2016: ಭಾರತದ ಹಾಕಿ ತಂಡಕ್ಕೆ ಆಶಾದಾಯಕ ವರ್ಷ
ಹೊಸದಿಲ್ಲಿ, ಡಿ.28: ಕೆಲವು ಬಾರಿ ನಿರಾಶಾಯಕ ಪ್ರದರ್ಶನ ನೀಡಿರುವ ಹೊರತಾಗಿಯೂ ಭಾರತೀಯ ಹಾಕಿ ತಂಡ ಈ ವರ್ಷ ಮೈದಾನದ ಹೊರಗೆ ಹಾಗೂ ಒಳಗೆ ಉತ್ತಮ ಸಾಧನೆಯನ್ನು ಮಾಡಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಐತಿಹಾಸಿಕ ಬೆಳ್ಳಿ ಪದಕ ಹಾಗೂ 15 ವರ್ಷಗಳ ಬಳಿಕ ಜೂನಿಯರ್ ವಿಶ್ವಕಪ್‌ನ್ನು ಜಯಿಸಿದ್ದು ಭಾರತದ ಅತಿ ದೊಡ್ಡ ಸಾಧನೆಯಾಗಿದೆ.
ಮಾಜಿ ಹಾಕಿ ಇಂಡಿಯಾ ಮುಖ್ಯಸ್ಥ ನರೇಂದ್ರ ಬಾತ್ರಾ ಅಂತಾರಾಷ್ಟ್ರೀಯ ಹಾಕಿ ಫೆಡೇಶನ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ವರ್ಷದ ನವೆಂಬರ್‌ನಲ್ಲಿ ಬಾತ್ರಾ ಅವಿರೋಧವಾಗಿ ಎಫ್‌ಐಎಚ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಹಾಕಿ ಫೆಡರೇಶನ್ ಸ್ಥಾಪನೆಯಾದ ಬಳಿಕ ಫೆಡರೇಶನ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಏಷ್ಯಾ ಹಾಗೂ ಭಾರತದ ಮೊದಲ ಅಧಿಕಾರಿಯಾಗಿದ್ದಾರೆ.
ಒಲಿಂಪಿಕ್ಸ್ ವರ್ಷವಾಗಿದ್ದ 2016ರಲ್ಲಿ ಭಾರತದ ಹಾಕಿ ತಂಡದಿಂದ ಭಾರೀ ನಿರೀಕ್ಷೆ ಮಾಡಲಾಗಿತ್ತು. ಆದರೆ, ಕ್ವಾರ್ಟರ್ ಫೈನಲ್‌ನಲ್ಲಿ ಸೋತು ನಿರ್ಗಮಿಸಿತ್ತು. ಗುವಾಹಟಿಯಲ್ಲಿ ನಡೆದ ಸ್ಯಾಫ್ ಗೇಮ್ಸ್‌ನ ಫೈನಲ್‌ನಲ್ಲಿ ಬದ್ಧ ಎದುರಾಳಿ ಪಾಕಿಸ್ತಾನಕ್ಕೆ ಶರಣಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು. ಸ್ಯಾಫ್ ಗೇಮ್ಸ್‌ನ ಮೂಲಕ ಗೋಲ್‌ಕೀಪರ್ ವಿಕಾಸ್ ದಾಹಿಯಾ ಹಾಗೂ ಅಜಿತ್ ಕುಮ್ ಪಾಂಡೆ ಭಾರತದ ಸೀನಿಯರ್ ತಂಡದಲ್ಲಿ ಸ್ಥಾನ ಪಡೆದಿದ್ದರು.
ಮಲೇಷ್ಯಾದಲ್ಲಿ ನಡೆದ ಅಝ್ಲಾನ್ ಹಾಕಿ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದ ಭಾರತ ಪ್ರಶಸ್ತಿ ಸುತ್ತಿನಲ್ಲಿ ಆಸ್ಟ್ರೇಲಿಯದ ವಿರುದ್ಧ 0-4 ಅಂತರದಿಂದ ಸೋತಿತ್ತು. ಚಾಂಪಿಯನ್ಸ್ ಟ್ರೋಫಿಯಲ್ಲಿ ಶಕ್ತಿಮೀರಿ ಪ್ರದರ್ಶನ ನೀಡಿದ್ದ ಭಾರತ ಫೈನಲ್‌ನಲ್ಲಿ ಸೋತಿತ್ತು. ಆದರೆ, ಮೊದಲ ಬಾರಿ ಬೆಳ್ಳಿ ಪದಕ ಜಯಿಸಿದ್ದ ಭಾರತ ಐತಿಹಾಸಿಕ ಸಾಧನೆ ಮಾಡಿತ್ತು.
ಕಳಪೆ ಫಾರ್ಮ್ ಹಾಗೂ ವಿವಾದಗಳಿಂದ ಸುದ್ದಿಯಾಗಿದ್ದ ಸರ್ದಾರ್ ಸಿಂಗ್ ಬದಲಿಗೆ ಗೋಲ್‌ಕೀಪರ್ ಶ್ರೀಜೇಶ್ ಭಾರತದ ನಾಯಕನಾಗಿ ರಿಯೋ ಗೇಮ್ಸ್‌ಗೆ ಆಯ್ಕೆಯಾದರು. ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಭಾರತ ಕ್ವಾರ್ಟರ್ ಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧ 1-3 ರಿಂದ ಸೋತಿತ್ತು. ಭಾರತದ ಮಹಿಳಾ ಹಾಕಿ ತಂಡ 36 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದು ಇತಿಹಾಸ ಬರೆದಿತ್ತು. ಆದರೆ, ಒಲಿಂಪಿಕ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಏಷ್ಯನ್ ಚಾಂಪಿಯನ್ ಟ್ರೋಫಿಯಲ್ಲಿ ಪಾಕಿಸ್ತಾನವನ್ನು 5-2 ರಿಂದ ಮಣಿಸಿದ್ದ ಭಾರತ ಎರಡನೆ ಬಾರಿ ಟ್ರೋಫಿ ಜಯಿಸಿತ್ತು.