ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ಅಲಭ್ಯ
ಕೋಲ್ಕತಾ, ಡಿ.23: ಭಾರತದ ಪ್ರಮುಖ ವೇಗದ ಬೌಲರ್ ಮುಹಮ್ಮದ್ ಶಮಿ ಇಂಗ್ಲೆಂಡ್ ವಿರುದ್ಧ ಹೊಸ ವರ್ಷಾರಂಭದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಏಕದಿನ ಹಾಗೂ ಟ್ವೆಂಟಿ-20 ಸರಣಿಯಿಂದ ಹೊರಗುಳಿದಿದ್ದಾರೆ.
ಶಮಿ ಬಲಗೈ ಮಂಡಿ ನೋವಿನಿಂದಾಗಿ ಆಂಗ್ಲರ ವಿರುದ್ಧದ ಸರಣಿಯಿಂದ ಹೊರಗುಳಿಯುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರನೆ ಟೆಸ್ಟ್ ಪಂದ್ಯ ವೇಳೆಗೆ ಶಮಿಗೆ ಗಾಯವಾಗಿದ್ದು, ಟೆಸ್ಟ್ ಸರಣಿಯ ಕೊನೆಯ ಪಂದ್ಯಗಳಲ್ಲಿ ಆಡಿರಲಿಲ್ಲ. 26ರ ಹರೆಯದ ವೇಗದ ಬೌಲರ್ ಶಮಿ ಈ ಮೊದಲು ಎಡ ಮಂಡಿ ನೋವಿಗೆ ಒಳಗಾಗಿದ್ದರು. ಇದೀಗ ಅವರು ಬಲ ಮಂಡಿನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಏಕದಿನ ತಂಡದಲ್ಲಿ ಶಮಿ ಅನುಪಸ್ಥಿತಿಯಿಂದ ತೆರವಾಗಿರುವ ಸ್ಥಾನಕ್ಕೆ ದಿಲ್ಲಿ ವೇಗದ ಬೌಲರ್ ಇಶಾಂತ್ ಶರ್ಮ ಆಯ್ಕೆಯಾಗುವ ಸಾಧ್ಯತೆಯಿದೆ.
ಭಾರತದಲ್ಲಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸುವುದಾಗಿ ಇತ್ತೀಚೆಗೆ ಆಂಗ್ಲ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಆಶೀಷ್ ನೆಹ್ರಾ ಇಂಗಿತ ವ್ಯಕ್ತಪಡಿಸಿರುವ ಕಾರಣ ಆಯ್ಕೆಗಾರರು ನೆಹ್ರಾ ಹೆಸರನ್ನು ತಂಡದ ಆಯ್ಕೆಯ ವೇಳೆ ಚರ್ಚಿಸುವ ಸಾಧ್ಯತೆಯೂ ಇದೆ.
ಪ್ರಮುಖ ಆಟಗಾರರು ಗಾಯಗೊಂಡಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆಯ್ಕೆಗಾರರಿಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆರಂಭಿಕ ಆಟಗಾರರನ್ನು ಆಯ್ಕೆ ಮಾಡುವುದು ಒಂದು ಸವಾಲಾಗಿದೆ.
ಅಜಿಂಕ್ಯ ರಹಾನೆ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಸರಣಿ ವೇಳೆ ಫಿಟ್ ಆಗುವ ವಿಶ್ವಾಸದಲ್ಲಿದ್ದಾರೆ. ಆಯ್ಕೆ ಸಮಿತಿಯು ರೋಹಿತ್ ಶರ್ಮರ ಸ್ಥಾನದಲ್ಲಿ ಶಿಖರ್ ಧವನ್ ಇಲ್ಲವೇ ಟೆಸ್ಟ್‌ನಲ್ಲಿ ತ್ರಿಶತಕ ಬಾರಿಸಿರುವ ಕರುಣ್ ನಾಯರ್‌ರನ್ನು ಆಯ್ಕೆ ಮಾಡುವ ನಿರೀಕ್ಷೆಯಿದೆ.