×
Ad

ಮುಂಬೈ ರಣಜಿ ತಂಡಕ್ಕೆ 17ರ ಬಾಲಕ ಆಯ್ಕೆ!

Update: 2016-12-28 23:27 IST

ಮುಂಬೈ, ಡಿ.28: ತಮಿಳುನಾಡು ವಿರುದ್ಧದ ನಿರ್ಣಾಯಕ ರಣಜಿ ಟ್ರೋಫಿ ಸೆಮಿ ಫೈನಲ್ ಪಂದ್ಯಕ್ಕೆ 17ರ ಹರೆಯದ ಪ್ರಥ್ವಿ ಶಾ ಹಾಲಿ ಚಾಂಪಿಯನ್ ಮುಂಬೈ ತಂಡಕ್ಕೆ ಆಯ್ಕೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಜ.1 ರಂದು ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂನಲ್ಲಿ ಸೆಮಿ ಫೈನಲ್ ಪಂದ್ಯ ಆರಂಭವಾಗುತ್ತದೆ. ಪ್ರಥ್ವಿ ಶಾ ಆರಂಭಿಕ ದಾಂಡಿಗ ಕೇವಿನ್ ಡಿ’ಆಲ್ಮೇಡಾ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಹೈದರಾಬಾದ್ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ 30 ರನ್‌ಗಳಿಂದ ಗೆಲುವು ಸಾಧಿಸಿರುವ ತಂಡವನ್ನೇ ಉಳಿಸಿಕೊಳ್ಳಲಾಗಿದೆ.

ಡಿ’ಆಲ್ಮೇಡಾ 9 ಹಾಗೂ 1 ರನ್ ಗಳಿಸಿ ಕೆಲವು ಕ್ಯಾಚ್‌ಗಳನ್ನು ಕೈಚೆಲ್ಲುವುದರೊಂದಿಗೆ ಲಭಿಸಿದ ಅವಕಾಶವನ್ನು ಬಳಸಿಕೊಳ್ಳಲಿಲ್ಲ. ಶಾ 2013ರಲ್ಲಿ ಮುಂಬೈನಲ್ಲಿ ಹ್ಯಾರಿಸ್ ಶೀಲ್ಡ್ ಟೂರ್ನಿಯಲ್ಲಿ 546 ರನ್ ಗಳಿಸಿ ದೇಶದ ಗಮನವನ್ನು ತನ್ನತ್ತ ಸೆಳೆದಿದ್ದರು.

ಶಾ ಸಹ ಆಟಗಾರರಾದ ಸರ್ಫರಾಝ್ ಮುಂಬೈ ತಂಡದಲ್ಲಿ ಆಡುವ 11ರ ಬಳಗದಲ್ಲಿ ನಿರಂತರವಾಗಿ ಸ್ಥಾನ ಪಡೆಯಲು ವಿಫಲವಾಗಿ ಉತ್ತರ ಪ್ರದೇಶ ತಂಡಕ್ಕೆ ಸೇರ್ಪಡೆಯಾಗಿದ್ದರು. ಅರ್ಮಾನ್ ಜಾಫರ್ ಈ ವರ್ಷ 3 ಪಂದ್ಯಗಳನ್ನು ಆಡಿದ್ದರೂ 6 ಇನಿಂಗ್ಸ್‌ಗಳಲ್ಲಿ ಕೇವಲ 44 ರನ್ ಗಳಿಸಿದ್ದರು.

 ಶಾ ಇತ್ತೀಚೆಗೆ ಏಷ್ಯಾಕಪ್‌ನ್ನು ಜಯಿಸಿದ್ದ ಅಂಡರ್-19 ತಂಡದಲ್ಲಿದ್ದರು. ಶಾಲಾ ಹಾಗೂ ಕ್ಲಬ್ ಮಟ್ಟದಲ್ಲಿ ಆಡಿರುವ ಶಾ ಇದೀಗ ಮುಂಬೈ ರಣಜಿ ಡ್ರೆಸ್ಸಿಂಗ್ ರೂಮ್‌ಗೆ ಪ್ರವೇಶ ಪಡೆದಿರುವ ಕಿರಿಯ ಆಟಗಾರನಾಗಿದ್ದಾರೆ.

ಮುಂಬೈ ರಣಜಿ ತಂಡ: ಆದಿತ್ಯ ತಾರೆ(ನಾಯಕ), ಪ್ರಫುಲ್ ವಘಾಲೆ, ಶ್ರೇಯಸ್ ಐಯ್ಯರ್, ಸೂರ್ಯಕುಮಾರ್ ಯಾದವ್, ಸಿದ್ದೇಶ್ ಲಾಡ್, ಅಭಿಷೇಕ್ ನಾಯರ್, ಶಾರ್ದೂಲ್ ಠಾಕೂರ್, ಬಲ್ವಿಂದರ್ ಸಿಂಗ್ ಸಂಧು, ತುಷಾರ್ ದೇಶಪಾಂಡೆ, ರೊಸ್ಟನ್ ಡಿಯಾಸ್, ಸುಫಿಯನ್ ಶೇಕ್, ವಿಜಯ್ ಗೊಹಿಲ್, ಅಕ್ಷರ್ ಗಿರಪ್, ಎಕ್ತಾನಾಥ್ ಕೇರ್ಕರ್, ಪ್ರಥ್ವಿ ಶಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News