)

ಪ್ರಥಮ ಸೆಮಿ ಫೈನಲ್(ರಾಜ್‌ಕೋಟ್)

ದ್ವಿತೀಯ ಸೆಮಿ ಫೈನಲ್(ನಾಗ್ಪುರ)

ಫೈನಲ್(ಜ.10-14): ಇಂದೋರ್.

ತಮಿಳುನಾಡು ರಣಜಿ ತಂಡಕ್ಕೆ ವಿಜಯ್,ಅಶ್ವಿನ್

 ಚೆನ್ನೈ, ಡಿ.18: ವಿಶಾಖಪಟ್ಟಣದಲ್ಲಿ ಕರ್ನಾಟಕದ ವಿರುದ್ಧ ನಡೆಯಲಿರುವ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ತಮಿಳುನಾಡು ತಂಡ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ತಂಡದಲ್ಲಿ ಎಂ. ವಿಜಯ್ ಹಾಗೂ ಆರ್.ಅಶ್ವಿನ್‌ಗೆ ಸ್ಥಾನ ನೀಡಲಾಗಿದೆ.

ಜೈಪುರದಲ್ಲಿ ಒಡಿಶಾದ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯ ಆಡಲಿರುವ ಗುಜರಾತ್ ತಂಡಕ್ಕೆ ಪಾರ್ಥಿವ್ ಪಟೇಲ್ ಲಭ್ಯವಿರುವುದಾಗಿ ಖಚಿತಪಡಿಸಿದ್ದಾರೆ.

ಕರ್ನಾಟಕ ಹಾಗೂ ಹರ್ಯಾಣ ತಂಡಗಳು ಜ.23 ರಿಂದ ಆರಂಭವಾಗುವ ನಾಕೌಟ್ ಪಂದ್ಯಗಳಿಗೆ ಟೆಸ್ಟ್ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.

ಡಿ.7 ರಂದು ತಮಿಳುನಾಡಿನ ದಿಂಡಿಗಲ್‌ನಲ್ಲಿ ನಡೆಯಬೇಕಾಗಿದ್ದ ಬಿ ಗುಂಪಿನ ಕೊನೆಯ ಪಂದ್ಯ ಡಿ.15 ರಂದು ಮುಂದೂಡಲ್ಪಟ್ಟಿದ್ದ ಕಾರಣ ರಣಜಿ ಟ್ರೋಫಿಯ ವೇಳಾಪಟ್ಟಿಯ ಪ್ರಕಟಣೆ ವಿಳಂಬವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News