ಅಶ್ವಿನ್ ವಿರುದ್ಧ ಧೋನಿ ಅಭಿಮಾನಿಗಳ ಆಕ್ರೋಶ!
ಹೊಸದಿಲ್ಲಿ, ಡಿ.23: ಚೆನ್ನೈ ಸ್ಪಿನ್ನರ್ ಆರ್.ಅಶ್ವಿನ್‌ಗೆ 2016 ಯಶಸ್ವಿ ವರ್ಷವಾಗಿ ಪರಿಗಣಮಿಸಿದೆ. ಭಾರತದ ಅಗ್ರಮಾನ್ಯ ಬೌಲರ್ ಆಗಿರುವ ಅವರು ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಆದರೆ, ಅಶ್ವಿನ್ ಮಾಡಿರುವ ಒಂದು ಪ್ರಮಾದ ಅಭಿಮಾನಿಗಳ ಆಕ್ರೋಶ ಕಾರಣವಾಗಿದೆ.
ಐಸಿಸಿ ಪ್ರಶಸ್ತಿ ಲಭಿಸಿದ ಬಳಿಕ ಟ್ವಿಟರ್‌ನಲ್ಲಿ ಅಶ್ವಿನ್ ಅವರು , ಪತ್ನಿ ಪ್ರೀತಿ ನಾರಾಯಣನ್, ಭಾರತದ ಫಿಟ್‌ನೆಸ್ ಕೋಚ್ ಶಂಕರ್ ಬಸು, ಮುಖ್ಯ ಕೋಚ್ ಅನಿಲ್ ಕುಂಬ್ಳೆ, ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ತನ್ನ ಹೆತ್ತವರಿಗೆ ಕೃತಜ್ಞತೆ ಸಲ್ಲಿಸಿದ್ದರು. ಆದರೆ, ಈ ವೇಳೆ ಭಾರತದ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಯ ಹೆಸರನ್ನು ಪ್ರಸ್ತಾವಿಸಲಿಲ್ಲ.
ಅಶ್ವಿನ್‌ರ ಈ ವರ್ತನೆಗೆ ಧೋನಿಯ ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾದ ಬಳಿಕ ನೀಡಿರುವ ಸಂದರ್ಶನದಲ್ಲಿ ಅಶ್ವಿನ್ ಅವರು ಧೋನಿ ಹೆಸರನ್ನು ಮಾತಿನ ಮಧ್ಯೆ ಉಲ್ಲೇಖಿಸಿದ್ದರು. ಆದರೆ ಕೊಹ್ಲಿ ಅವರನ್ನು ಹೆಚ್ಚು ಹೊಗಳಿದಿದ್ದರು.
‘‘ಈ ಪ್ರಶಸ್ತಿಯನ್ನು ನನ್ನ ಕುಟುಂಬ ಸದಸ್ಯರಿಗೆ ಸಮರ್ಪಿಸುವೆ. ನಾನು ಐಸಿಸಿ ಹಾಗೂ ಅತ್ಯಂತ ಮುಖ್ಯವಾಗಿ ಸಹ ಆಟಗಾರರಿಗೆ ಕೃತಜ್ಞತೆ ಸಲ್ಲಿಸಲು ಬಯಸುವೆ. ನಮ್ಮ ಯಶಸ್ಸಿಗೆ ಕಾರಣವಾದ ಸಪೋರ್ಟ್ ಸ್ಟಾಫ್‌ಗೂ ಋಣಿಯಾಗಿರುವೆ. ಎಂಎಸ್ ಧೋನಿ ನಿವೃತ್ತಿಯಾದ ಬಳಿಕ ತಂಡದಲ್ಲಿ ಭಾರೀ ಬದಲಾವಣೆಯಾಗುತ್ತಿದೆ. ಯುವ ನಾಯಕ ಕೊಹ್ಲಿ ತಂಡದ ಸಾರಥ್ಯವಹಿಸಿಕೊಂಡಿದ್ದಾರೆ. ಅವರ ನಾಯಕತ್ವದಲ್ಲಿ ನಾವು ಸರಿಯಾದ ಹಳಿಗೆ ಮರಳಿದ್ದೇವೆ. ನಮ್ಮ ತಂಡದಲ್ಲಿ ಯುವ ಆಟಗಾರರ ದಂಡೇ ಇದೆ’’ ಎಂದು ಅಶ್ವಿನ್ ಹೇಳಿದ್ದರು.
ಅಶ್ವಿನ್ 2011ರಲ್ಲಿ ಧೋನಿ ನಾಯಕತ್ವದಲ್ಲಿ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆಗೈದಿದ್ದರು. ಅವರೊಂದಿಗೆ ಈಗ ಅಮಾನತಿನಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ದೀರ್ಘ ಸಮಯ ಜೊತೆಯಾಗಿ ಆಡಿದ್ದರು. ಐಸಿಸಿ ಪ್ರಶಸ್ತಿ ಜಯಿಸಿದ ಬಳಿಕ ಧೋನಿಯ ನೆರವನ್ನು ನೆನಪಿಸಿಕೊಳ್ಳದ ಅಶ್ವಿನ್ ವಿರುದ್ಧ ಅವರ ಅಭಿಮಾನಿಗಳು ಕೆಂಡಕಾರಿದ್ದಾರೆ.
‘ಅಶ್ವಿನ್ ಅವರೇ ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ. ನೀವು ವೈಯಕ್ತಿಕವಾಗಿ ಧೋನಿಗೆ ಕೃತಜ್ಞತೆ ಸಲ್ಲಿಸಬೇಕಾಗಿತ್ತು. ನೀವು ವಿದೇಶಿ ನೆಲದಲ್ಲಿ ಕಠಿಣ ಸಮಯ ಎದುರಿಸುತ್ತಿದ್ದಾಗ ಮಹಿ ನಿಮ್ಮ ಬೆಂಬಲಕ್ಕೆ ನಿಂತಿದ್ದರು. ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿದ್ದರು. ನಾವು 2007ರ ವಿಶ್ವಕಪ್‌ನಿಂದ ಕ್ರಿಕೆಟ್ ವೀಕ್ಷಿಸುತ್ತಿರುವೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಧೋನಿಯ ಮೂಲಕವೇ ನಿಮ್ಮ ಪರಿಚಯ ನಮಗಾಗಿತ್ತು ಎಂದು ಧೋನಿಯ ಅಭಿಮಾನಿಗಳು ಟ್ವೀಟರ್‌ನಲ್ಲಿ ಕಿಡಿಕಾರಿದ್ದಾರೆ.