ದಕ್ಷಿಣ ಸುಡಾನ್‌ನಲ್ಲಿ ಜನಾಂಗೀಯ ಹಿಂಸಾಚಾರ ಖಚಿತ: ಮೂನ್
ವಿಶ್ವಸಂಸ್ಥೆ, ಡಿ. 20: ದಕ್ಷಿಣ ಸುಡಾನ್‌ಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವುದರ ಮೇಲೆ ನಿಷೇಧ ಹೇರಲು ಹಾಗೂ ದ್ವೇಷ ಭಾಷಣ, ಪ್ರಚೋದನೆ ಮತ್ತು ಹಿಂಸಾಚಾರವನ್ನು ಕೊನೆಗೊಳಿಸುವಂತೆ ಆ ದೇಶದ ನಾಯಕರ ಮೇಲೆ ಒತ್ತಡ ಹೇರಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಆ ದೇಶದಲ್ಲಿ ಜನಾಂಗೀಯ ಹತ್ಯೆ ನಡೆಯುವುದು ಖಂಡಿತ ಎಂದು ವಿಶ್ವಸಂಸ್ಥೆಯ ನಿರ್ಗಮನ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ಸೋಮವಾರ ಹೇಳಿದ್ದಾರೆ.
ಅತ್ಯಂತ ನೂತನ ದೇಶದಲ್ಲಿನ ಅಸ್ಥಿರತೆಯು ಈ ವಲಯಕ್ಕೆ ಬೆದರಿಕೆಯಾಗಿದೆ ಎಂದು ಹೇಳಿದ ಅವರು, ಆ ದೇಶದ ವಿರುದ್ಧ ಶಸ್ತ್ರಾಸ್ತ್ರ ದಿಗ್ಬಂಧನೆಯನ್ನು ವಿಧಿಸುವಂತೆ ಭದ್ರತಾ ಮಂಡಳಿಯನ್ನು ಒತ್ತಾಯಿಸಿದರು. ಈ ಕ್ರಮವು ಎಲ್ಲ ಬಣಗಳ ಯುದ್ಧ ನಡೆಸುವ ಸಾಮರ್ಥ್ಯವನ್ನು ಕುಂದಿಸುತ್ತದೆ ಎಂದರು.
‘‘ನಾವು ಕ್ರಮ ತೆಗೆದುಕೊಳ್ಳಲು ವಿಫಲರಾದರೆ, ದಕ್ಷಿಣ ಸುಡಾನ್‌ನಲ್ಲಿ ಸಾಮೂಹಿಕ ನರಮೇಧ ನಡೆಯುವುದನ್ನು ತಪ್ಪಿಸುವುದು ಸಾಧ್ಯವಿಲ್ಲ’’ ಎಂದು ಬಾನ್ ಕಿ ಮೂನ್ ಎಚ್ಚರಿಸಿದರು.
ದಕ್ಷಿಣ ಸುಡಾನ್ ತನ್ನ ನೆರೆಯ ಸುಡಾನ್ ದೇಶದಿಂದ 2011ರಲ್ಲಿ ಸ್ವಾತಂತ್ರ ಪಡೆಯಿತು. ದೇಶದಲ್ಲಿ ಇನ್ನಾದರೂ ಶಾಂತಿ ಮತ್ತು ಸ್ಥಿರತೆ ನೆಲೆಸಬಹುದೆಂದು ಆಗ ಭಾವಿಸಲಾಗಿತ್ತು. ಆದರೆ, 2013 ಡಿಸೆಂಬರ್‌ನಲ್ಲಿ ಅಧ್ಯಕ್ಷ ಸಲ್ವ ಕೀರ್‌ಗೆ ನಿಷ್ಠೆ ಹೊಂದಿರುವ ಪಡೆಗಳು ಮತ್ತು ಅವರ ಮಾಜಿ ಉಪಾಧ್ಯಕ್ಷ ರೀಕ್ ಮಚರ್‌ಗೆ ನಿಷ್ಠೆ ಹೊಂದಿರುವ ಸೈನಿಕರ ನಡುವೆ ಜನಾಂಗೀಯ ಹಿಂಸಾಚಾರ ಆರಂಭಗೊಂಡಿತು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.