ಜರ್ಮನಿ: ಕ್ರಿಸ್ಮಸ್ ಖರೀದಿದಾರರ ಮೇಲೆ ಚಲಿಸಿದ ಟ್ರಕ್
ಬರ್ಲಿನ್, ಡಿ. 20: ಪಶ್ಚಿಮ ಜರ್ಮನಿಯಲ್ಲಿ ಸೋಮವಾರ ಬೃಹತ್ ಟ್ರಕ್ಕೊಂದು ಕ್ರಿಸ್ಮಸ್‌ಗಾಗಿ ಖರೀದಿಯಲ್ಲಿ ತೊಡಗಿದ್ದ ಜನರ ಮೇಲೆ ಚಲಿಸಿದಾಗ 12 ಮಂದಿ ಮೃತಪಟ್ಟಿದ್ದಾರೆ ಹಾಗೂ 48 ಮಂದಿ ಗಾಯಗೊಂಡಿದ್ದಾರೆ.
ಈ ದುರ್ಘಟನೆಯ ಹಿನ್ನೆಲೆಯಲ್ಲಿ ಹಬ್ಬದ ಋತುವಿನಲ್ಲೇ ಜರ್ಮನ್ನರು ರಾಷ್ಟ್ರೀಯ ಶೋಕಾಚರಣೆ ನಡೆಸುತ್ತಿದ್ದಾರೆ.
ಇದು ಈ ವರ್ಷದ ಜುಲೈ ತಿಂಗಳಲ್ಲಿ ಫ್ರಾನ್ಸ್‌ನ ನೀಸ್‌ನಲ್ಲಿ ನಡೆದ ಭಯಾನಕ ಟ್ರಕ್ ದಾಳಿಯನ್ನು ನೆನಪಿಸಿದೆ. ಅಂದಿನ ದಾಳಿಯಲ್ಲಿ 86 ಮಂದಿ ಮೃತಪಟ್ಟಿದ್ದಾರೆ. ಆ ಘಟನೆಯ ಹೊಣೆಯನ್ನು ಭಯೋತ್ಪಾದಕ ಸಂಘಟನೆ ಐಸಿಸ್ ಹೊತ್ತುಕೊಂಡಿತ್ತು.
‘‘ನಾನು ದಾಳಿ ಎನ್ನುವ ಪದವನ್ನು ಬಳಸುವುದಿಲ್ಲ. ಆದರೆ, ಹೆಚ್ಚಿನವರು ಅದನ್ನು ದಾಳಿ ಎಂದು ಹೇಳುತ್ತಿದ್ದಾರೆ’’ ಎಂದು ಜರ್ಮನಿಯ ಆಂತರಿಕ ಸಚಿವ ಥಾಮಸ್ ಡಿ ಮೇಝಿಯರ್ ಜರ್ಮನಿಯ ಸುದ್ದಿವಾಹಿನಿ ಎಆರ್‌ಡಿಗೆ ಹೇಳಿದ್ದಾರೆ.
ಜರ್ಮನಿ ಪೊಲೀಸರು ಸೋಮವಾರ ಸಂಜೆಯ ಹೊತ್ತಿಗೆ ಓರ್ವ ಶಂಕಿತನನ್ನು ಘಟನೆ ನಡೆದ ಸ್ಥಳದಿಂದ ಹಲವು ನೂರು ಮೀಟರ್ ದೂರದ ಸ್ಥಳವೊಂದರಿಂದ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆತನು ಟ್ರಕ್ ಚಾಲಕನ ವಿವರಗಳಿಗೆ ಹೋಲುತ್ತಾನೆ ಎನ್ನಲಾಗಿದೆ.
ಟ್ರಕ್ ಪೋಲ್ಯಾಂಡ್‌ನ ನಂಬರ್ ಪ್ಲೇಟ್ ಹೊಂದಿದೆ ಹಾಗೂ ಚಾಲಕನ ಪಕ್ಕದ ಆಸನದಲ್ಲಿ ಒಂದು ಹೆಣವೂ ಪತ್ತೆಯಾಗಿದೆ.
ಶಂಕಿತನು ಪಾಕಿಸ್ತಾನಿ ರಾಷ್ಟ್ರೀಯನೆಂದು ನಂಬಲಾಗಿದೆ ಎಂದು ಜರ್ಮನಿಯ ಇಬ್ಬರು ಹಿರಿಯ ಅಧಿಕಾರಿಗಳು ‘ವಾಶಿಂಗ್ಟನ್ ಪೋಸ್ಟ್’ಗೆ ತಿಳಿಸಿದರು. ಆತ ಆಶ್ರಯ ಕೋರಿ ಫೆಬ್ರವರಿಯಲ್ಲಿ ಜರ್ಮನಿಗೆ ಬಂದಿದ್ದನೆನ್ನಲಾಗಿದೆ.
ಸೋಮವಾರ ರಾತ್ರಿ ಸುಮಾರು 8 ಗಂಟೆ ಹೊತ್ತಿಗೆ ಟ್ರಕ್ ಪಾದಚಾರಿ ದಾರಿಗೆ ನುಗ್ಗಿ ಅಂಗಡಿಗಳ ನಡುವಿನ ದಾರಿಯಲ್ಲಿ ಏರಿ ಹೋಯಿತು. 50ರಿಂದ 80 ಅಡಿ ದೂರ ಸಾಗಿದ ಬಳಿಕ ಟ್ರಕ್ ನಿಂತಿತು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.