×
Ad

ಎಂಸಿಜಿಯಲ್ಲಿ ಗಮನ ಸೆಳೆದ ಧೋನಿಯ ಪಾಕ್ ಅಭಿಮಾನಿ!

Update: 2016-12-28 19:11 IST

ವೆುಲ್ಬೋರ್ನ್, ಡಿ.28: ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಯೊಬ್ಬ ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ(ಎಂಸಿಜಿ)ನಡೆಯುತ್ತಿರುವ ಎರಡನೆ ಟೆಸ್ಟ್ ಪಂದ್ಯದಲ್ಲಿ ಪಾಕ್ ತಂಡವನ್ನು ಬೆಂಬಲಿಸಲು ಇಲ್ಲಿಗೆ ಬಂದಿದ್ದಾರೆ. ಆದರೆ, ಅವರು ತಾನು ಧರಿಸಿದ್ದ ಜರ್ಸಿಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಪಾಕಿಸ್ತಾನ ಕ್ರಿಕೆಟ್‌ನ ಏಕದಿನ ತಂಡದ ಜರ್ಸಿ ಧರಿಸಿರುವ ಅಭಿಮಾನಿ ಜರ್ಸಿಯ ಹಿಂಭಾಗದಲ್ಲಿ ಭಾರತದ ಸೀಮಿತ ಓವರ್‌ನ ನಾಯಕ ಎಂಎಸ್ ಧೋನಿಯ ಹೆಸರು ಹಾಗೂ ಧೋನಿಯ ಜರ್ಸಿಯ ನಂಬರ್ 7ನ್ನು ಹೊಂದಿದ್ದಾರೆ.

ಪಾಕ್ ಅಭಿಮಾನಿ ಧರಿಸಿದ್ದ ಈ ಜರ್ಸಿಯ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಉಭಯ ದೇಶಗಳ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದೆ. ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವೆ ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಇದೊಂದು ಅಪಾಯಕಾರಿ ಹೆಜ್ಜೆ ಎನ್ನಬಹುದು.

ಈ ತಿಂಗಳಾರಂಭದಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿ ರಿಪಾನ್ ಚೌಧರಿ ಕ್ರಿಕೆಟ್ ಪಂದ್ಯವೊಂದರಲ್ಲಿ ಪಾಕ್ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಹೆಸರಿದ್ದ ಜರ್ಸಿಯನ್ನು ಧರಿಸಿದ್ದರೆಂಬ ಕಾರಣಕ್ಕೆ ಅಸ್ಸಾಂ ಪೊಲೀಸರು ಆತನನ್ನು ಬಂಧಿಸಿದ್ದರು. ‘‘ಇಂತಹ ಘಟನೆ ನಡೆದಿರುವುದು ಅವಮಾನಕಾರಿ. ಕ್ರಿಕೆಟ್‌ನೊಂದಿಗೆ ರಾಜಕೀಯ ಬೆರೆಸುವುದು ಸರಿಯಲ್ಲ’’ ಎಂದು ಪಾಕ್ ಆಲ್‌ರೌಂಡರ್ ಅಫ್ರಿದಿ ಪ್ರತಿಕ್ರಿಯಿಸಿದ್ದರು.

  ಫೆಬ್ರವರಿಯಲ್ಲಿ ನಡೆದ ಇಂತಹದ್ದೇ ಘಟನೆಯೊಂದರಲ್ಲಿ ಭಾರತದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅವರ ಕಟ್ಟಾ ಅಭಿಮಾನಿಯಾಗಿರುವ ಪಾಕಿಸ್ತಾನದ ವ್ಯಕ್ತಿಯೊಬ್ಬ ತನ್ನ ಮನೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದ.ಈ ತಪ್ಪಿಗೆ ಪಾಕ್ ಸರಕಾರ ಕೊಹ್ಲಿಯ ಪಾಕ್ ಅಭಿಮಾನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆ ಬಳಿಕ ಆತನಿಗೆ ಪಾಕ್‌ನ ಪಂಜಾಬ್ ಪ್ರಾಂತದ ಒಕಾರ ನ್ಯಾಯಾಲಯ ಜಾಮೀನಿನಲ್ಲಿ ಬಿಡುಗಡೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News