ರಣಜಿ ಟ್ರೋಫಿ: ಕರ್ನಾಟಕವನ್ನು ಕೆಡವಿದ ತಮಿಳುನಾಡು ಸೆಮಿಫೈನಲ್‌ಗೆ
ವಿಶಾಖಪಟ್ಟಣ, ಡಿ.24: ಕಳೆದ ಎರಡು ದಿನಗಳಲ್ಲಿ 33 ವಿಕೆಟ್‌ಗಳ ಪತನಕ್ಕೆೆ ಸಾಕ್ಷಿಯಾದ ಡಾ.ವೈ.ಎಸ್. ರಾಜಶೇಖರ್ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನ ಹಸಿರು ಪಿಚ್‌ನಲ್ಲಿ ತಮಿಳುನಾಡು ತಂಡ ಕರ್ನಾಟಕವನ್ನು 7 ವಿಕೆಟ್‌ಗಳ ಅಂತರದಿಂದ ಮಣಿಸಿದೆ. ಈ ಮೂಲಕ 2016-17ನೆ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟ ಮೊದಲ ತಂಡ ಎನಿಸಿಕೊಂಡಿದೆ.
ಎರಡೇ ದಿನದಲ್ಲಿ ಕೊನೆಗೊಂಡ ಕ್ವಾರ್ಟರ್ ಫೈನಲ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ತಮಿಳುನಾಡು ತಂಡ 2003ರ ನವೆಂಬರ್ ಬಳಿಕ ಮೊದಲ ಬಾರಿ ಕರ್ನಾಟಕವನ್ನು ಸೋಲಿಸಿ ಅಂತಿಮ ನಾಲ್ಕರ ಘಟ್ಟ ತಲುಪಿತು. ಎರಡನೆ ದಿನದಾಟವಾದ ಶನಿವಾರ ತಮಿಳುನಾಡು ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 152 ರನ್‌ಗೆ ನಿಯಂತ್ರಿಸಲು ಯಶಸ್ವಿಯಾದ ಕರ್ನಾಟಕ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಯಿತು.
ಮೊದಲ ಇನಿಂಗ್ಸ್‌ನಲ್ಲಿ ಕೇವಲ 88 ರನ್‌ಗೆ ಆಲೌಟಾಗಿದ್ದ ಕರ್ನಾಟಕ 2ನೆ ಇನಿಂಗ್ಸ್‌ನಲ್ಲಿ 150 ರನ್‌ಗೆ ಆಲೌಟಾಯಿತು. ಗೆಲ್ಲಲು 87 ರನ್ ಸವಾಲು ಪಡೆದ ತಮಿಳುನಾಡು ಆರಂಭಿಕ ಆಘಾತದಿಂದ ಚೇತರಿಸಿಕೊಂಡು 20ನೆ ಓವರ್‌ನಲ್ಲಿ ಜಯಭೇರಿ ಬಾರಿಸಿತು.
4 ವಿಕೆಟ್‌ಗಳ ನಷ್ಟಕ್ಕೆ 111 ರನ್‌ನಿಂದ ಮೊದಲ ಇನಿಂಗ್ಸ್ ಆರಂಭಿಸಿದ ತಮಿಳುನಾಡು ತಂಡ ನಿನ್ನೆಯ ಮೊತ್ತಕ್ಕೆ ಕೇವಲ 41 ರನ್ ಸೇರಿಸಿ ಆಲೌಟಾಯಿತು. ಶ್ರೀನಾಥ್ ಅರವಿಂದ್, ವಿನಯಕುಮಾರ್ ಹಾಗೂ ಶ್ರೇಯಸ್ ಗೋಪಾಲ್ ತಮಿಳುನಾಡು ಬ್ಯಾಟಿಂಗ್‌ಗೆ ಸವಾಲಾದರು.
ಕರ್ನಾಟಕ 2ನೆ ಇನಿಂಗ್ಸ್‌ನಲ್ಲಿ ಉತ್ತಮ ಆರಂಭವನ್ನೇ ಪಡೆದಿತ್ತು. ಕೆಎಲ್ ರಾಹುಲ್ ಹಾಗೂ ಕೆ.ಅಬ್ಬಾಸ್ 2ನೆ ವಿಕೆಟ್‌ಗೆ 61 ರನ್ ಜೊತೆಯಾಟ ನಡೆಸಿದರು. ಕೆ.ವ್ನಿೇಶ್ ಹಾಗೂ ಟಿ. ನಟರಾಜನ್ ಸಾಂಘಿಕ ದಾಳಿ ನಡೆಸಿ ಕರ್ನಾಟಕವನ್ನು ಸತತ 2ನೆ ಬಾರಿ ಕನಿಷ್ಠ ಮೊತ್ತಕ್ಕೆ ಕಟ್ಟಿಹಾಕಿದರು. ಕರ್ನಾಟಕದ ಪರ ರಾಹುಲ್ ಸರ್ವಾಧಿಕ ರನ್(77) ಬಾರಿಸಿದರೆ, ಅಬ್ಬಾಸ್(15) ಎರಡನೆ ಗರಿಷ್ಠ ಸ್ಕೋರ್ ದಾಖಲಿಸಿದರು.
ಗೆಲ್ಲಲು ಸುಲಭ ಸವಾಲು ಪಡೆದ ತಮಿಳುನಾಡು ಪರ ಅಭಿನವ್ ಮುಕುಂದ್ ಬದಲಿಗೆ ಬಾಬಾ ಅಪರಾಜಿತ್ ಅವರು ಸೂರ್ಯಪ್ರಕಾಶ್‌ರೊಂದಿಗೆ ಇನಿಂಗ್ಸ್ ಆರಂಭಿಸಿದರು. ಈ ಜೋಡಿ 18 ರನ್ ಗಳಿಸಿದಾಗ ಅರವಿಂದ್ ಅವರು ಅಪರಾಜಿತ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಕೌಶಿಕ್ ಗಾಂಧಿ ಹಾಗೂ ಅಪರಾಜಿತ್ ಅಲ್ಪ ಮೊತ್ತಕ್ಕೆ ಔಟಾದಾಗ ತಮಿಳುನಾಡು 35 ರನ್‌ಗೆ 3 ವಿಕೆಟ್ ಕಳೆದುಕೊಂಡಿತ್ತು.
ಬಾಬಾ ಇಂದ್ರಜಿತ್(16) ಜೊತೆ ಕೈಜೋಡಿಸಿದ ಭಾರತದ ಮಾಜಿ ಟೆಸ್ಟ್ ಆರಂಭಿಕ ದಾಂಡಿಗ ದಿನೇಶ್ ಕಾರ್ತಿಕ್(ಅಜೇಯ 41,30ಎಸೆತ, 5 ಬೌಂಡರಿ, 2 ಸಿಕ್ಸರ್)4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 52 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಸುಸ್ಥಿತಿಯಲ್ಲಿ ಜಾರ್ಖಂಡ್:
ವಡೋದರ, ಡಿ.24: ಶಹಬಾಝ್ ನದೀಮ್ 7 ವಿಕೆಟ್ ಗೊಂಚಲು ಹಾಗೂ ವಿರಾಟ್ ಸಿಂಗ್ ಹಾಗೂ ಇಶಾಂಕ್ ಜಗ್ಗಿ ಅವರ ಅಜೇಯ ಅರ್ಧಶತಕದ ನೆರವಿನಿಂದ ಜಾರ್ಖಂಡ್ ತಂಡ ಹರ್ಯಾಣ ವಿರುದ್ಧದ 4ನೆ ಕ್ವಾರ್ಟರ್‌ಫೈನಲ್‌ನಲ್ಲಿ ಸುಸ್ಥಿತಿಯಲ್ಲಿದೆ.
79 ರನ್‌ಗೆ 7 ವಿಕೆಟ್ ಕಬಳಿಸಿದ ನದೀಮ್ ಹರ್ಯಾಣವನ್ನು 258 ರನ್‌ಗೆ ಆಲೌಟ್ ಮಾಡಿದರು. ಇದಕ್ಕೆ ಉತ್ತರವಾಗಿ ಜಾರ್ಖಂಡ್ ತಂಡ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿದೆ. 4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 146 ರನ್ ಗಳಿಸಿರುವ ವಿರಾಟ್ ಹಾಗೂ ಜಗ್ಗಿ ತಂಡವನ್ನು ಆಧರಿಸಿದರು.
ಒಡಿಶಾ ವಿರುದ್ಧ ಗುಜರಾತ್ ಮೇಲುಗೈ: ಜೈಪುರದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ 3ನೆ ಕ್ವಾರ್ಟರ್‌ಫೈನಲ್‌ನಲ್ಲಿ ಜಸ್‌ಪ್ರೀತ್ ಬುಮ್ರಾ ಅವರ ಸ್ಫೂರ್ತಿಯುತ ಸ್ಪೆಲ್‌ನ ನೆರವಿನಿಂದ ಗುಜರಾತ್ ತಂಡ ಒಡಿಶಾದ ವಿರುದ್ಧ ಮೇಲುಗೈ ಸಾಧಿಸಿದೆ. ಗುಜರಾತ್‌ನ ಮೊದಲ ಇನಿಂಗ್ಸ್ ಸ್ಕೋರ್ 263 ರನ್‌ಗೆ ಉತ್ತರಿಸಹೊರಟಿರುವ ಒಡಿಶಾ ತಂಡ ಬುಮ್ರಾ(4-33) ಹಾಗೂ ರುಶ್ ಕಲಾರಿಯ(2-32) ದಾಳಿಗೆ ಸಿಲುಕಿ 184 ರನ್‌ಗೆ 8 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಸೂರ್ಯಕಾಂತ್ ಪ್ರಧಾನ್(47 ರನ್, 27 ಎಸೆತ) ಹಾರ್ದಿಕ್ ಪಟೇಲ್ ಓವರ್‌ನಲ್ಲಿ 4 ಸಿಕ್ಸರ್‌ಗಳನ್ನು ಸಿಡಿಸಿದರು.
ಮುಂಬೈಗೆ ಹೈದರಾಬಾದ್ ಮೂಗುದಾರ: ಜೈಪುರದಲ್ಲಿ ನಡೆದ ಮೊದಲ ಕ್ವಾರ್ಟರ್‌ಫೈನಲ್‌ನಲ್ಲಿ ಹೈದರಾಬಾದ್ ತಂಡ ಮುಂಬೈ ವಿರುದ್ಧ ಹಿಡಿತ ಸಾಧಿಸಿದೆ.
5 ವಿಕೆಟ್‌ಗೆ 250ರನ್‌ನಿಂದ ಬ್ಯಾಟಿಂಗ್ ಆರಂಭಿಸಿದ ಮುಂಬೈ ತಂಡ ಹೈದರಾಬಾದ್‌ನ ಶಿಸ್ತುಬದ್ದ ಬೌಲಿಂಗ್‌ಗೆ ತತ್ತರಿಸಿ 294 ರನ್‌ಗೆ ಆಲೌಟಾಯಿತು. ಸಿದ್ದೇಶ್ ಲಾಡ್(110) ಹಾಗೂ ಅಭಿಷೇಕ್ ನಾಯರ್(59) ತಂಡಕ್ಕೆ ಪ್ರಮುಖ ಕಾಣಿಕೆ ನೀಡಿದರು. ಚಾಮಾ ಮಿಲಿಂದ್ 5 ವಿಕೆಟ್ ಹಾಗೂ ಮುಹಮ್ಮದ್ ಸಿರಾಜ್ 4 ವಿಕೆಟ್ ಕಬಳಿಸಿದರು.
ಹೈದರಾಬಾದ್ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿದ್ದು, ತನ್ಮಯ್ ಅಗರ್‌ವಾಲ್ ತಾಳ್ಮೆಯ ಇನಿಂಗ್ಸ್(ಅಜೇಯ 63) ಆಡಿದ್ದಾರೆ. ನಾಯರ್ 26 ರನ್‌ಗೆ 3 ವಿಕೆಟ್ ಪಡೆದು ಆಲ್‌ರೌಂಡ್ ಪ್ರದರ್ಶನ ನೀಡಿದರು.
ಕಾರ್ತಿಕ್‌ಗೆ 100ನೆ ರಣಜಿ ಪಂದ್ಯ ಸ್ಮರಣೀಯ
ಕರ್ನಾಟಕ ವಿರುದ್ಧ ತಮಿಳುನಾಡು ತಂಡ ಭರ್ಜರಿ ಗೆಲುವು ಸಾಧಿಸಲು ನೆರವಾದ ದಿನೇಶ್ ಕಾರ್ತಿಕ್ 100ನೆ ರಣಜಿ ಟ್ರೋಫಿ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು.
ಕಾರ್ತಿಕ್ 2002ರಲ್ಲಿ 16ರ ಹರೆಯದಲ್ಲಿ ರಣಜಿ ಕ್ರಿಕೆಟಿಗೆ ಕಾಲಿಟ್ಟಿದ್ದರು. ತಮಿಳುನಾಡು ತಂಡದಲ್ಲಿ ಅವರ ಸಹ ಆಟಗಾರರಾಗಿದ್ದ ಎಸ್. ಸುರೇಶ್, ಎಸ್.ಶ್ರೀರಾಮ್, ಜೆ ಮದನ್‌ಗೋಪಾಲ್, ಗೋಪಾಲಕೃಷ್ಣನ್ ಹಾಗೂ ಹೇಮಂಗ್ ಬದಾನಿ ಎಲ್ಲರೂ ಇದೀಗ ಕೋಚ್ ಆಗಿದ್ದಾರೆ. ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಮದನ್‌ಗೋಪಾಲ್ ಹಾಗೂ ಗೋಪಾಲಕೃಷ್ಣನ್ ಕಾರ್ತಿಕ್‌ಗೆ ಕೋಚಿಂಗ್ ನೀಡಿದ್ದರು.
14 ವರ್ಷಗಳ ರಣಜಿ ಪಯಣದಲ್ಲಿ ಕಾರ್ತಿಕ್ ಶುಕ್ರವಾರ ಹೊಸ ಮೈಲುಗಲ್ಲು ತಲುಪಿದರು. ಬದ್ಧ ಎದುರಾಳಿ ಕರ್ನಾಟಕದ ವಿರುದ್ಧ ಚೊಚ್ಚಲ ಪಂದ್ಯ ಆಡಿದರು.
ಕಾರ್ತಿಕ್ ತಮಿಳುನಾಡು ರಾಜ್ಯ ತಂಡದಲ್ಲಿರುವ ಹಿರಿಯ ಆಟಗಾರ. ಬೆರಳು ಗಾಯದಿಂದಾಗಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಗಾಯಾಳು ವಿಕೆಟ್‌ಕೀಪರ್ ವೃದ್ದಿಮಾನ್ ಸಹಾರ ಬದಲಿಗೆ ಆಡುವ ಅವಕಾಶದಿಂದ ವಂಚಿತರಾಗಿದ್ದರು. ಟೀಮ್ ಇಂಡಿಯಾಕ್ಕೆ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಗಿ ವಾಪಸಾಗಲು ಸಾಧ್ಯವಾಗದೇ ಇರುವುದಕ್ಕೆ ಕಾರ್ತಿಕ್‌ಗೆ ತುಂಬಾ ಬೇಸರವಿದೆ.
111