×
Ad

ಕಾಂಬ್ಳಿ ದಲಿತ ಎಂದು ನೆನಪಿಸಿದ ಬಿಜೆಪಿ ಸಂಸದನಿಗೆ ಸಿಕ್ಕಿದ ಪ್ರತಿಕ್ರಿಯೆ ಏನು ?

Update: 2016-12-29 16:21 IST

ಹೊಸದಿಲ್ಲಿ,ಡಿ.29: ಜಾತಿ-ಧರ್ಮಗಳ ಅಂತರಗಳನ್ನು ಬದಿಗಿಟ್ಟು ಯಾವುದೇ ಮನಸಿನಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಇತರ ಸಮುದಾಯಗಳ ಜನರನ್ನು ತಲುಪುವ ಪ್ರಯತ್ನಗಳು ನಡೆಯುತ್ತಿರುವಾಗ ಬಿಜೆಪಿ ಸಂಸದ ಉದಿತ್ ರಾಜ್ ಅವರು ಇತ್ತೀಚಿಗೆ ಪ್ರತಿಗಾಮಿ ಹೇಳಿಕೆಯೊಂದನ್ನು ನೀಡಿದ್ದಾರೆ. ಇದಕ್ಕೆ ಟ್ವಿಟರಿಗರು ಸರಿಯಾಗಿಯೇ ಝಾಡಿಸಿದ್ದಾರೆ.

ಮಾಜಿ ಭಾರತೀಯ ಕ್ರಿಕೆಟಿಗ ವಿನೋದ್ ಕಾಂಬ್ಳಿಯವರನ್ನು ಗುರಿಯಾಗಿಸಿಕೊಂಡು ಟ್ವೀಟಿಸಿದ್ದ ರಾಜ್, ತಾನು ‘ದಲಿತ ’ಎನ್ನುವುದನ್ನು ಒಪ್ಪಿಕೊಳ್ಳಲು ಕಾಂಬ್ಳಿ ನಾಚಿಕೆ ಪಟ್ಟುಕೊಳ್ಳಬಾರದು ಮತ್ತು ಇದೇ ಕಾರಣದಿಂದ ತನ್ನನ್ನು ಭಾರತೀಯ ಕ್ರಿಕೆಟ್‌ನಿಂದ ಹೊರದಬ್ಬಲಾಗಿತ್ತು ಎನ್ನುವುದನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದರು.

 ಕಾಂಬ್ಳಿ ದಿಲ್ಲಿಯ ಪ್ರಮುಖ ದಲಿತ ನಾಯಕನಾಗಿರುವ ರಾಜ್ ಟ್ವೀಟ್‌ಗೆ ಘನತೆಯಿಂದ ಉತ್ತರಿಸಿದ್ದಾರೆ. ‘‘ಸ್ವಾಮಿ ರಾಜ್ ಅವರೇ, ನಿಮ್ಮ ಯಾವುದೇ ಹೇಳಿಕೆಗಳನ್ನೂ ನಾನು ಬೆಂಬಲಿಸುವುದಿಲ್ಲ. ಹೀಗಾಗಿ ನನ್ನ ಹೆಸರನ್ನು ಬಳಸಿಕೊಳ್ಳುವುದರಿಂದ ದೂರವಿರುವಂತೆ ನಿಮ್ಮನ್ನು ಕೋರಿಕೊಳ್ಳುತ್ತೇನೆ ’’ ಎಂದು ಕಾಂಬ್ಳಿ ರಾಜ್‌ಗೆ ಸ್ಪಷ್ಟಪಡಿಸಿದ್ದಾರೆ.

 ಇಂದಿನ ಇಂಟರ್‌ನೆಟ್ ಯುಗದಲ್ಲಿ ಯಾವುದೂ ಯಾರದೇ ಗಮನಕ್ಕೆ ಬಾರದಿರುವುದಿಲ್ಲ. ಹಾಗೆ ರಾಜ್-ಕಾಂಬ್ಳಿ ನಡುವಿನ ಪುಟ್ಟ ಚಾಟ್ ಕೂಡ ಎಲ್ಲರ ಗಮನ ಸೆಳೆದಿದೆ. ಕ್ಷಣಾರ್ಧದಲ್ಲಿ ಇಂತಹ ಅಸಂಬದ್ಧ ಟ್ವೀಟ್‌ಗಾಗಿ ಟ್ವಿಟರ್ ಬಳಕೆದಾರರು ರಾಜ್‌ರನ್ನು ತಮ್ಮ ಟ್ವಿಟರ್ ಬಾಣಗಳಿಂದ ಚೆನ್ನಾಗಿಯೇ ಝಾಡಿಸಿದ್ದಾರೆ. ಇದೇ ವೇಳೆ ಪ್ರತಿಯೊಬ್ಬರೂ ಕಾಂಬ್ಳಿಯವರನ್ನು ಮತ್ತು ಅವರ ತೂಕದಿಂದ ಕೂಡಿದ ಉತ್ತರವನ್ನು ಬೆಂಬಲಿಸುವ ಮೂಲಕ ಮನವನ್ನು ಮುದಗೊಳಿಸುವ ಅಚ್ಚರಿಯನ್ನೂ ನೀಡಿದ್ದಾರೆ.

 ರಾಜ್ ಜಾತೀಯತೆಯನ್ನು ಪ್ರಚಾರ ಮಾಡುತ್ತಿದ್ದಾರೆ ಮತ್ತು ಒಡಕನ್ನು ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟ್ವಿಟರಿಗರು ಕುಟುಕಿದ್ದಾರೆ. ಅವರ ಪ್ರತಿಗಾಮಿ ಮನಃಸ್ಥಿತಿಯನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. ಪ್ರತಿಷ್ಠಿತ ಜೆನ್‌ಯುನಲ್ಲಿ ಓದಿರುವ ವ್ಯಕ್ತಿಯ ಬಾಯಿಯಿಂದ ಇಂತಹ ಹೇಳಿಕೆಗಳು ಹೊರಬಿದ್ದಿರುವದಕ್ಕೆ ಹಲವರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News